Advertisement

Bantwal ತಾಲೂಕಿನಲ್ಲಿ 6 ತಿಂಗಳಲ್ಲಿ 35 ಮಂದಿಗೆ ಡೆಂಗ್ಯೂ

12:08 AM Jul 08, 2024 | Team Udayavani |

ಬಂಟ್ವಾಳ: ಬಂಟ್ವಾಳದ ಕೆಲವು ಗ್ರಾಮೀಣ ಭಾಗಗಳಲ್ಲಿ ಈ ಬಾರಿ ಡೆಂಗ್ಯೂ ಹಾವಳಿ ವ್ಯಾಪಕವಾಗಿ ಕಂಡುಬಂದಿದ್ದು, ಆದರೆ ಡೆಂಗ್ಯು ಪೀಡಿತ ಬಹುತೇಕ ಮಂದಿ ಖಾಸಗಿ ಆಸ್ಪತ್ರೆಗಳಿಂದ ಚಿಕಿತ್ಸೆ ಪಡೆಯುವುದರಿಂದ ಆರೋಗ್ಯ ಇಲಾಖೆಯಲ್ಲಿ ಖಚಿತ ಲೆಕ್ಕ ಇಲ್ಲವಾಗಿದೆ. ಇಲಾಖೆ ಮಾಹಿತಿ ಪ್ರಕಾರ 2024ರ ಜನವರಿ ಯಿಂದ ಈ ವರೆಗೆ 162 ಶಂಕಿತ ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ 35 ಮಂದಿಗೆ ಡೆಂಗ್ಯೂ ಖಚಿತ ಗೊಂಡಿತ್ತು. ಆದರೆ ಖಾಸಗಿ ಯನ್ನೂ ಸೇರಿಸಿದರೆ ಈ ಸಂಖ್ಯೆ ಮೂರು ಪಟ್ಟು ಹೆಚ್ಚಾಗುವ ಸಾಧ್ಯತೆ ಇದೆ.

Advertisement

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಸ್ವಲ್ಪ ಹೆಚ್ಚು ಪ್ರಕರಣಗಳು ಕಂಡುಬಂದಿವೆ. 2023ರ ಜೂನ್‌ವರೆಗೆ ಸುಮಾರು 150 ಶಂಕಿತ ಪ್ರಕರಣಗಳು ಕಂಡುಬಂದಿದ್ದವು. ಈ ವರ್ಷ ಇಲ್ಲಿಯವರೆಗೆ ಡೆಂಗ್ಯೂ ದೃಢ ಅಥವಾ ಶಂಕಿತ ಪ್ರಕರಣಗಳಲ್ಲಿ ಯಾರೂ ಮೃತಪಡದಿರುವುದು ಸಮಾಧಾನಕರ ಸಂಗತಿ.

ಡೆಂಗ್ಯೂ ಖಚಿತತೆಗೆ ಭಿನ್ನ ಮಾದರಿ
ಆರೋಗ್ಯ ಇಲಾಖೆಯು ಎಲಿಝಾ ಪರೀಕ್ಷೆ ಮಾಡಿಸಿ ಪಾಸಿಟಿವ್‌ ಬಂದರೆ ಮಾತ್ರ ಡೆಂಗ್ಯೂ ಎಂದು ಖಚಿತಪಡಿಸಿಕೊಳ್ಳುವುದು.

ಖಾಸಗಿಯವರು ಮಾಡುವ ಕಾರ್ಡ್‌ ಟೆಸ್ಟ್‌ನಲ್ಲಿ ಪಾಸಿಟಿವ್‌ ಬಂದರೆ ಡೆಂಗ್ಯೂ ಎಂದು ಇಲಾಖೆ ಒಪ್ಪಿಕೊಳ್ಳುತ್ತಿಲ್ಲ. ಖಾಸಗಿ ವೈದ್ಯರು ಹಾಗೂ ಆಸ್ಪತ್ರೆಗಳು ಅದನ್ನು ಡೆಂಗ್ಯೂ ಎಂದೇ ಪರಿಗಣಿಸಿ ಚಿಕಿತ್ಸೆ ನೀಡುತ್ತಿದೆ.

ತಾಲೂಕಿನ ದೈವಸ್ಥಳ ಆರೋಗ್ಯ ಕೇಂದ್ರ ವ್ಯಾಪ್ತಿಯ ಮಣಿನಾಲ್ಕೂರು, ಸರಪಾಡಿ, ಉಳಿ ಗ್ರಾಮ ವ್ಯಾಪ್ತಿಯಲ್ಲಿ ಹೆಚ್ಚಿನ ಡೆಂಗ್ಯೂ ಪ್ರಕರಣಗಳು ಕಂಡುಬಂದಿದ್ದು, ಉಳಿದಂತೆ ಬಂಟ್ವಾಳ ಪುರಸಭೆ ಸಹಿತ ಇತರ ಗ್ರಾಮೀಣ ಭಾಗಗಳಲ್ಲಿ ಡೆಂಗ್ಯೂ ಪತ್ತೆಯಾಗಿದ್ದವು.

Advertisement

ಸರಕಾರಿ ಆಸ್ಪತ್ರೆಯಲ್ಲಿ ಬೆಡ್‌ ಕೊರತೆ ಇಲ್ಲ
ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಕಳೆದ ತಿಂಗಳು ಒಟ್ಟು 36 ರೋಗಿಗಳು ಶಂಕಿತ ಡೆಂಗ್ಯು ಪ್ರಕರಣಕ್ಕೆ ಸಂಬಂಧಿಸಿ ದಾಖಲಾಗಿದ್ದು, ಅದರಲ್ಲಿ ಡೆಂಗ್ಯೂ ಖಚಿತಗೊಂಡಿರುವ 7 ಮಂದಿ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರೋಗಿಗಳ ಪ್ಲೇಟ್‌ಲೆಟ್‌ ಕೌಂಟ್‌ 10 ಸಾವಿರಕ್ಕಿಂತ ಕಡಿಮೆ ಬಂದಾಗ ಮಾತ್ರ ಜಿಲ್ಲಾಸ್ಪತ್ರೆಗೆ ಕಳುಹಿಸುತ್ತಿದ್ದು, ಈ ವರ್ಷ ಅಂತಹ ಯಾವುದೇ ಪ್ರಕರಣಗಳು ವರದಿಯಾಗಿಲ್ಲ. ಸದ್ಯಕ್ಕೆ ಇರುವ ರೋಗಿಗಳ ಪ್ಲೇಟ್‌ಲೆಟ್‌ ಸ್ಥಿರವಾಗಿದೆ ಎಂದು ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ| ಪುಷ್ಪಲತಾ ತಿಳಿಸಿದ್ದಾರೆ.

ಸ್ಥಳೀಯ ಸಂಸ್ಥೆಗಳ ಸಹಕಾರ ನೀರಸ
ಡೆಂಗ್ಯೂ ತಡೆಗೆ ಆಶಾ ಕಾರ್ಯಕರ್ತರು ವಿಶೇಷ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಅವರಿಗೆ ಸ್ಥಳೀಯ ಸಂಸ್ಥೆಗಳಾದ ಗ್ರಾ.ಪಂ., ನಗರ ಸ್ಥಳೀಯಾಡಳಿತಗಳಿಂದ ನೀರಸ ಪ್ರತಿಕ್ರಿಯೆಯ ಆರೋಪವಿದೆ. ಡೆಂಗ್ಯೂ ತಡೆಗೆ ಫಾಗಿಂಗ್‌ ಇನ್ನಿತರ ಕಾರ್ಯಕ್ರಮಗಳನ್ನು ನಡೆಸಲು ಪಂಚಾಯತ್‌ ಯಾವುದೇ ಸಹಕಾರ ನೀಡುತ್ತಿಲ್ಲ ಎಂದೂ ಹೇಳಲಾಗುತ್ತಿದೆ. ತಾಲೂಕಿನ ಕೆಲವು ಪಂಚಾಯತ್‌ಗಳ ಕೆಲವಡೆ ಮಾತ್ರ ಫಾಗಿಂಗ್‌ ಕಾರ್ಯ ನಡೆದಿದೆ.

ಎಲಿಝಾ ಪರೀಕ್ಷೆ ಮಾಡಿಸಿ ಪಾಸಿಟಿವ್‌ ಬಂದಾಗ ಮಾತ್ರ ಡೆಂಗ್ಯೂ ಎಂದು ಪರಿಗಣಿಸಲಾಗುತ್ತಿದ್ದು, ಖಾಸಗಿಯವರು ಕಾರ್ಡ್‌ ಟೆಸ್ಟ್‌ ಮಾಡಿ ಡೆಂಗ್ಯೂ ಎಂದು ಹೇಳುತ್ತಿದ್ದಾರೆ. ಪ್ರಸ್ತುತ ಡೆಂಗ್ಯೂ ಕುರಿತು ಎಲ್ಲೆಡೆ ಜಾಗೃತಿ ಮೂಡಿಸಲಾಗುತ್ತಿದ್ದು, ಆಶಾ ಕಾರ್ಯಕರ್ತರ ಜತೆಗೆ ವೈದ್ಯರು, ಇಲಾಖೆಯ ತಂಡ ತೆರಳಿ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಪಡಿಸುವ ಕಾರ್ಯ ಮಾಡುತ್ತಿದೆ.
-ಡಾ| ಅಶೋಕ್‌ಕುಮಾರ್‌ ಕೆ., ತಾಲೂಕು ಆರೋಗ್ಯಾಧಿಕಾರಿ, ಬಂಟ್ವಾಳ

Advertisement

Udayavani is now on Telegram. Click here to join our channel and stay updated with the latest news.

Next