ಶಹಾಬಾದ: ನಗರದಲ್ಲಿ ಡೆಂಘೀ ವದಂತಿ ಹರಡಿದ ಬೆನ್ನಲ್ಲೇ ಆರೋಗ್ಯ ಇಲಾಖೆ ನಗರದ ವಿವಿಧ ಭಾಗಗಳಲ್ಲಿನ ಜನರ ರಕ್ತ ಸಂಗ್ರಹಿಸಿ ಜಿಲ್ಲಾ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದು, 25 ಜನರಲ್ಲಿ ನಾಲ್ವರಿಗೆ ಡೆಂಘೀ ಇರುವುದು ಪತ್ತೆಯಾಗಿದೆ.
ತಾಲೂಕು ಆರೋಗ್ಯ ಅಧಿಕಾರಿ ಸುರೇಶ ಮೇಕಿನ್ ಅವರು ಈ ಕುರಿತು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಜತೆ ಡೆಂಘೀ ನಿಯಂತ್ರಣದ ಕುರಿತು ಸಮಗ್ರವಾಗಿ ಚರ್ಚಿಸಿದರಲ್ಲದೇ ನಗರದ ಮಜ್ಜಿದ್ ಮುಂಭಾಗದಲ್ಲಿ
ಸಂಗ್ರಹಿಸಿಡಲಾಗಿದ್ದ ಹಳೆ ಸಾಮಗ್ರಿಗಳಲ್ಲಿ ತುಂಬಿಕೊಂಡಿದ್ದ ಮಳೆ ನೀರನ್ನು ಸ್ವತ್ಛಗೊಳಿಸಲು ಕ್ರಮ ಕೈಗೊಂಡರು. ನಂತರ, ಬಡಾವಣೆಗಳಲ್ಲಿ ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್ ಮಾಡಲು, ನೀರು ನಿಲ್ಲದಂತೆ ಸ್ವತ್ಛತೆ ಬಗ್ಗೆ
ಹೆಚ್ಚಿನ ಗಮನಹರಿಸಬೇಕು ಎಂದು ಸಿಬ್ಬಂದಿಗೆ ಸೂಚಿಸಿದರು. ಡೆಂಘೀ ಕುರಿತು ಜಾಗೃತಿ ಮೂಡಿಸಲು ನಗರದಲ್ಲಿ ಕರಪತ್ರ ಹಂಚಬೇಕು. ಶುದ್ಧವಾದ ಕುಡಿಯುವ ನೀರು ಒದಗಿಸಬೇಕು.
ಕುಡಿಯುವ ನೀರಿನ ಟ್ಯಾಂಕ್‌ನ ಕ್ಲೋರಿನೇಷನ್ ಮಾಡಲು ಅರಿವು ಮೂಡಿಸಬೇಕೆಂದು ನಗರಸಭೆ ಆರೋಗ್ಯ ನಿರೀಕ್ಷಕ ಶಿವರಾಜಕುಮಾರ ತಿಳಿಸಿದರಲ್ಲದೇ, ನಗರಸಭೆ ಪೌರಾಯುಕ್ತರಿಗೆ ಮನವಿ ಪತ್ರ ಸಲ್ಲಿಸಿದರು. ನಗರಾದ್ಯಂತ ಪ್ರತಿ ಮನೆಮನೆಗೆ ನಗರಸಭೆ ಸಿಬ್ಬಂದಿ ಹಾಗೂ ಆರೋಗ್ಯ ಕಾರ್ಯಕರ್ತರು ಭೇಟಿ ನೀಡಿ ಡೆಂಘೀ ರೋಗ ನಿಯಂತ್ರಣ ನಿಮಿತ್ತ ಲಾರ್ವಾ ಸಮೀಕ್ಷೆ ಮಾಡಿ ಲಾರ್ವಾ ಪತ್ತೆ ಮಾಡಿ ನಾಶಪಡಿಸುವ ಬಗ್ಗೆ ಕರಪತ್ರ ವಿತರಿಸಲಿದ್ದಾರೆ. ಸಾರ್ವಜನಿಕರು ಸಹಕರಿಸಬೇಕು ಎಂದು ತಾಲೂಕು ಆರೋಗ್ಯ ಅಧಿಕಾರಿಗಳು ಮನವಿ ಮಾಡಿದರು.
ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಪಿ.ಎಂ. ಸಜ್ಜನ್, ಮಕ್ಕಳ ತಜ್ಞ ಡಾ| ರಹೀಮ್, ತಾಲೂಕು ಆರೋಗ್ಯ ಮೇಲ್ವಿಚಾರಕ ಮಜ್ಜಿದ್ ಪಟೇಲ್, ಅಧೀಕ್ಷಕ ಮೋಹನ ಗಾಯಕವಾಡ, ಕೌಸರ್ ನಿಯಾಜ್ ಮಹ್ಮದ್, ಯೂಸುಫ್ ನಾಕೇದಾರ, ಆಶಾ ಕಾರ್ಯಕರ್ತೆಯರು ಈ ಸಂದರ್ಭದಲ್ಲಿದ್ದರು.