Advertisement

ಡೆಂಘೀ ಜ್ವರ: ಸ್ವಚ್ಛತೆ ಕಾಪಾಡಿ

11:40 AM Jul 05, 2019 | Suhan S |

ಎಚ್.ಡಿ.ಕೋಟೆ: ತಾಲೂಕಿನ ವಿವಿಧ ಭಾಗಗಳಲ್ಲಿ ಡೆಂಘೀ ಜ್ವರದ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮೂವರಿಗೆ ಡೆಂಘೀ ಜ್ವರದ ಸೋಂಕು ತಗುಲಿರುವುದು ಬೆಳಕಿಗೆ ಬಂದಿದೆ.

Advertisement

ಎಚ್.ಡಿ.ಕೋಟೆ ಪಟ್ಟಣದ ಸರ್ವಮಂಗಳಮ್ಮ ಹಾಗೂ ತಾಲೂಕಿನ ಜಿ.ಎಂ.ಹಳ್ಳಿ ಗ್ರಾಮದ ರಾಜು, ಕಲ್ಲಹಟ್ಟಿ ಗ್ರಾಮದ ಲಕ್ಷ್ಮಣ್‌ ನಾಯಕ್‌ ಡೆಂಘೀ ಜ್ವರದಿಂದ ಬಳಲುತ್ತಿದ್ದು, ಎಲ್ಲರೂ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಹಾಗೂ ಮೈಸೂರಿನ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈಡಿಸ್‌ ಈಜಿಫೈ ಸೊಳ್ಳೆಯ ಕಚ್ಚುವಿಕೆ ಯಿಂದ ಒಬ್ಬರಿಂದ ಮತ್ತೂಬ್ಬರಿಗೆ ಹರಡುವ ಮಾರಣಾಂತಿಕ ಡೆಂಘೀ ಜ್ವರ ತಾಲೂಕಿನಲ್ಲಿ ಪತ್ತೆಯಾಗುತ್ತಿರುವುದು ಜನರಲ್ಲಿ ಆತಂಕವನ್ನುಂಟು ಮಾಡಿದೆ. ತಾಲೂಕು ಆಡಳಿತ ಹಾಗೂ ತಾಲೂಕು ಆರೋಗ್ಯ ಇಲಾಖೆ, ಪುರಸಭೆ ಸೇರಿದಂತೆ ತಾಲೂಕಿನ ಎಲ್ಲಾ 39 ಗ್ರಾಮ ಪಂಚಾಯಿತಿ ಗಳಲ್ಲೂ ಜನರಿಗೆ ತಮ್ಮ ಸುತ್ತಮುತ್ತಲ ಸ್ವಚ್ಛ ಪರಿಸರದ ಬಗ್ಗೆ ಅರಿವು ಮೂಡಿಸಿ, ಡೆಂಘೀ ಜ್ವರದ ಬಗ್ಗೆ ಜನರಲ್ಲಿ ಮನೆ ಮಾಡಿರುವ ಭಯವನ್ನು ದೂರವಾಗಿಸಬೇಕಿದೆ.

ಡೆಂಘೀ ವರದಿಯಾಗಿಲ್ಲ: ಅದರೆ, ತಾಲೂಕು ಆರೋಗ್ಯ ಇಲಾಖೆ ಅಧಿಕಾರಿಗಳು ಮಾತ್ರ ತಾಲೂಕಿನಲ್ಲಿ ಡೆಂಘೀ ಪ್ರಕರಣ ವರದಿಯಾಗಿಲ್ಲ. ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೇವೆ. ಇಲಾಖೆ ಸಿಬ್ಬಂದಿ ಪ್ರತಿ ಜನವಸತಿ ಪ್ರದೇಶಕ್ಕೆ ತೆರಳಿ ಲಾರ್ವಾ ಸರ್ವೆ ಕೈಗೊಂಡು ಕುಟುಂಬಗಳ ಜನರಲ್ಲಿ ಶುಚಿತ್ವದ ಬಗ್ಗೆ ಅರಿವು ಮೂಡಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಜನರು ಜ್ವರ ಬಂದ ಕೂಡಲೇ ಡೆಂಘೀ, ಚಿಕೂನ್‌ಗುನ್ಯಾ ಜ್ವರ ಎಂದು ಭಾವಿಸುತ್ತಾರೆ. ಜ್ವರ ಬಂದು ಮೂರ್‍ನಾಲ್ಕು ದಿನ ಕಳೆದರೂ ಗುಣವಾಗದಿದ್ದಲ್ಲಿ, ಆರೋಗ್ಯ ಇಲಾಖೆಯಲ್ಲಿ ವಿವಿಧ ಪರೀಕ್ಷೆ ನಡೆಸಲಾಗುತ್ತದೆ. ಎಲೀಜಾ ಟೆಸ್ಟ್‌ನಲ್ಲಿ ಪಾಸಿಟಿವ್‌ ಬಂದಾಗ ಮಾತ್ರ ಡೆಂಘೀ ಸೋಂಕು ಪತ್ತೆ ದೃಢಪಡುತ್ತದೆ. ಡೆಂಘೀ ಪತ್ತೆಯಾದರೂ ಸೂಕ್ತ ಚಿಕಿತ್ಸೆ ಲಭ್ಯವಿದ್ದು, ಭಯಪಡಬೇಕಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

Advertisement

ಮನೆ ಸುತ್ತ ನೀರು ನಿಲ್ಲದಂತೆ ನೋಡಿಕೊಳ್ಳಿ:

ಡೆಂಘೀ ಸೋಂಕಿಗೆ ಸೂಕ್ತ ಚಿಕಿತ್ಸೆಯಿದ್ದು, ಯಾರೂ ಎದರುವ ಅಗತ್ಯವಿಲ್ಲ. ತಾವು ವಾಸಿಸುವ ಸುತ್ತಮುತ್ತಲ ಪರಿಸರದಲ್ಲಿ ಎಳೆನೀರು ಚಿಪ್ಪು, ಬೇಡವಾದ ಪ್ಲಾಸ್ಟಿಕ್‌ ವಸ್ತುಗಳು, ಟೈರ್‌ಗಳಲ್ಲಿ ಮತ್ತು ಒಳ ಕಲ್ಲಿನಲ್ಲಿ ಮಳೆ ನೀರು ಶೇಖರಣೆ ಯಾಗದಂತೆ ನೋಡಿಕೊಳ್ಳಬೇಕು. ಆಗಾಗ ಮನೆಯ ನೀರು ಶೇಖರಣಾ ತೊಟ್ಟಿಗಳನ್ನು ಶುಚಿಗೊಳಿಸಿ ಒಣಗಿಸಿ ಮತ್ತೆ ನೀರು ಸಂಗ್ರಹಿಸಬೇಕು. ಸಾಂಕ್ರಾಮಿಕ ರೋಗ ಉತ್ಪತ್ತಿ ಮಾಡಬಲ್ಲ ಸೊಳ್ಳೆ ಹತೋಟಿಗೆ ಸಾರ್ವಜನಿಕರೂ ಸಹಕರಿಸಬೇಕು. ಜ್ವರ ಕಾಣಿಸಿಕೊಂಡಲ್ಲಿ ಕೂಡಲೇ ಚಿಕಿತ್ಸೆ ಪಡೆಯಬೇಕು ಎಂದು ತಾಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ವಿ.ಉದಯಕುಮಾರ್‌ ತಿಳಿಸಿದ್ದಾರೆ.

ಪಟ್ಟಣದಲ್ಲಿ ಸ್ವಚ್ಛತೆ ಸವಾಲಿನ ಕೆಲಸ:

ಪುರಸಭೆಯಾಗಿ ಮೇಲ್ದರ್ಜೆಗೆರಿದ ಪರಿಣಾಮ ಹತ್ತಾರೂ ಗ್ರಾಮಗಳು ಪುರಸಭೆ ವ್ಯಾಪ್ತಿಗೆ ಸೇರಿವೆ. ಪೌರಕಾರ್ಮಿಕರ ಕೊರತೆ ಇರುವುದರಿಂದ ಶುಚಿತ್ವ ಕೆಲಸ ಸವಾಲಾಗಿ ಪರಿಣಮಿಸಿದೆ. ಅದರೂ ತಾತ್ಕಾಲಿಕವಾಗಿ ಹೆಚ್ಚಿನ ಸಿಬ್ಬಂದಿ ನೇಮಿಸಿ ಎಲ್ಲಾ ವಾರ್ಡ್‌ಗಳಲ್ಲೂ ಯಾವುದೇ ಸಾಂಕ್ರಾಮಿಕ ರೋಗ ಹರಡದಂತೆ ತೆರೆದ ಚರಂಡಿಗಳನ್ನು ಸ್ವಚ್ಛಗೊಳಿಸಿ ಬ್ಲಿಚಿಂಗ್‌ ಪೌಡರ್‌ ಸಿಂಪಡಿಸಲು ಸೂಚಿಸಿದ್ದೇನೆ ಎಂದು ಎಚ್.ಡಿ.ಕೋಟೆ ಪುರಸಭೆ ಮುಖ್ಯಾಧಿಕಾರಿ ಡಿ.ಎನ್‌.ವಿಜಯಕುಮಾರ್‌ ತಿಳಿಸಿದ್ದಾರೆ.
● ಬಿ.ನಿಂಗಣ್ಣ ಕೋಟೆ
Advertisement

Udayavani is now on Telegram. Click here to join our channel and stay updated with the latest news.

Next