Advertisement

Health: ರಾಜ್ಯದಲ್ಲಿ ಡೆಂಗ್ಯೂ ಜ್ವರ ಜೋರು- ವಿವಿಧ ಭಾಗಗಳಲ್ಲಿ 15 ಸಾವಿರ ದಾಟಿದ ಪ್ರಕರಣ

12:31 AM Dec 11, 2023 | Team Udayavani |

ಬೆಂಗಳೂರು: ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿದೆ. ಇದು ವರೆಗೆ ಪಾಸಿಟಿವ್‌ ಸಂಖ್ಯೆ 15 ಸಾವಿರದ ಗಡಿ ದಾಟಿದ್ದು, 9 ಮಂದಿ ಮೃತಪಟ್ಟಿದ್ದಾರೆ. ಕಳೆದ ವರ್ಷಕ್ಕಿಂತ ಈ ಬಾರಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ದುಪ್ಪಟ್ಟಾಗಿದೆ.

Advertisement

ಈ ಬಾರಿಯೂ ಜುಲೈ, ಸೆಪ್ಟಂಬರ್‌ನಲ್ಲಿ ಡೆಂಗ್ಯೂ ಹೆಚ್ಚಾಗಿ ವರದಿಯಾಗಿದೆ. ಅಕ್ಟೋಬರ್‌, ನವೆಂಬರ್‌ನಲ್ಲಿ ತುಸು ಇಳಿಕೆಯಾಗಿದ್ದರೂ ಆ ಬಳಿಕ ಮತ್ತೆ ಏರಿಕೆ ಕಂಡಿರುವುದು ಆತಂಕ ಮೂಡಿಸಿದೆ.
ರಾಜ್ಯದಲ್ಲಿ ಒಟ್ಟು 15,089 ಮಂದಿ ಡೆಂಗ್ಯೂಗೆ ತುತ್ತಾಗಿದ್ದಾರೆ. ಇದರಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ 4 ಹಾಗೂ ಕೊಡಗು, ಹಾಸನ, ತುಮಕೂರು ವ್ಯಾಪ್ತಿಯಲ್ಲಿ ತಲಾ ಒಬ್ಬರು, ಉಡುಪಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. 2021ರಲ್ಲಿ 6,300 ಪ್ರಕರಣ ದಾಖಲಾಗಿದ್ದು, ಐವರು ಮೃತಪಟ್ಟಿದ್ದರು. 2022ರಲ್ಲಿ 8,500 ಪ್ರಕರಣ ಪಾಸಿಟಿವ್‌ ಇದ್ದು, 9 ಮಂದಿ ಸಾವಿಗೀಡಾಗಿದ್ದರು.

ಡೆಂಗ್ಯೂ ಹೆಚ್ಚಳಕ್ಕೆ ಕಾರಣವೇನು?
ಬಿಟ್ಟು ಬಿಟ್ಟು ಮಳೆ, ಹೊಸ ಕಟ್ಟಡ ನಿರ್ಮಾಣ, ರಸ್ತೆಗಳಲ್ಲಿ ಹೊಂಡ ಗುಂಡಿ ಮುಖ್ಯ ಕಾರಣ ಎನ್ನಲಾಗುತ್ತಿದೆ. ಕಟ್ಟಡ ನಿರ್ಮಾಣ ಕಾಮಗಾರಿ ಪ್ರದೇಶದಲ್ಲಿ ನೀರು ನಿಲ್ಲುತ್ತಿದೆ. ಎಲ್ಲೆಂದರಲ್ಲಿ ಕಾಂಕ್ರೀಟ್‌ ರಸ್ತೆಗಳು ನಿರ್ಮಾಣವಾಗುತ್ತಿದ್ದು, ಇದರಿಂದಾಗಿ ನೀರು ಇಂಗಲು ಅವಕಾಶವೇ ಇಲ್ಲವಾಗಿದೆ. ರಸ್ತೆ ಗುಂಡಿಯಲ್ಲಿ ನಿಂತ ನೀರಿನಿಂದಾಗಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದೆ ಎನ್ನುವ ಅಭಿಪ್ರಾಯ ಆರೋಗ್ಯ ತಜ್ಞರದು.

ಸಿವಿಕ್‌ ಬೈಲಾಕ್ಕಿಲ್ಲ ಮನ್ನಣೆ
ರಾಜ್ಯದ ಪ್ರತಿಯೊಂದು ಸ್ಥಳೀಯಾಡಳಿತದಲ್ಲಿ ಸಾಂಕ್ರಾಮಿಕ ರೋಗಗಳ ತಡೆಗೆ ಸಿವಿಕ್‌ ಬೈಲಾ ಅಳವಡಿಸಿದರೆ ಡೆಂಗ್ಯೂ ಹಾಗೂ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸಬಹುದು. ಕಡ್ಡಾಯವಾಗಿ ಈ ಬೈಲಾ ಆಳವಡಿಕೆಯಾದರೆ ಮನೆ, ವಾಣಿಜ್ಯ ಕಟ್ಟಡ ಆವರಣ, ಕಟ್ಟಡಗಳ ನಿರ್ಮಾಣ ಸ್ಥಳಗಳಲ್ಲಿ ಸೊಳ್ಳೆ ಉತ್ಪತ್ತಿಗೆ ಕಾರಣವಾಗುವ ಅಂಶಗಳು ಕಂಡುಬಂದರೆ ಮಾಲಕರಿಗೆ ಎಚ್ಚರಿಕೆಯ ಜತೆಗೆ ಸ್ಥಳದಲ್ಲಿಯೇ ಭಾರೀ ದಂಡ ವಿಧಿಸಬಹುದಾಗಿದೆ. ಇದರಿಂದ ಡೆಂಗ್ಯೂ ನಿಯಂತ್ರಿಸಬಹುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು
ಭಾರೀ ಏರಿಕೆಯಾಗುತ್ತಿವೆ. ಕೇವಲ ಆರೋಗ್ಯ ಇಲಾಖೆಯಿಂದ ಮಾತ್ರ ಇದನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಸಾರ್ವಜನಿಕರೂ ಸಹಕಾರ ನೀಡಬೇಕು.
– ಡಾ| ಸುದರ್ಶನ ಬಲ್ಲಾಳ್‌, ಮಣಿಪಾಲ ಆಸ್ಪತ್ರೆ ಅಧ್ಯಕ್ಷ

Advertisement

 ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next