Advertisement

ಡೆಂಗ್ಯೂ ಭೀತಿ; ಬಿಳಿ ರಕ್ತ ಕಣಕ್ಕೆ ಭಾರೀ ಬೇಡಿಕೆ

03:45 AM Jun 27, 2017 | |

ಮಂಡ್ಯ: ಮಳೆಗಾಲ ಬಂದಿರುವುದು ರೈತರಲ್ಲಿ ಹರ್ಷ ತಂದಿದ್ದರೆ,ಡೆಂಗ್ಯೂ ಸೇರಿದಂತೆ ವಿವಿಧ ಜ್ವರಗಳು ಹೆಚ್ಚುತ್ತಿರುವುದು ಜಿಲ್ಲೆಯ ಜನರನ್ನು ಹೈರಾಣಾಗಿಸಿದೆ. ದಿನದಿಂದ ದಿನಕ್ಕೆ ಜ್ವರ ಪೀಡಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಆಸ್ಪತ್ರೆಗಳಲ್ಲಿ ಹಾಗೂ ರಕ್ತಾಗಾರದಲ್ಲಿ ವಿಶೇಷವಾಗಿ ಬಿಳಿ ರಕ್ತ ಕಣಗಳಿಗೆ ಸಾಕಷ್ಟು ಬೇಡಿಕೆ ಬಂದಿದೆ. ಬೇಡಿಕೆಗೆ ತಕ್ಕಂತೆ ಪೂರೈಕೆಯಲ್ಲಿ ಕೊರತೆಯಾಗದಿದ್ದರೂ, ಕೇಳಿದಷ್ಟು ಪ್ರಮಾಣ ತಕ್ಷಣ ಸಿಗದಿರುವುದು ಜನರಲ್ಲಿ ಅಸಮಾಧಾನ ಮೂಡಿಸಿದೆ.

Advertisement

ಮಂಡ್ಯ ವೈದ್ಯಕೀಯ ವಿಜಾnನ ಮತ್ತು ಸಂಶೋಧನಾ ಸಂಸ್ಥೆಯಲ್ಲಿರುವ ರಕ್ತ ನಿಧಿ ಕೇಂದ್ರ ಮೂರು ವರ್ಷಗಳಿಂದ ಬಿಳಿಯ ರಕ್ತ ಕಣಗಳನ್ನು ಪೂರೈಸುತ್ತಿದೆ. ಆದರೆ, ಕಳೆದೊಂದು ತಿಂಗಳಿಂದ ಬೇಡಿಕೆ ಹೆಚ್ಚಾಗಿದ್ದು, ನಿತ್ಯ 50 ಬ್ಯಾಗ್‌ನಷ್ಟು ಬಿಳಿಯ ರಕ್ತ ಕಣಗಳು ಕೇಂದ್ರದಿಂದ ಮಾರಾಟವಾಗುತ್ತಿವೆ. ಮಂಡ್ಯ ಮಾತ್ರವಲ್ಲದೇ, ಮೈಸೂರು, ಚಾಮರಾಜನಗರ, ರಾಮನಗರ ಜಿಲ್ಲೆಗಳಿಂದಲೂ ಬಿಳಿಯ ರಕ್ತ ಕಣಗಳಿಗೆ ಬೇಡಿಕೆ ಬಂದಿರುವುದರಿಂದ ತಕ್ಷಣ ಪೂರೈಸುವುದು ಕಷ್ಟವಾಗುತ್ತಿದೆ ಎಂದು ರಕ್ತ ನಿಧಿ ಕೇಂದ್ರದವರು ತಿಳಿಸಿದ್ದಾರೆ.

ಬೆಲೆ ಹೆಚ್ಚು:
ಖಾಸಗಿ ಆಸ್ಪತ್ರೆಗಳಲ್ಲಿ ಬಿಳಿಯ ರಕ್ತ ಕಣಗಳಿಗೆ ಬೆಲೆ ಹೆಚ್ಚಾಗಿದೆ. ಇಲ್ಲಿ ಬಿಳಿಯ ರಕ್ತ ಕಣಗಳ ಒಂದು ಬ್ಯಾಗ್‌ಗ ಕನಿಷ್ಠ 1,000 ರೂ.ನಿಂದ 2,000 ರೂ. ಬೆಲೆ ವಿಧಿಸಲಾಗುತ್ತಿದೆ. ಆದರೆ, ಮಂಡ್ಯದ ಮಿಮ್ಸ್‌ ಆಸ್ಪತ್ರೆ ರಕ್ತನಿಧಿ ಕೇಂದ್ರದಲ್ಲಿ ಬಿಳಿಯ ರಕ್ತ ಕಣಗಳ ಒಂದು ಬ್ಯಾಗ್‌ 450 ರೂ. ದರದಲ್ಲಿ ನೀಡಲಾಗುತ್ತಿರುವ ಕಾರಣ ಇಲ್ಲಿಯೇ ಬೇಡಿಕೆ ಹೆಚ್ಚಾಗಿದೆ. ಅಲ್ಲದೇ, ಬಿಪಿಎಲ್‌ ಕಾರ್ಡ್‌ ಹೊಂದಿದ್ದರೆ ಶೇ.50 ರಿಯಾಯಿತಿ ನೀಡಲಾಗುತ್ತಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಅತಿ ಕಡಿಮೆ ಬೆಲೆಯಲ್ಲಿ ಬಿಳಿಯ ರಕ್ತ ಕಣಗಳು ದೊರೆಯುವ ಪ್ರಮುಖ ರಕ್ತ ನಿಧಿ ಕೇಂದ್ರವೇ ಆಗಿರುವ ಕಾರಣ ಸುತ್ತಮುತ್ತಲಿನ ಜಿಲ್ಲೆಯ ಜನರು ಮಂಡ್ಯ ರಕ್ತ ನಿಧಿ ಕೇಂದ್ರಕ್ಕೆ ಮುಗಿಬೀಳುತ್ತಿದ್ದಾರೆ.

50 ಬ್ಯಾಗ್‌ ಮಾರಾಟ:
ನಿತ್ಯ ಮಂಡ್ಯ ಜಿಲ್ಲೆಯಿಂದ ಮಾತ್ರವಲ್ಲದೆ ಹೊರ ಜಿಲ್ಲೆಗಳಿಂದ ಸುಮಾರು 50ಕ್ಕೂ ಹೆಚ್ಚು ಬ್ಯಾಗ್‌ಗಳಿಗೆ ಬೇಡಿಕೆ ಸೃಷ್ಟಿಯಾಗಿದೆ. ಈ ಬೇಡಿಕೆಯನ್ನು ಪೂರೈಸುವುದು ಕಷ್ಟವಾಗಿದ್ದರೂ ದಿನವೂ ಹೊಂದಿಸಿ ಪೂರೈಕೆ ಮಾಡಲಾಗುತ್ತಿದೆ. ರೋಗ ನಿರೋಧಕ ಶಕ್ತಿ ಕೊರತೆಯಿರುವ ಒಬ್ಬ ರೋಗಿಗೆ ಕನಿಷ್ಠ 4ರಿಂದ 6 ಬ್ಯಾಗ್‌ಗಳಷ್ಟು ಬಿಳಿಯ ರಕ್ತ ಕಣಗಳು ಅಗತ್ಯ ಎಂದು ವೈದ್ಯರು ಸೂಚಿಸುತ್ತಿದ್ದಾರೆ. ಒಮ್ಮೆಲೇ ರೋಗಿಗಳ ಸಂಖ್ಯೆ ಹೆಚ್ಚಾಗಿರುವ ಕಾರಣ ಬೇಡಿಕೆ ಬಂದಷ್ಟು ಒಮ್ಮೆಲೇ ಪೂರೈಸುವುದು ರಕ್ತ ನಿಧಿ ಕೇಂದ್ರದವರಿಗೆ ಸಾಧ್ಯವಾಗುತ್ತಿಲ್ಲ.

ಆದರೂ ರಕ್ತ ನಿಧಿ ಕೇಂದ್ರದವರು ಬೇಡಿಕೆಯನ್ನು ಪೂರೈಸುವ ಸಲುವಾಗಿ ಒಬ್ಬರಿಗೆ ಒಂದು ಬಾರಿಗೆ 2 ಬ್ಯಾಗ್‌, ಸಂಜೆಯ ನಂತರ ಮತ್ತೆರಡು ಬ್ಯಾಗ್‌ ನೀಡುತ್ತಿದ್ದಾರೆ. ಬಿಳಿಯ ರಕ್ತ ಕಣಗಳಿಗಾಗಿ ರಕ್ತ ನಿಧಿ ಕೇಂದ್ರಕ್ಕೆ ನಿರಂತರವಾಗಿ ರಕ್ತದಾನ ಮಾಡುವ ದಾನಿಗಳು, ಸಂಘ-ಸಂಸ್ಥೆಗಳಿಂದ ಶಿಫಾರಸು ತರುವಂತಹ ಪರಿಸ್ಥಿತಿ ಸೃಷ್ಟಿಯಾಗಿದೆ.

Advertisement

ರಕ್ತದಾನಿಗಳಿಗೆ ಬೇಡಿಕೆ ಹೆಚ್ಚಳ
ಬೇಡಿಕೆ ಒಮ್ಮೆಲೇ ಹೆಚ್ಚಾಗಿರುವ ಕಾರಣ ರಕ್ತದ ಕೊರತೆಯಾಗದಂತೆ ನೋಡಿಕೊಳ್ಳಲು ಬಿಳಿಯ ರಕ್ತ ಕಣಕ್ಕಾಗಿ ಬೇಡಿಕೆ ಸಲ್ಲಿಸಿದವರಿಂದ ಅಷ್ಟೇ ಪ್ರಮಾಣದ ರಕ್ತ ಪೂರೈಸುವಂತೆಯೂ ರಕ್ತ ನಿಧಿ ಕೇಂದ್ರದವರು ಸೂಚಿಸುತ್ತಿದ್ದಾರೆ. ಆದ್ದರಿಂದ ರಕ್ತದಾನಿಗಳನ್ನು ಕರೆತರುವುದೂ ಹಲವರಿಗೆ ಸವಾಲಾಗಿ ಪರಿಣಮಿಸಿದೆ. ಪ್ರಸ್ತುತ ರಕ್ತದಾನಿಗಳ ಸಂಖ್ಯೆ ಸಾಕಷ್ಟು ಸಂಖ್ಯೆಯಲ್ಲಿರುವ ಕಾರಣ ಈ ಸಮಸ್ಯೆ ಇದುವರೆಗೆ ಕಂಡುಬಂದಿಲ್ಲ. ಓರ್ವನಿಂದ ಪಡೆದ ರಕ್ತದಿಂದ 50 ಎಂಎಲ್‌ನಷ್ಟು ಬಿಳಿಯ ರಕ್ತ ಕಣಗಳು ದೊರೆಯುತ್ತದೆ. ಇದನ್ನು ಶೀತಲೀಕರಣ ವ್ಯವಸ್ಥೆಯಲ್ಲಿ ಐದು ದಿನಗಳವರೆಗೆ ಮಾತ್ರ ಸಂಗ್ರಹಿಸಲು ಸಾಧ್ಯ. ಅಷ್ಟರೊಳಗೆ ಅದನ್ನು ವ್ಯಕ್ತಿಯ ದೇಹಕ್ಕೆ ನೀಡಬೇಕು. ಇಲ್ಲದಿದ್ದರೆ ನಿರುಪಯುಕ್ತವಾಗುತ್ತದೆ. ಆದ್ದರಿಂದ ಅಗತ್ಯ ಸಂದರ್ಭದಲ್ಲಿಯೇ ರಕ್ತದಾನಿಗಳು ಸಿಗಬೇಕಿರುವುದು ಅತಿ ಮುಖ್ಯವಾಗಿದೆ ಎಂದು ರಕ್ತನಿಧಿ ಕೇಂದ್ರದ ಪ್ರಯೋಗಾಲಯದ ತಜ್ಞರು ತಿಳಿಸಿದ್ದಾರೆ.

– ಮಂಡ್ಯ ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next