ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಡೆಂಘಿ, ವೈರಲ್ ಫೀವರ್ ಪ್ರಕರಣಗಳು ಹೆಚ್ಚಾಗು ತ್ತಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಕೂಡ ಡೆಂಘಿ ಜ್ವರದಿಂದ ಬಳಲುತ್ತಿದ್ದಾರೆ. ಜ್ವರದಿಂದ ಬಳಲುತ್ತಿ ರುವ ತುಷಾರ್ ಗಿರಿನಾಥ್ ನಾಲ್ಕು ದಿನಗಳಿಂದ ರಜೆಯಲ್ಲಿದ್ದು ಮನೆಯಲ್ಲೇ ಆರೈಕೆ ಪಡೆಯು ತ್ತಿದ್ದಾರೆ.
ಶೀಘ್ರದಲ್ಲೆ ಗುಣಮುಖರಾಗಿ ಕರ್ತವ್ಯಕ್ಕೆ ಎಂದಿನಂತೆ ಹಾಜರಾಗಲಿದ್ದಾರೆ ಎಂದು ಪಾಲಿಕೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಕೆಲವು ದಿನಗಳ ಹಿಂದಷ್ಟೇ ತುಷಾರ್ ಗಿರಿನಾಥ್ ಅವರಿಗೆ ಜ್ವರ ಕಾಣಿಸಿಕೊಂಡಿತ್ತು. ಬಿಬಿ ಎಂಪಿಯ ಮುಖ್ಯ ಆರೋಗ್ಯಾಧಿಕಾರಿಗಳ ಶಿಫಾರಸಿನ ಮೇರೆಗೆ ಡೆಂಘಿ ಪರೀಕ್ಷೆ ನಡೆಸಿಕೊಂಡಾಗ ಅದು ಪಾಸಿಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯಾಧಿಕಾರಿಗಳ ಸಲಹೆಯಂತೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಈ ಮಧ್ಯೆ ಸಿಲಿಕಾನ್ ಸಿಟಿಯಲ್ಲಿ ವೈರಲ್ ಫೀವರ್ ಕಾಟ ಹೆಚ್ಚಾಗಿದೆ. ಜೂ.1ರಿಂದ ಈವರೆಗೂ ಬೆಂಗಳೂರಿನಲ್ಲಿ 1046 ಪ್ರಕರಣಗಳು ಕಂಡು ಬಂದಿದೆ. ಪಾಲಿಕೆ ಆರೋಗ್ಯ ಇಲಾಖೆ ಕೂಡ ಈ ಬಗ್ಗೆ ಎಚ್ಚರವಾಗಿದ್ದು ಮುಂಜಾಗ್ರತೆ ವಹಿಸಿದೆ. ಸೊಳ್ಳೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿದೆ. ಜತೆಗೆ ಸಿಬ್ಬಂದಿಗಳು ಕೂಡ ಡೆಂಘಿ ಹರಡುವ ಲಾರ್ವಗಳ ಸರ್ವೆಯಲ್ಲಿ ನಿರತವಾಗಿದ್ದಾರೆ ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
ಖಾಲಿ ಸೈಟ್‌ಗಳು, ಪಾಳುಬಿದ್ದ ಪ್ರದೇಶಗಳ ಬಗ್ಗೆ ಪಾಲಿಕೆ ಸಿಬ್ಬಂದಿ ಎಚ್ಚರಿಕೆ ವಹಿಸಿದ್ದಾರೆ. ಜೊತೆಗೆ ಹೊಸ ಕಟ್ಟಡಗಳಲ್ಲಿ ನೀರು ನಿಲ್ಲದ ರೀತಿಯಲ್ಲಿ ನೋಡಿಕೊಳ್ಳಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ತೆಂಗಿನಕಾಯಿ ಚಿಪ್ಪು, ಒಡೆದು ಹೋಗಿರುವ ಮಡಕೆಗಳಲ್ಲಿ ಹೊಸದಾಗಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕಿದೆ. ಬಿಬಿಎಂಪಿ ವ್ಯಾಪ್ತಿ ದೊಡ್ಡದಿದೆ. ಈ ಹಿನ್ನೆಲೆಯಲ್ಲಿ ಅಧಿಕ ಪ್ರಕಣಗಳು ಕಂಡು ಬಂದಿದೆ. ಆದರೆ, ಪಾಲಿಕೆ ಅಧಿಕಾರಿಗಳು ಈ ಬಗ್ಗೆ ಎಚ್ಚರಿಕೆ ವಹಿಸಿದ್ದಾರೆ ಎಂದು ಬಿಬಿಎಂಪಿ ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಮಹದೇವಪುರ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಡೆಂಘಿ ಪ್ರಕರಣಗಳು ಹೆಚ್ಚು ಕಂಡು ಬಂದಿವೆ.
ಮನೆ ಸುತ್ತ ನೀರು ನಿಲ್ಲದಂತೆ ನೋಡಿಕೊಳ್ಳಿ: ವೈದ್ಯರ ಎಚ್ಚರಿಕೆ: ಡೆಂಘಿ ಜ್ವರ ಸೊಳ್ಳೆಯಿಂದ ಹರಡುವ ವೈರಲ್ ಸೋಂಕು ಆಗಿದೆ. ಇದು ಈಡೀಸ್ ಎಂಬ ಹೆಣ್ಣು ಸೊಳ್ಳೆಗಳ ಕಡಿತದಿಂದ ಹರಡುತ್ತದೆ. ಸೊಳ್ಳೆ ಕಚ್ಚಿದ 4ರಿಂದ 7 ದಿನಗಳ ನಂತರ ರೋಗ ಲಕ್ಷಣಗಳು ಸಾಮಾನ್ಯವಾಗಿ ಕಂಡು ಬರುತ್ತವೆ. ಇದರ ಪ್ರಭಾವ ಹತ್ತು ದಿನಗಳವರೆಗೆ ಇರಲಿದೆ. ಹೀಗಾಗಿ, ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದು, ಸ್ವತ್ಛತೆಗೆ ಆದ್ಯತೆ ನೀಡುವುದು ಉತ್ತಮ ಎಂದು ಪಾಲಿಕೆಯ ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಡೆಂಘಿ ಜ್ವರ ತಲೆನೋವಿನಂತಹ ರೋಗ ಲಕ್ಷಣಗಳನ್ನು ಉಂಟು ಮಾಡಬಹುದು. ಡೆಂ àಯನ್ನು ಹೆಮರಾಜಿಕ್ ಜ್ವರ ಎಂದೂ ಕರೆಯಲಾಗುತ್ತದೆ. ಡೆಂಘಿ ಜ್ವರದ ತೀವ್ರ ಸ್ವರೂಪದ್ದು, ರಕ್ತಸ್ರಾವ, ರಕ್ತದೊತ್ತಡ ಹಾಗೂ ರಕ್ತಕಣಗಳ ಸಂಖ್ಯೆಯಲ್ಲಿ ಭಾರಿ ಕುಸಿತವಾಗಿ ವ್ಯಕ್ತಿಯ ಸಾವಿಗೂ ಕಾರಣವಾಗಬಹುದು. ಅಧಿಕ ಜ್ವರ, ತೀವ್ರ ತಲೆನೋವು, ವಾಂತಿ, ಗ್ರಂಥಿಗಳಲ್ಲಿ ಊತ, ಮೂಳೆ ಮತ್ತು ಕೀಲು ನೋವು, ರಕ್ತಸ್ರಾವವಾಗುವುದು ರೋಗ ಲಕ್ಷಣಗಳಾಗಿವೆ ಎಂದು ಹೇಳಿದ್ದಾರೆ.