Advertisement

ಡೆಂಗ್ಯೂ ಜ್ವರದ ಬಗ್ಗೆ ಇರಲಿ ಎಚ್ಚರಿಕೆ

11:39 PM Apr 13, 2022 | Team Udayavani |

ಬೇಸಗೆ ನಡುವೆಯೂ ರಾಜ್ಯದಲ್ಲಿ ಆಗಾಗ್ಗೆ ಮಳೆಯಾಗುತ್ತಿದ್ದು, ಇದು ಡೆಂಗ್ಯೂ ಜ್ವರಕ್ಕೆ ಆಹ್ವಾನ ಕೊಟ್ಟಂತಿದೆ. ಅದೂ ಅಲ್ಲದೆ ಬೆಂಗಳೂರು ವ್ಯಾಪ್ತಿಯಲ್ಲಿ ಕಳೆದ ಮೂರು ತಿಂಗಳಲ್ಲಿ 241 ಡೆಂಗ್ಯೂ ಪ್ರಕರಣಗಳು ಕಾಣಿಸಿಕೊಂಡಿದ್ದು, ಇದು ಆತಂಕಕ್ಕೂ ಕಾರಣವಾಗಿದೆ.

Advertisement

ಕಳೆದ ಎರಡು ವರ್ಷಗಳ ಕಾಲ, ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಅಷ್ಟಕ್ಕಷ್ಟೇ ಎಂಬಂತಿದ್ದವು. ಇದಕ್ಕೆ ಕಾರಣ ಕೊರೊನಾ ಸೋಂಕು. ಕೊರೊನಾದ ಬಗ್ಗೆ ಜನ ಹೆಚ್ಚಿನ ಆಸ್ಥೆ ವಹಿಸಿದ್ದರಿಂದ ಮತ್ತು ಜ್ವರ ಬಂದರೂ ಅದು ಕೊರೊನಾ ಅಥವಾ ಡೆಂಗ್ಯೂ ಎಂಬ ಗೊಂದಲಗಳು ಇದ್ದಿದ್ದರಿಂದ ಅಷ್ಟೇನೂ ಕಾಣಿಸಿರಲಿಲ್ಲ. ಕೊರೊನಾ ಕಾಣಿಸಿಕೊಂಡ ಮೊದಲ ವರ್ಷವಂತೂ ಜನ ತುಸು ಹೆಚ್ಚಿನ ಆಸ್ಥೆಯನ್ನೇ ವಹಿಸಿಕೊಂಡಿದ್ದರು. ಜತೆಗೆ ಕೊರೊನಾ ನಿಯಂತ್ರಣಕ್ಕಾಗಿ ರೋಗ ನಿರೋಧಕ ಔಷಧಗಳನ್ನೂ ಹೆಚ್ಚಾಗಿಯೇ ತೆಗೆದುಕೊಂಡಿದ್ದರು. ಇದರಿಂದಾಗಿ ಡೆಂಗ್ಯೂ ಸೇರಿದಂತೆ ಕೆಲವು ಸಾಂಕ್ರಾಮಿಕ ರೋಗಗಳ ನಿಯಂತ್ರಣವಾಗಿತ್ತು.

ಆದರೆ ಈ ವರ್ಷ ಕೊರೊನಾ ಸೋಂಕಿನ ಭಯ ಒಂದಷ್ಟು ಕಡಿಮೆಯಾಗಿದೆ. ಅಲ್ಲದೆ ಕೊರೊನಾ ಸೋಂಕು ಪ್ರಮಾಣವೂ 100ರ ಒಳಗೇ ಇದೆ. ಹೀಗಾಗಿ ಯಾವುದೇ ಜ್ವರ ಕಾಣಿಸಿಕೊಂಡರೂ ಅದು ಕೊರೊನಾ ಎಂಬ ಭಯದಲ್ಲಿ ಪರೀಕ್ಷೆಗೆ ಹೋಗುತ್ತಿಲ್ಲ. ಇದನ್ನು ಬಿಟ್ಟು, ಬೇರೆ ರೀತಿಯ ಜ್ವರಗಳಿರಬಹುದೇ ಎಂಬ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಇದರಿಂದಾಗಿಯೂ ಡೆಂಗ್ಯೂ ಪ್ರಕರಣಗಳಲ್ಲಿ ಹೆಚ್ಚಾಗಿರಬಹುದು.

ಏನೇ ಆಗಲಿ ಡೆಂಗ್ಯೂ ಜ್ವರದ ಬಗ್ಗೆ ಯಾವುದೇ ಕಾರಣಕ್ಕೂ ಉದಾಸೀನ ಸಲ್ಲದು. ಈಗ ಆಗಾಗ್ಗೆ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮನೆಯ ಸುತ್ತಮುತ್ತ ಇರುವ ಗುಂಡಿಗಳಲ್ಲಿ, ಮನೆ ಬಳಿ ಇರುವ ಪಾತ್ರೆಗಳಲ್ಲಿ ನೀರು ಸಂಗ್ರಹವಾಗುತ್ತದೆ. ಅದರಲ್ಲೂ ಮಹಡಿ

ಮನೆಗಳಾಗಿದ್ದರೆ, ಮೇಲೆ ಕೆಲವೊಂದು ಉಪಯೋಗಕ್ಕೆ ಬಾರದ ಮತ್ತು ನೀರು ತುಂಬುವಂಥ ವಸ್ತುಗಳನ್ನು ಇಡುವುದು ಮಾಮೂಲಿ. ಇಂಥವುಗಳಲ್ಲಿ ನೀರು ತುಂಬಿಕೊಂಡು ಡೆಂಗ್ಯೂಗೆ ಕಾರಣವಾಗುವ ಸೊಳ್ಳೆ ಉತ್ಪತ್ತಿಯಾಗುತ್ತವೆ. ಇಂಥ ವಸ್ತುಗಳ ಬಗ್ಗೆ ಎಚ್ಚರದಿಂದ ಇರುವುದು ಒಳಿತು. ಜತೆಗೆ ಆಗಾಗ್ಗೆ ಪರಿಶೀಲಿಸಿಕೊಂಡು, ನೀರು ತುಂಬಿರುವ ಪಾತ್ರೆಗಳನ್ನು ಖಾಲಿ ಮಾಡಬೇಕು.

Advertisement

ಅಲ್ಲದೆ ಡೆಂಗ್ಯೂನಂಥ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕಾಗಿ ಸಾರ್ವಜನಿಕರು ತಮ್ಮ ಮನೆಯ ಸುತ್ತಮುತ್ತಲಿನ ವಾತಾವರಣವನ್ನು ಸ್ವತ್ಛಗೊಳಿಸಬೇಕು. ಯಾವುದೇ ಜ್ವರವಿರಲಿ ಮೊದಲು ಕಡ್ಡಾಯವಾಗಿ ರಕ್ತ ಪರೀಕ್ಷೆ ಮಾಡಿಸಬೇಕು. ನೀರು ಸಂಗ್ರಹ ಸಾಮಗ್ರಿಗಳನ್ನು ಮುಚ್ಚಿಡಬೇಕು. ತೊಟ್ಟಿಯಂಥವುಗಳನ್ನು ವಾರಕ್ಕೊಮ್ಮೆ ತೊಳೆಯುವ

ಅಭ್ಯಾಸ ಮಾಡಿಕೊಳ್ಳಬೇಕು. ಟೈರ್‌, ಎಳನೀರಿನ ಚಿಪ್ಪು, ಡಬ್ಬ, ಪ್ಲಾಸ್ಟಿಕ್‌ ಕವರ್‌ಗಳನ್ನು ವಿಲೇವಾರಿ ಮಾಡಿ ಸೊಳ್ಳೆಗೆ ಆಶ್ರಯವಾಗುವುದನ್ನು ತಪ್ಪಿಸಬೇಕು.

ಡೆಂಗ್ಯೂನಿಂದ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಅಪಾಯ ಹೆಚ್ಚು. ಅಂದರೆ ಗರ್ಭಿಣಿಯರು, ಮಕ್ಕಳು, ವೃದ್ಧರು, ರೋಗಿಗಳು ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಮನೆ ಸುತ್ತ ಸೊಳ್ಳೆ ಕಾಟ ಹೆಚ್ಚಿದ್ದರೆ ದೇಹ ಪೂರ್ತಿ ಮುಚ್ಚುವಂಥ ಬಟ್ಟೆ ಧರಿಸಿಕೊಳ್ಳಬೇಕು. ಇದೆಲ್ಲದರ ಜತೆಗೆ ನಾವು ಹುಶಾರಾಗಿರಬೇಕು. ಯಾವುದೇ ರೀತಿಯ ಜ್ವರ ಕಂಡರೂ ಉದಾಸೀನ ಮಾಡದೇ ವೈದ್ಯರಲ್ಲಿಗೆ ಹೋಗಿ ತೋರಿಸಿಕೊಳ್ಳಬೇಕು.

Advertisement

Udayavani is now on Telegram. Click here to join our channel and stay updated with the latest news.

Next