Advertisement

ಡೆಂಘೀ ಜ್ವರ: ಬೇನಚಿಂಚೋಳ್ಳಿಗೆ ವೈದ್ಯರ ಭೇಟಿ

02:04 PM Sep 01, 2017 | Team Udayavani |

ಹುಮನಾಬಾದ: ತಾಲೂಕಿನ ಬೇನಚಿಂಚೋಳ್ಳಿಯಲ್ಲಿ ಡೆಂಘೀ ಜ್ವರದ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಜಿಲ್ಲಾ ಮಲೇರಿಯಾ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

Advertisement

ಗ್ರಾಮದಲ್ಲಿ ಮೂರು ಪ್ರಕರಣಗಳು ಪತ್ತೆಯಾಗಿವೆ. ಇಬ್ಬರ ಆರೋಗ್ಯ ಸ್ಥಿತಿ ಸುಧಾರಿಸಿದೆ.
ಇನ್ನೊಬ್ಬನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೀದರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ
ಗ್ರಾಮದಲ್ಲಿನ ಸ್ಥಿತಿಗತಿ ಅರಿಯಲು ಅಧಿಕಾರಿಗಳು ಭೇಟಿ ನೀಡಿದರು. ಡೆಂಘೀ ಜ್ವರ ಶಂಕಿತರ
ಮನೆಗಳಿಗೆ ತೆರಳಿ ಶೇಖರಿಸಿದ ನೀರಿನ ತಪಾಸಣೆ ನಡೆಸಿದರು. ಡೆಂಘೀ ಜ್ವರ ಕುರಿತು ಜನರಲ್ಲಿ
ಜಾಗೃತಿ ಮೂಡಿಸುವ ಕೆಲಸ ಮಾಡಿದರು.

ಗ್ರಾಪಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗ್ರಾಮದಲ್ಲಿ ಡೆಂಘೀ ಜ್ವರ ಹಾಗೂ ಇತರೆ ಸಾಂಕ್ರಾಮಿಕ ರೋಗಗಳು ಬರಲು ಕಾರಣವಾಗಿದೆ. ಕುಡಿಯುವ ನೀರಿನ ಟ್ಯಾಂಕ್‌ ಮೇಲಿಂದ ಮೇಲೆ ಸ್ವತ್ಛಗೊಳಿಸುವುದಿಲ್ಲ. ಗ್ರಾಮದ ಚರಂಡಿಗಳು ಸ್ವತ್ಛವಾಗಿಲ್ಲ. ಸೊಳ್ಳೆಗಳ ಕಾಟ ಹೆಚ್ಚಾಗಿದೆ.
ಅನೇಕರು ಜ್ವರದಿಂದ ಬಳಲಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೂ ಅಧಿಕಾರಿಗಳು
ಗ್ರಾಮದಲ್ಲಿ ಸ್ವತ್ಛತೆ ಕಾಪಾಡುತ್ತಿಲ್ಲ. ಗ್ರಾಪಂನಲ್ಲಿ ಬ್ಲೀಚಿಂಗ್‌ ಪೌಡರ್‌ ಇದ್ದರು ಕೂಡ ಒಂದು ದಿನ
ಬಳಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು. ಇದಕ್ಕೆ ಉತ್ತರಿಸಿದ ಪಿಡಿಒ ಸಂಧ್ಯಾರಾಣಿ,
ಚರಂಡಿ ಅಥವಾ ಇತರೆ ಕೊಳಕು ಪ್ರದೇಶದಿಂದ ಡೆಂಘೀ ಜ್ವರ ಬರುವುದಿಲ್ಲ. ನಿಮ್ಮ ಮನೆಯಲ್ಲಿ
ನೀರು ಸ್ವತ್ಛವಾಗಿಟ್ಟುಕೊಳ್ಳಬೇಕು. ಚರಂಡಿಗಳ ಸ್ವತ್ಛತೆಗೆ ಕಾರ್ಮಿಕರು ಸಿಗುತ್ತಿಲ್ಲ. ಬೇರೆ
ಕಾರ್ಮಿಕರು ಬಂದು ಸ್ವತ್ಛತೆ ಮಾಡುವುದಾಗಿ ಹೇಳಿದ್ದಾರೆ. ಎರಡು ದಿನಗಳಲ್ಲಿ ಸ್ವತ್ಛತೆ
ಕಾಪಾಡುವುದಾಗಿ ಹೇಳಿದರು.

ಪಿಡಿಒ ಮಾತಿಗೆ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು, ಸೊಳ್ಳೆಗಳ ಉತ್ಪತ್ತಿ ಹೇಗೆ ಆಗುತ್ತದೆ
ಎಂದು ಪ್ರಶ್ನಿಸಿದರು. ಗ್ರಾಮದ ಟ್ಯಾಂಕ್‌ಗಳನ್ನು ಎಷ್ಟು ವರ್ಷಗಳ ಹಿಂದೆ ಸ್ವತ್ಛ ಮಾಡಲಾಗಿದೆ
ಎಂಬುವುದು ಗೊತ್ತೆ? ಟ್ಯಾಂಕ್‌ಗಳ ಮೇಲೆ ಮುಚ್ಚಳಿಕೆ ಇಲ್ಲ. ಟ್ಯಾಂಕ್‌ನಲ್ಲಿ ಕಸದ ರಾಶಿ
ತುಂಬಿರುವುದು ನೋಡಿದ್ದೀರೇನು ಎಂದು ಪಿಡಿಒ ಅವರನ್ನು ಪ್ರಶ್ನಿಸಿದರು.

ಈ ಮಧ್ಯೆ ಡಾ| ಅನಿಲ ಚಿಂತಾಮಣಿ ಮಾತನಾಡಿ, ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರು ದೊರೆಯುವಂತೆ ಅಧಿಕಾರಿಗಳು ನೋಡಿಕೊಳ್ಳಬೇಕು. ಟ್ಯಾಂಕ್‌ಗಳು ಸ್ವತ್ಛತೆಗೆ ಮುಂದಾಗಬೇಕು. ಅಸ್ವತ್ಛತೆಯಿಂದ ಸೊಳ್ಳೆಗಳ ಕಾಟ ಹೆಚ್ಚಾಗಿ ಇತರೆ ಸಾಂಕ್ರಾಮಿಕ ರೋಗಗಳು ಉಲ್ಬಣಗೊಳುತ್ತವೆ. ಕುಡಿಯುವ ನೀರಿಗೆ ಸೂಕ್ತ ಪ್ರಮಾಣದಲ್ಲಿ ಬ್ಲೀಚಿಂಗ್‌ ಪೌಡರ್‌ ಬಳಸಬೇಕು. ಆರೋಗ್ಯ ಸಿಬ್ಬಂದಿಗಳು ಮನೆ ಮನೆಗೆ ತೆರಳಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಪಂಚಾಯತ್‌ ಕಟ್ಟಡದಲ್ಲಿ ಒಂದು ವಾರಗಳ ಕಾಲ ಆರೋಗ್ಯ ಸಿಬ್ಬಂದಿಗಳು ಹಗಲು ರಾತ್ರಿ ಇರಲು ಸೂಚಿಸಿದ್ದು, ಜ್ವರದಿಂದ ಬಳಲುತ್ತಿರುವ ರೋಗಿಗಳೆ ಕೂಡಲೇ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗುವುದು. ಆರೋಗ್ಯ ಇಲಾಖೆಗೆ ಪಂಚಾಯತ್‌ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ಸಹಕಾರ ನೀಡಿದರೆ
ರೋಗ ತಡೆಗಟ್ಟಲು ಸಹಕಾರಿಯಾಗುತ್ತದೆ ಎಂದು ಹೇಳಿದರು. ಡಾ| ಸೈಯ್ಯದ್‌ ಇಸ್ಮಾಯಿಲ್‌,
ಮಲ್ಲಿಕಾರ್ಜುನ ಸದಾಶಿವ, ಶಿವಕಾಂತ ಸೇರಿದಂತೆ ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next