ರಾಜ್ಯದಲ್ಲಿ ಮುಂಗಾರು ಮಳೆ ಆರಂಭವಾಗಿ ತಿಂಗಳು ಕಳೆದಿದ್ದರೂ ರಾಜ್ಯವ್ಯಾಪಿಯಾಗಿ ನೈಋತ್ಯ ಮಾರುತಗಳು ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಸುರಿಸಿಲ್ಲ. ಮಳೆಯ ಈ ಕಣ್ಣಾಮುಚ್ಚಾಲೆಯಾಟದಿಂದ ರಾಜ್ಯದ ಬಹುತೇಕ ಕಡೆಗಳಲ್ಲಿ ಮಳೆಗಾಲದಲ್ಲಿ ಸಾಮಾನ್ಯವಾಗಿ ಬಾಧಿಸುವ ವಿವಿಧ ಮಾದರಿಯ ಸಾಂಕ್ರಾಮಿಕ ಕಾಯಿಲೆಗಳು ಜನರನ್ನು ಕಾಡಲಾರಂಭಿಸಿದೆ.
ಈ ಬಾರಿ ರಾಜ್ಯದ ಎಲ್ಲೆಡೆ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಅಧಿಕವಾಗಿದ್ದು ದಿನೇದಿನೆ ಪ್ರಕರಣಗಳ ಸಂಖ್ಯೆ ಮತ್ತು ಆಸ್ಪತ್ರೆಗಳಿಗೆ ದಾಖಲಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಈಗಾಗಲೇ ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ 6,600ರ ಗಡಿ ದಾಟಿದ್ದರೆ ಕಳೆದೊಂದು ತಿಂಗಳ ಅವಧಿಯಲ್ಲಿ 2 ಸಾವಿರ ಮಂದಿ ಡೆಂಗ್ಯೂ ಸೋಂಕಿನಿಂದ ಬಾಧಿತರಾಗಿ ದ್ದಾರೆ. ಡೆಂಗ್ಯೂ ಜ್ವರದಿಂದ ರಾಜ್ಯದಲ್ಲಿ ಈವರೆಗೆ 7 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಇನ್ನು ಮಲೇರಿಯಾ, ಎಚ್1ಎನ್1, ವಿವಿಧ ತೆರನಾದ ವೈರಲ್ ಜ್ವರ ಮತ್ತು ಕಲುಷಿತ ನೀರು ಸೇವನೆಯಿಂದ ಕಾಲರಾ, ಅತಿಸಾರ ಭೇದಿ ಮತ್ತಿತರ ಕಾಯಿಲೆಗಳು ಮಳೆಗಾಲದಲ್ಲಿ ಜನರನ್ನು ಬಾಧಿಸುವುದು ಸಾಮಾನ್ಯ. ಈ ಸಾಂಕ್ರಾಮಿಕ ಕಾಯಿಲೆಗಳ ಪ್ರಕರಣಗಳು ಕೂಡ ರಾಜ್ಯದ ಅಲ್ಲಲ್ಲಿ ವರದಿಯಾಗಿವೆ.
ರಾಜ್ಯದ ಅಲ್ಲಲ್ಲಿ ಸರಕಾರಿ ಆಸ್ಪತ್ರೆಗಳಲ್ಲಿ ಸಮರ್ಪಕ ಔಷಧ ಮತ್ತು ಚಿಕಿತ್ಸಾ ವ್ಯವಸ್ಥೆ ಇಲ್ಲದಿರುವ ಬಗೆಗೆ ಸಾರ್ವಜನಿಕರಿಂದ ದೂರುಗಳು ಕೇಳಿಬಂದಿವೆ. ಇದೇ ವೇಳೆ ಖಾಸಗಿ ಆಸ್ಪತ್ರೆಗಳಲ್ಲೂ ಡೆಂಗ್ಯೂ ಪರೀಕ್ಷೆಗೆ ಹಚ್ಚಿನ ಶುಲ್ಕ ವಿಧಿಸುತ್ತಿರುವ ಸಂಬಂಧ ವ್ಯಾಪಕ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಸರಕಾರ ಕೊನೆಗೂ ಜನರ ಅಳಲಿಗೆ ಸ್ಪಂದಿಸಿದೆ. ಡೆಂಗ್ಯೂ ಪರೀಕ್ಷೆಗೆ ರಾಜ್ಯಾದ್ಯಂತ ಅನ್ವಯವಾಗುವಂತೆ ಏಕರೂಪದ ದರವನ್ನು ನಿಗದಿ ಪಡಿಸಿ ನಿರ್ದೇಶನ ಹೊರಡಿಸಿದೆ. ಇದರಿಂದ ಖಾಸಗಿ ಆಸ್ಪತ್ರೆಗಳ ವಸೂಲಿ ಪ್ರವೃತ್ತಿಗೆ ಕಡಿವಾಣ ಬಿದ್ದು, ಬಡ ರೋಗಿಗಳು ತಮ್ಮ ಸನಿಹದ ಖಾಸಗಿ ಆಸ್ಪತ್ರೆಗಳಲ್ಲೂ ಡೆಂಗ್ಯೂ ಪರೀಕ್ಷೆ ಮಾಡಿಸಿಕೊಳ್ಳಲು ಅನುಕೂಲವಾಗಲಿದೆ.
ಸರಕಾರಿ ಆಸ್ಪತ್ರೆಗಳಲ್ಲಿನ ಕುಂದುಕೊರತೆಗಳತ್ತಲೂ ಆರೋಗ್ಯ ಇಲಾಖೆ ಗಮನ ಹರಿಸಿದೆ. ಸರಕಾರಿ ಆಸ್ಪತ್ರೆಗಳಿಗೆ ಉಚಿತ ಟೆಸ್ಟಿಂಗ್ ಕಿಟ್ ಪೂರೈಸಲಾಗಿದೆಯಲ್ಲದೆ ಪರೀಕ್ಷೆಯನ್ನೂ ಉಚಿತವಾಗಿ ನಡೆಸಲು ಮತ್ತು ಸಾಕಷ್ಟು ಪ್ರಮಾಣದಲ್ಲಿ ಅಗತ್ಯ ಔಷಧಗಳನ್ನು ಕೂಡ ಪೂರೈಕೆ ಮಾಡಲು ನಿರ್ದೇಶನ ನೀಡಲಾಗಿದೆ. ಅಷ್ಟು ಮಾತ್ರವಲ್ಲದೆ ಸರಕಾರಿ ಆಸ್ಪತ್ರೆಗಳಿಗೆ ದಾಖಲಾಗುವ ರೋಗಿಗಳಿಗೆ ಸೂಕ್ತ ಮತ್ತು ಸಮರ್ಪಕ ಚಿಕಿತ್ಸೆ ಲಭಿಸುವಂತಾಗಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಈ ಆದೇಶಗಳು ವಸ್ತುಶಃ ಕಾರ್ಯ ಗತವಾಗುವಂತೆ ನೋಡಿಕೊಳ್ಳುವುದು ಸರಕಾರದ ಹೊಣೆಗಾರಿಕೆಯಾಗಿದೆ.
ಸಾಂಕ್ರಾಮಿಕ ಕಾಯಿಲೆಗಳು ಉಲ್ಬಣಗೊಳ್ಳಲು ಜನರ ನಿರ್ಲಕ್ಷ್ಯ ಮತ್ತು ಅಸಡ್ಡೆ ಪ್ರವೃತ್ತಿಯೂ ಒಂದು ಪ್ರಮುಖ ಕಾರಣ. ಯಾವುದೇ ತೆರನಾದ ಜ್ವರ, ಶೀತ ಬಾಧಿಸಿದ ಸಂದರ್ಭದಲ್ಲಿ ಜನರು ಸ್ವಯಂ ಚಿಕಿತ್ಸಕರಾಗಿ ವಿವಿಧ ತೆರನಾದ ಗುಳಿಗೆ ಗಳನ್ನು ನುಂಗುವ ಬದಲಾಗಿ, ವೈದ್ಯರನ್ನು ಭೇಟಿಯಾಗಿ ಪರೀಕ್ಷೆ ಮಾಡಿಸಿಕೊಂಡು, ಔಷಧ, ಚಿಕಿತ್ಸೆಗಳನ್ನು ಪಡೆದುಕೊಳ್ಳಬೇಕು.
ಡೆಂಗ್ಯೂ, ಮಲೇರಿಯಾ ಆದಿಯಾಗಿ ಮಳೆಗಾಲದಲ್ಲಿ ಕಾಣಿಸಿಕೊಳ್ಳುವ ಬಹು ತೇಕ ಸಾಂಕ್ರಾಮಿಕ ಕಾಯಿಲೆಗಳ ಹರಡುವಿಕೆಯಲ್ಲಿ ಸೊಳ್ಳೆ ಪ್ರಮುಖ ಪಾತ್ರ ವಹಿಸು ವುದರಿಂದ ಸೊಳ್ಳೆಗಳ ನಿಯಂತ್ರಣ ಬಲುಮುಖ್ಯ. ನಗರ ಮತ್ತು ಗ್ರಾಮೀಣ ಭಾಗ ದಲ್ಲಿನ ವಸತಿ ಪ್ರದೇಶಗಳು ಮತ್ತು ಸಾರ್ವಜನಿಕ ಸ್ಥಳಗಳ ಶುಚಿತ್ವಕ್ಕೆ ಜನರು ಮತ್ತು ಸ್ಥಳೀಯಾಡಳಿತ ಸಂಸ್ಥೆಗಳು ಹೆಚ್ಚಿನ ಒತ್ತು ನೀಡಬೇಕು. ಹೊಂಡ-ಗುಂಡಿಗಳು ಮತ್ತು ತಗ್ಗು ಪ್ರದೇಶಗಳಲ್ಲಿ ಮಳೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಮನೆಯ ಸುತ್ತಮುತ್ತಲಿನ ಪರಿಸರದಲ್ಲಿ ನೈರ್ಮಲ್ಯ ಕಾಪಾಡುವುದರಿಂದ ಇಂತಹ ಸಾಂಕ್ರಾ ಮಿಕ ಕಾಯಿಲೆಗಳಿಂದ ದೂರವುಳಿಯಲು ಸಾಧ್ಯ. ಇವೆಲ್ಲದರತ್ತ ಸ್ವಯಂ ಜಾಗೃತಿ ಅತ್ಯವಶ್ಯ.