Advertisement

ಡೆಂಘೀಗೆ ಭಯ ಪಡುವ ಅಗತ್ಯವಿಲ್ಲ

02:25 PM May 18, 2019 | Team Udayavani |

ಕೊಪ್ಪಳ: ನಗರದ ಹಳೇ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಆರೋಗ್ಯ ಇಲಾಖೆಯಿಂದ ಆಯೋಜಿಸಿದ್ದ ರಾಷ್ಟ್ರೀಯ ಡೆಂಘೀ ದಿನಾಚರಣೆಯ ಅಂಗವಾಗಿ ಆರೋಗ್ಯ ಇಲಾಖೆಯಿಂದ ಹಮ್ಮಿಕೊಂಡ ಜನ ಜಾಗೃತಿ ಜಾಥಕ್ಕೆ ಜಿಲ್ಲಾ ಆರ್‌.ಸಿ.ಎಚ್ ಅಧಿಕಾರಿ ಡಾ| ಲಿಂಗರಾಜ್‌ ಚಾಲನೆ ನೀಡಿದರು.

Advertisement

ಬಳಿಕ ಮಾತನಾಡಿದ ಅವರು, ಜಿಲ್ಲೆಯಲ್ಲಿ ಡೆಂಘೀ ನಿಯಂತ್ರಣ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಡೆಂಘೀ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯಿಂದ ಎಲ್ಲ ಸೂಕ್ತ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ಡೆಂಘೀ ಜ್ವರಕ್ಕೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲದಿದ್ದರೂ ಜನರೂ ಭಯಪಡುವ ಅವಶ್ಯಕತೆಯಿಲ್ಲ. ಲಕ್ಷಣಗಳನ್ನಾಧರಿಸಿ ಚಿಕಿತ್ಸೆ ನೀಡಲಾಗುವುದು. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ಮತ್ತು ಪ್ರಯೋಗಾಲಯ ಪರೀಕ್ಷೆಗಳನ್ನು ಮಾಡಲಾಗುತ್ತಿದ್ದು, ಜನರು ಅನಗತ್ಯ ಭಯಕ್ಕೆ ಒಳಗಾಗದೇ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬೇಕು ಎಂದರು.

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ| ಜಂಬಯ್ಯ ಬಿ. ಮಾತನಾಡಿ, ಡೆಂಘೀ ಜ್ವರವು ಈಡಿಸ್‌ ಜಾತಿಯ ಸೊಳ್ಳೆ ಕಚ್ಚುವಿಕೆಯಿಂದ ಹರಡುತ್ತದೆ. ಇವು ಹಗಲು ಹೊತ್ತಿನಲ್ಲೇ ಕಚ್ಚುತ್ತವೆ. ಈಡಿಸ್‌ ಸೊಳ್ಳೆಗಳು ನೀರು ಶೇಖರಣೆ ಸಲಕರಣೆಗಳಲ್ಲಿ ಶುದ್ಧ ನೀರಿನಲ್ಲಿಯೇ ಸಂತಾನಾಭಿವೃದ್ಧಿ ಮಾಡುತ್ತವೆ. ಆದ್ದರಿಂದ ನೀರು ಶೇಖರಣೆ ಸಲಕರಣೆಗಳನ್ನು ಸದಾಕಾಲ ಮುಚ್ಚಿಡಬೇಕು ಹಾಗೂ ಮನೆಯ ಒಳಗೆ ಮತ್ತು ಹೊರಗೆ ನೀರು ನಿಲ್ಲದಂತೆ ಎಚ್ಚರ ವಹಿಸಿ ಸೊಳ್ಳೆ ಉತ್ಪತ್ತಿಯನ್ನು ತಡೆಗಟ್ಟಲು, ಮನೆಗಳ ಸುತ್ತಮುತ್ತ ಸ್ವಚ್ಛತೆ ಕಾಪಾಡಲು ಜನಸಮುದಾಯಕ್ಕೆ ತಿಳಿಸಿದರು.

ಜಿಲ್ಲಾ ಕೀಟಜನ್ಯ ರೋಗಗಳ ಸಲಹೆಗಾರ ರಮೇಶ್‌ ಕೆ. ಮಾತನಾಡಿ, ಯಾವುದೇ ಜ್ವರವಿರಲಿ ಶೀಘ್ರವೇ ಹತ್ತಿರದ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ರಕ್ತ ಪರೀಕ್ಷೆ ಮಾಡಿಸಿ ಉಚಿತ ಚಿಕಿತ್ಸೆ ಪಡೆಯಬೇಕು. ಮಲಗುವಾಗ ಸೊಳ್ಳೆ ಪರದೆಗಳನ್ನು ಬಳಸಲು ಹಾಗೂ ವಾರಕ್ಕೊಮ್ಮೆ ನೀರು ಶೇಖರಣೆ ಸಲಕರಣೆಗಳನ್ನು ಖಾಲಿ ಮಾಡಿ ಸ್ವಚ್ಛಗೊಳಿಸಿ ನೀರು ತುಂಬಿ ಮುಚ್ಚಿಡಲು ಜನಸಮುದಾಯಕ್ಕೆ ಮನವಿ ಮಾಡಿದರು. ಡೆಂಘೀ ಜ್ವರ ನಿಯಂತ್ರಣಕ್ಕೆ ಸೊಳ್ಳೆ ಉತ್ಪತ್ತಿ ತಾಣಗಳ ನಿರ್ಮೂಲನೆ ಹಾಗೂ ಜನ ಜಾಗೃತಿಯೊಂದೇ ಪರಿಹಾರ ಮಾರ್ಗ ಎಂದರು.

ಕೊಪ್ಪಳ ತಾಲೂಕು ಆರೋಗ್ಯಾಧಿಕಾರಿ ಡಾ| ರಾಮಾಂಜನೇಯಲು, ರಸಾಯನಿಕ ಪರೀಕ್ಷಕ ಡಾ| ಪ್ರಶಾಂತ್‌, ಉಪ ಜಿಲ್ಲಾ ಆರೋಗ್ಯ ಶಿಕ¡ಣಾಧಿಕಾರಿ ಶಿವಾನಂದ ಪೂಜಾರ ಸೇರಿದಂತೆ ಜಿಲ್ಲಾ ಆರೋಗ್ಯ ಇಲಾಖೆಯ ಸಿಬ್ಬಂದಿ, ಕಿರಿಯ ಮಹಿಳಾ ತರಬೇತಿ ಕೇಂದ್ರದ ವಿದ್ಯಾರ್ಥಿನಿಯರು ಹಾಗೂ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರು, ಕೊಪ್ಪಳ ತಾಲೂಕು ಆರೋಗ್ಯಾಧಿಕಾರಿ ಕಚೇರಿಯ ಹಾಗೂ ನಗರ ಆರೋಗ್ಯ ಕೇಂದ್ರದ ಸಿಬ್ಬಂದಿ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next