Advertisement
ಜಿಲ್ಲೆಯಲ್ಲಿ ಸುಮಾರು 400 ಮಂದಿಯಲ್ಲಿ ಡೆಂಗ್ಯೂ ಮಾದರಿಯ ಜ್ವರ ಕಾಣಿಸಿಕೊಂಡಿದ್ದು, ಈ ಪೈಕಿ 124 ಮಂದಿಯಲ್ಲಿ ದೃಢಪಟ್ಟಿದೆ. ಗುರುವಾರದವರೆಗೆ 39 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈಗ 9 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದು, ಉಳಿದ 30 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಲ್ಲರೂ ಗುಣಮುಖ ರಾಗುತ್ತಿದ್ದಾರೆ ಎಂದು ಜಿಲ್ಲಾ ಸರ್ವೆಲೆನ್ಸ್ ಅಧಿಕಾರಿ ಡಾ| ನವೀನ್‌ಚಂದ್ರ ಕುಲಾಲ್ ತಿಳಿಸಿದ್ದಾರೆ.
ನಗರದ ಖಾಸಗಿ ಪ್ರೌಢಶಾಲೆಯೊಂದರ ಮೂವರು ವಿದ್ಯಾರ್ಥಿಗಳಲ್ಲಿ ಡೆಂಗ್ಯೂ ಜ್ವರ ಕಾಣಿಸಿಕೊಂಡಿರುವುದಾಗಿ ಸಂದೇಶಗಳು ಹರಿದಾಡುತ್ತಿವೆ. ಆದರೆ ಈ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ವಿಚಾರಣೆ ಮಾಡಲಾಗುತ್ತಿದೆ ಎಂದು ಡಾ| ನವೀನ್‌ಕುಮಾರ್ ತಿಳಿಸಿದ್ದಾರೆ. ನೀರು ನಿಲ್ಲದಂತೆ ನೋಡಿಕೊಳ್ಳಿ
ಮಂಗಳೂರಿನ ಕದ್ರಿ, ಬೆಂಗ್ರೆ, ಬಂದರು ಮುಂತಾದೆಡೆ ಸೊಳ್ಳೆ ಉತ್ಪತ್ತಿ ತಾಣ ಹೆಚ್ಚುತ್ತಿದೆ. ಇದರಿಂದ ಡೆಂಗ್ಯೂ, ಮಲೇರಿಯಾದಂತಹ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಅಧಿಕವಾಗಿರುತ್ತದೆ. ಜನ ಆದಷ್ಟು ಸುತ್ತಮುತ್ತಲಿನ ಪ್ರದೇಶ, ಮನೆಯ ಮಹಡಿಗಳಲ್ಲಿ ನೀರು ನಿಲ್ಲದಂತೆ ಜಾಗ್ರತೆ ವಹಿಸಬೇಕು. ಶುದ್ಧ ನೀರು ಮತ್ತು ಕೊಳಚೆ ನೀರು ಎರಡರಲ್ಲೂ ಸೊಳ್ಳೆ ಉತ್ಪತ್ತಿಗೆ ಪೂರಕ ವಾಗಿರುವುದರಿಂದ ನೀರು ನಿಲ್ಲಿಸದೆ ಶುಚಿಗೊಳಿಸಬೇಕು. ರಾತ್ರಿ ಮಲಗುವಾಗ ಸೊಳ್ಳೆ ಪರದೆ ಬಳಕೆ ಮಾಡಬೇಕು. ಬೇವಿನ ಎಣ್ಣೆ ಮುಂತಾದವನ್ನು ಹಚ್ಚಿ ಮಲಗಬೇಕು ಎಂದು ವೈದ್ಯಾಧಿಕಾರಿಗಳು ಮನವಿ ಮಾಡಿದ್ದಾರೆ. ಜಿಲ್ಲೆಯಲ್ಲಿ ಮಲೇರಿಯಾ ಸಂಖ್ಯೆ ಕಡಿಮೆ ಇದೆ.
Related Articles
ಮಲೇರಿಯಾ, ಡೆಂಗ್ಯೂ ಹೆಚ್ಚುತ್ತಿರುವ ಪ್ರದೇಶಗಳಿಗೆ ನಗರ ಪಾಲಿಕೆಯಿಂದ ನಿರಂತರ ಸಮೀಕ್ಷೆ ಮತ್ತು ಸೊಳ್ಳೆಗಳ ಉತ್ಪತ್ತಿ ಪ್ರದೇಶಗಳನ್ನು ನಾಶಪಡಿಸಲು ಕ್ರಮ ಕೈಗೊಳ್ಳುವಂತೆ ಜಿ.ಪಂ. ಸಿಇಒ ಡಾ| ಸೆಲ್ವಮಣಿ ಮಂಗಳೂರು ಮನಪಾಗೆ ನಿರ್ದೇಶನ ನೀಡಿದ್ದಾರೆ.
Advertisement