ಮೈಸೂರು: ಡೆಂಘೀ ಜ್ವರದಿಂದಾಗಿ ನಗರದ ಮಹಾರಾಣಿ ಕಾಲೇಜು ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ. ಕೆ.ಆರ್.ನಗರದ ನಿವಾಸಿ ಹಾಗೂ ಮಹಾರಾಣಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದ ಸಂಚಿತ ಎಸ್. ಆರಾಧ್ಯ ಮೃತ ವಿದ್ಯಾರ್ಥಿನಿ.
ನಗರದ ಮಹಾರಾಣಿ ವಿಜಾnನ ಹಾಸ್ಟೆಲ್‌ನಲ್ಲಿ ಕಳೆದ ಎರಡು ವರ್ಷಗಳಿಂದ ಉಳಿದುಕೊಂಡಿದ್ದ ಸಂಚಿತ ನಾಲ್ಕೈದು ದಿನಗಳಿಂದ ಜ್ವರದಿಂದ ಬಳಲುತ್ತಿದ್ದಳು. ಹೀಗಾಗಿ ಈಕೆಯನ್ನು ನಗರದ ಜೆಎಸ್‌ಎಸ್ ಆಸ್ಪತ್ರೆಗೆ ದಾಖಲಿಸಿದ್ದ ಸಂದರ್ಭದಲ್ಲಿ ಈಕೆಗೆ ಡೆಂಘೀ ಇರುವುದು ಕಂಡು ಬಂದಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದ ಪರಿಣಾಮ ಸಂಚಿತ ಶುಕ್ರವಾರ ಮ್ರತಪಟ್ಟಿದ್ದಾಳೆ. ಈ ಸಂಬಂಧ ದೇವರಾಜ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿದ್ಯಾರ್ಥಿನಿ ಸಂಚಿತ ಸಾವಿಗೆ ಹಾಸ್ಟೆಲ್ ಅಶುಚಿತ್ವವೇ ಕಾರಣ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ಕಲುಷಿತ ನೀರಿಂದ ಹಲವರಿಗೆ ಜ್ವರ: ಡೆಂಘೀ ಜ್ವರದಿಂದ ಮೃತಪಟ್ಟ ವಿದ್ಯಾರ್ಥಿನಿ ಸಂಚಿತ ಸಾವಿಗೆ ಹಾಸ್ಟೆಲ್ ಅವ್ಯವಸ್ಥೆಯೇ ಕಾರಣ ಎಂದು ಆರೋಪಿಸಿ ಹಲವು ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದರು.
ನಗರದ ಜೆಎಲ್‌ಬಿ ರಸ್ತೆಯಲ್ಲಿರುವ ಹಾಸ್ಟೆಲ್ ಎದುರು ಜಮಾಯಿಸಿದ ವಿದ್ಯಾರ್ಥಿನಿಯರು, ಹಾಸ್ಟೆಲ್‌ನ ಅವ್ಯವಸ್ಥೆ ಹಾಗೂ ಅಶುಚಿತ್ವವನ್ನು ಸರಿಪಡಿಸುವಂತೆ ಹಾಗೂ ಹಾಸ್ಟೆಲ್‌ನ ವಾರ್ಡನ್ ಬದಲಿಸುವಂತೆ ಆಗ್ರಹಿಸಿದರು. ಹಾಸ್ಟೆಲ್‌ನಲ್ಲಿ ಕಲುಷಿತ ಕುಡಿಯುವ ನೀರು ಪೂರೈಕೆಯಾಗುತ್ತಿದ್ದು, ಇದನ್ನು ಸೇವಿಸಿದ ಪರಿಣಾಮ ಸಂಚಿತ ಸೇರಿದಂತೆ ಹಲವರಿಗೆ ಜ್ವರ ಬಂದಿದೆ.
ಹೀಗಾಗಿ ಇಲ್ಲಿನ ವಿದ್ಯಾರ್ಥಿನಿಯರು ಆತಂಕದಲ್ಲಿ ಬದುಕುವ ಸ್ಥಿತಿ ನಿರ್ಮಾಣವಾಗಿದ್ದು, ಸಂಬಂಧಪಟ್ಟವರು ಕೂಡಲೇ ಈ ಸಮಸ್ಯೆಯನ್ನು ಸರಿಪಡಿಸಬೇಕೆಂದು ಪಟ್ಟು ಹಿಡಿದರು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಸಂಬಂಧಪಟ್ಟ ಅಧಿಕಾರಿಗಳು, ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ನಂತರ ವಿದ್ಯಾರ್ಥಿನಿಯರು ಪ್ರತಿಭಟನೆ ಹಿಂಪಡೆದರು.