Advertisement
ಈ ವರ್ಷ ಮಳೆಗಾಲಕ್ಕೂ ಮೊದಲೇ ಡೆಂಗ್ಯೂ ಜ್ವರ ತಾಲೂಕಿನಲ್ಲಿ ರೌದ್ರಾವತಾರ ತೋರಲು ಆರಂಭಿಸಿದ್ದು, ಮಳೆ – ಬಿಸಿಲಿನ ಆಟ ರೋಗ ಹರಡುವ ಭೀತಿ ಮೂಡಿಸಿದೆ. ಸುಳ್ಯದ ತಾಲೂಕು ಆಸ್ವತ್ರೆ ಮತ್ತು ಆರು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಜ್ವರ ಪೀಡಿತರೇ ತುಂಬಿ ತುಳುಕುತ್ತಿದ್ದಾರೆ. ಸುಳ್ಯ ತಾಲೂಕು ಆಸ್ಪತ್ರೆಯ ಹೊರರೋಗಿ ಚಿಕಿತ್ಸಾ ವಿಭಾಗದಲ್ಲಿ ಪ್ರತಿದಿನ 350ಕ್ಕೂ ಹೆಚ್ಚು ರೋಗಿಗಳು ಬರುತ್ತಿದ್ದು, ಈ ಪೈಕಿ ಅರ್ಧಕ್ಕೂ ಹೆಚ್ಚು ಜನರಲ್ಲಿ ಜ್ವರ ಇರುತ್ತಿದೆ. ಆಸ್ಪತ್ರೆಯಲ್ಲಿ 30ಕ್ಕೂ ಹೆಚ್ಚು ಮಂದಿ ಜ್ವರದಿಂದ ಬಳಲಿ ಒಳರೋಗಿಗಳಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶಂಕಿತ ಪ್ರಕರಣಗಳ ಕುರಿತು ಆರೋಗ್ಯಇಲಾಖೆ ನಿಗಾ ಇರಿಸಿದೆ. ಈ ನಡುವೆ ಡೆಂಗ್ಯೂ ತನ್ನ ಪ್ರಾಬಲ್ಯ ಹೆಚ್ಚಿಸುತ್ತಲೇ ಇದೆ. ನಾಗರಿಕರು ಖಾಸಗಿ ಕೇಂದ್ರಗಳ ಲ್ಯಾಬ್‌ನಲ್ಲಿ ಎನ್‌ಎಸ್1-ಐಎಎ ರಕ್ತಪರೀಕ್ಷೆ ಮಾಡಿಸಿಕೊಂಡು ರೋಗದ ಗುಣಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇಂಥವುಗಳನ್ನು ಇಲಾಖೆ ಶಂಕಿತ ಪ್ರಕರಣವೆಂದು ಪರಿಗಣಿಸುತ್ತಿದೆ. ಅಧಿಕೃತವೆನಿಸಲು ಜಿಲ್ಲಾ ಆರೋಗ್ಯ ಇಲಾಖೆಯ ಲ್ಯಾಬ್‌ನಲ್ಲಿ ಎಲಿಸಾ ಪರೀಕ್ಷೆ ನಡೆಸಬೇಕಾಗಿದ್ದು, ಅಲ್ಲಿ ಪಾಸಿಟಿವ್ ಎಂದು ಕಂಡುಬಂದಲ್ಲಿ ಇಲಾಖೆ ಅಧಿಕೃತ ಡೆಂಗ್ಯೂ ಪ್ರಕರಣವೆಂಬುದಾಗಿ ಪರಿಗಣಿಸುತ್ತದೆ.
Related Articles
ಜ್ವರ, ಗಂಟು ನೋವು, ವಿಪರೀತ ಸುಸ್ತು ಕಾಣಿಸಿಕೊಳ್ಳುವುದು ಈ ರೀತಿಯ ಲಕ್ಷಣ ಕಂಡುಬಂದಲ್ಲಿ ಕೂಡಲೇ ವೈದ್ಯರ ಸಲಹೆ ಪಡೆದು ಔಷಧಿ ತೆಗೆದುಕೊಳ್ಳುವುದು ಅವಶ್ಯ. ಇದಕ್ಕೆ ಪ್ರತ್ಯೇಕ ಔಷಧಿ ಇಲ್ಲವಾಗಿದ್ದು, ರೋಗ ಲಕ್ಷಣಗಳಿಗೆ ಅನುಸಾರವಾಗಿ ಔಷಧ ಸೇವಿಸಿ, ವಿಶ್ರಾಂತಿ ತೆಗೆದುಕೊಳ್ಳುವುದು ಮುಖ್ಯ.
Advertisement
ಮಂಜಾಗ್ರತಾ ಕ್ರಮನೀರು ಶೇಖರಣೆಗೊಂಡು ಅದರಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಇದನ್ನು ತಡೆಗಟ್ಟುವುದು. ಅಡಿಕೆ ತೋಟದಲ್ಲಿ ಹಾಳೆ, ಎಳನೀರಿನ ಸಿಪ್ಪೆ, ಗೆರೆಟೆ, ಕೊಕ್ಕೊ ಸಿಪ್ಪೆಯಲ್ಲಿ ನೀರು ನಿಂತು ಸೊಳ್ಳೆ ಉತ್ಪತಿಯಾಗದಂತೆ ಎಚ್ಚರ ವಹಿಸಬೇಕು. ಸೊಳ್ಳೆ ಕಚ್ಚುವುದರಿಂದ ರೋಗ ಹರಡುತ್ತದೆ. ಹೀಗಾಗಿ ಎಲ್ಲಿಯೂ ನೀರು ನಿಲ್ಲಲು ಅವಕಾಶ ಕೊಡದೆ ಸೊಳ್ಳೆ ಬೆಳೆಯದಂತೆ ನೋಡಿಕೊಳ್ಳಬೇಕು. ಸಂಜೆ ಹೊತ್ತಲ್ಲಿ ಮನೆಯಲ್ಲಿ ಕಿಟಕಿ, ಬಾಗಿಲುಗಳನ್ನು ಮುಚ್ಚಿ ಮಲಗುವ ವೇಳೆ ಸೊಳ್ಳೆ ಪರದೆಯನ್ನು ಉಪಯೋಗಿಸಬೇಕು. ತೋಟಕ್ಕೆ ತೆರಳುವಾಗ ಬಟ್ಟೆಗಳಿಂದ ದೇಹವನ್ನು ಪೂರ್ತಿ ಮುಚ್ಚಬೇಕು. ಆರೋಗ್ಯ ಇಲಾಖೆಯ ಆರೋಗ್ಯ ಸಹಾಯಕಿಯರು ಹಾಗೂ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಡೆಂಗ್ಯೂ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಹೆಚ್ಚಿನ ಪರೀಕ್ಷೆಗೆ ರವಾನೆ
ಆರು ಡೆಂಗ್ಯೂ ಜ್ವರ ಪ್ರಕರಣಗಳು ತಾಲೂಕಿನಲ್ಲಿ ಈಗಾಗಲೇ ದೃಢಪಟ್ಟಿವೆ. ಡೆಂಗ್ಯೂ ಜ್ವರದ ಶಂಕೆ ಕಂಡುಬಂದರೆ ಅಂತಹ ರೋಗಿಗಳ ರಕ್ತದ ಸ್ಯಾಂಪಲ್ ಸಂಗ್ರಹಿಸಿ ಹೆಚ್ಚಿನ ಪರೀಕ್ಷೆಗಾಗಿ ಜಿಲ್ಲಾ ಕೇಂದ್ರಕ್ಕೆ ಕಳುಹಿಸಲಾಗುತ್ತಿದೆ. ವೈರಲ್ ಜ್ವರದ ಜತೆಗೆ ಗ್ರಾಮೀಣ ಭಾಗದಲ್ಲಿ ಅಲ್ಲಲ್ಲಿ ಡೆಂಗ್ಯೂ ಜ್ವರವೂ ಕಾಣಿಸಿಕೊಳ್ಳುತ್ತಿರುವುದರಿಂದ ಮುಂಜಾಗ್ರತೆ ವಹಿಸಬೇಕು.
- ಡಾ| ಸುಬ್ರಹ್ಮಣ್ಯ, ತಾಲೂಕು ಆರೋಗ್ಯಾಧಿಕಾರಿ ಬಾಲಕೃಷ್ಣ ಭೀಮಗುಳಿ