ದೋಟಿಹಾಳ: ಜಿಲ್ಲೆಯ ಗಡಿಭಾಗದಲ್ಲಿರುವ ಕಿಲಾರಹಟ್ಟಿ ಗ್ರಾಪಂ ವ್ಯಾಪ್ತಿಯ ಕಳಮಳ್ಳಿ ತಾಂಡಾದಲ್ಲಿ ಕಳೆದ 10-15 ದಿನಗಳಿಂದ ನೆಗಡಿ, ಕೆಮ್ಮು, ಚಳಿಜ್ವರದಿಂದ ಜನ ತತ್ತರಿಸಿ ಹೋಗಿದ್ದಾರೆ.
ಆರೋಗ್ಯ ಇಲಾಖೆ ಹರಸಾಹಸ ಪಡುತ್ತಿದ್ದರೂ ಜ್ವರ ಬಾಧಿಸುವುದನ್ನು ನಿಯಂತ್ರಿಸಲು ಆಗುತ್ತಿಲ್ಲ. ತಾಂಡಾದಲ್ಲಿ ಹಲವರು ಜ್ವರ, ನೆಗಡಿಯಿಂದ ಬಳಲುತ್ತಿದ್ದಾರೆ. ಆದರೆ ಇವರಲ್ಲಿ ಸದ್ಯ 9 ಜನರಿಗೆ ಡೆಂಘೀ ಜ್ವರ ಇರುವುದು ದೃಢಪಟ್ಟಿದೆ. ಈ ತಾಂಡಾ ಮುದೇನೂರು ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿದೆ. ತಾಂಡಾದಲ್ಲಿ 250ಕ್ಕೂ ಹೆಚ್ಚು ಮನೆಗಳು ಇವೆ. ಕಳೆದ ಒಂದು ತಿಂಗಳಿಂದ ಸುಮಾರು 150ಕ್ಕೂ ಹೆಚ್ಚು ಜನರಲ್ಲಿ ಶಂಕಿತ ಡೆಂಘೀ ಜ್ವರ ಕಾಣಿಸಿಕೊಂಡಿದೆ. ಸದ್ಯಕ್ಕೆ ಆರೋಗ್ಯ ಇಲಾಖೆ ವರದಿ ಪ್ರಕಾರ 9 ಜನರಿಗೆ ಡೆಂಘೀ ಜ್ವರ ಇರುವುದು ದೃಢಪಟ್ಟಿದೆ. ತಾಂಡಾದ ಕೆಲವರಲ್ಲಿ ಡೆಂಘೀ ಜ್ವರ ಪತ್ತೆಯಾಗಿದ್ದು ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ತಾಂಡಾದ ಪ್ರತಿ ಮನೆಗಳಲ್ಲಿ ಯಾರಾದರೂ ಒಬ್ಬರೂ ಹಾಸಿಗೆ ಹಿಡಿದಿದ್ದಾರೆ. ಜ್ವರದಿಂದ ಬಳಲುತ್ತಿರುವವರು ಶಕ್ತಿ ಹಿನರಾಗಿದ್ದು, ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವರು ಬೈಕ್, ಟಂಟಂಗಳಲ್ಲಿ ಮುದೇನೂರು, ತಾವರಗೇರಾ ಸರಕಾರಿ ಹಾಗೂ ಇಲಕಲ್, ಬಾಗಲಕೊಟೆ ಖಾಸಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳೀಯರು ಶಾಸಕರ, ಜಿಲ್ಲಾ, ತಾಲೂಕು ಆರೋಗ್ಯ ಇಲಾಖೆಗೆ ದೂರವಾಣಿ ಕರೆ ಮಾಡಿ ನೋವು ತೋಡಿಕೊಳ್ಳುತ್ತಿದ್ದಾರೆ.
ಮುದೇನೂರು ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಹಾಗೂ ಸಿಬ್ಬಂದಿ 10-15ದಿನಗಳಿಂದ ಸ್ಥಳದಲ್ಲಿದ್ದು, ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಆದರೇ ಜ್ವರ ಮಾತ್ರ ಸಂಪೂರ್ಣ ಹತೋಟಿಗೆ ಬರುತ್ತಿಲ್ಲ. ಇದು ಆರೋಗ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದ್ದರೆ, ಜನರಿಗೆ ಜೀವ ಭಯ ಕಾಡುತ್ತಿದೆ. ಶುಕ್ರವಾರ ಏಕಕಾಲಕ್ಕೆ ಆ್ಯಂಬುಲೆನ್ಸ್ ಮತ್ತು ಟಾಟಾ ಏಸ್ ಮೂಲಕ ಮುದೇನೂರು ಆಸ್ಪತ್ರೆಗೆ 30ಕ್ಕೂ ಹೆಚ್ಚು ಜನ ದಾಖಲಾಗಿದ್ದಾರೆ.
ಅಸ್ವತ್ಛತೆ: ತಾಂಡಾದಲ್ಲಿ ಪರಿಸರ ನೈರ್ಮಲ್ಯ, ಸ್ವತ್ಛತೆ ಇಲ್ಲದಿರುವುದು ಜ್ವರಕ್ಕೆ ಕಾರಣವಾಗಿದೆ. ಕೂಡಲೇ ಸಂಬಂಧಪಟ್ಟವರು ಪರಿಶೀಲಿಸಿ ಸೂಕ್ತ ಕ್ರಮಕ್ಕೆ ಹಾಗೂ ಚಿಕಿತ್ಸೆ, ಸ್ವತ್ಛತೆಗೆ ಏರ್ಪಾಡು ಮಾಡಬೇಕು ಎಂದು ತಾಂಡ ಜನತೆ ಒತ್ತಾಯಿಸಿದ್ದಾರೆ.
ಆರೋಗ್ಯ ಸಲಹೆ: ಅಲ್ಲಲ್ಲಿ ನೀರು ನಿಲ್ಲುವುದರಿಂದಲೇ ಉತ್ಪತ್ತಿಯಾಗುವ ಈಡಿಸ್ ಇಜಿಪೆ¤ ಸೊಳ್ಳೆಗಳಿಂದಲೇ ಚಿಕನ್‌ಗುನ್ಯಾ, ಡೆಂಘೀ, ಮಲೇರಿಯಾ ಜ್ವರ ಬರುತ್ತವೆ. ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ನೀರು ಸಂಗ್ರಹಿಸುವ ಪಾತ್ರೆಗಳನ್ನು ಆಗಾಗ ತೊಳೆದು ತುಂಬಬೇಕು ಹಾಗೂ ಮುಚ್ಚಳ ಹಾಕಬೇಕು. ಕಾಯಿಲೆ ಲಕ್ಷಣ ಕಂಡುಬಂದರೆ ವೈದ್ಯರನ್ನು ಕಂಡು ಚಿಕಿತ್ಸೆ ಪಡೆಯಬೇಕು ಎಂದು ಡಾ| ಎನ್. ನೀಲಪ್ಪ ಗ್ರಾಮಸ್ಥರಿಗೆ ಸಲಹೆ ನೀಡಿದ್ದಾರೆ.