Advertisement

ಲೋಕಸಭಾ ಕಣದಲ್ಲಿ ನಾರಿಶಕ್ತಿ ಪ್ರದರ್ಶನ: ಕಾಂಗ್ರೆಸ್‌ನಿಂದ 6, ಬಿಜೆಪಿಯಿಂದ 2 ಮಹಿಳೆಯರು

11:47 PM Apr 22, 2024 | Team Udayavani |

ಬೆಂಗಳೂರು: ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಸಿಗಬೇಕು ಎಂಬ ಬೇಡಿಕೆ ಯಾವತ್ತು ಈಡೇರಿತ್ತೋ ಗೊತ್ತಿಲ್ಲ. ಆದರೆ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಮಹಿಳೆಯರ ಸ್ಪರ್ಧೆ ಆಗಾಗ ಹೆಚ್ಚಾಗಿರುವುದು ಕಂಡು ಬಂದಿದೆ. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ರಾಜಕೀಯ ಪಕ್ಷಗಳು ಮಹಿಳೆಯರಿಗೆ ಟಿಕೆಟ್‌ ಕೊಡುವ ವಿಚಾರದಲ್ಲಿ ಒಂದಿಷ್ಟು “ಉದಾರತೆ’ಯನ್ನೂ ತೋರಿದ್ದಾರೆ.
ವಿಶೇಷವೆಂದರೆ, ಕಳೆದ 27 ವರ್ಷಗಳ ಬಳಿಕ ಈ ಬಾರಿ ಮಹಿಳಾ ಸ್ಪರ್ಧಿಗಳ ಸಂಖ್ಯೆಯಲ್ಲಿ ಏರಿಕೆ ಕಂಡಿದೆ.

Advertisement

ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ 42 ಮಹಿಳೆಯರು ಅಂತಿಮ ಕಣದಲ್ಲಿ ಉಳಿದಿದ್ದಾರೆ. ಕಳೆದ 27 ವರ್ಷಗಳ ಬಳಿಕ ಇದು ಅತಿ ಹೆಚ್ಚಿನ ಸಂಖ್ಯೆಯಾಗಿದೆ. 1996ರಲ್ಲಿ 71 ಮಹಿಳೆಯರು ಸ್ಪರ್ಧಿಸಿದ್ದು, ಇದು ಇದುವರೆಗಿನ ದಾಖಲೆಯಾಗಿದೆ. ಕಾಂಗ್ರೆಸ್‌ನಿಂದ 6 ಮತ್ತು ಬಿಜೆಪಿ ಯಿಂದ 2 ಮಹಿಳೆಯರು ಸಹಿತ ಒಟ್ಟು 28 ಲೋಕಸಭಾ ಕ್ಷೇತ್ರಗಳಲ್ಲಿ 42 ಮಹಿಳೆಯರು ಸ್ಪರ್ಧೆಯಲ್ಲಿದ್ದಾರೆ. ಮೊದಲ ಹಂತದಲ್ಲಿ ಎಪ್ರಿಲ್‌ 26ರಂದು ಚುನಾವಣೆ ನಡೆಯಲಿರುವ 14 ಕ್ಷೇತ್ರಗಳಲ್ಲಿ 21 ಮಹಿಳೆಯರು ಕಣದ ಲ್ಲಿದ್ದು, ಮೇ 7ರಂದು ಮತದಾನ ನಡೆಯಲಿರುವ 14 ಕ್ಷೇತ್ರಗಳಲ್ಲಿ 21 ಮಹಿಳೆಯರು ಕಣದಲ್ಲಿ ಉಳಿದಿದ್ದಾರೆ.

ಮೊದಲ ಹಂತದಲ್ಲಿ 21, ಎರಡನೇ ಹಂತದಲ್ಲಿ 21 ಅಭ್ಯರ್ಥಿಗಳು ಸ್ಪರ್ಧಿಸುವುದರೊಂದಿಗೆ ಎರಡೂ ಹಂತಗಳಲ್ಲಿ ಮಹಿಳಾ ಸ್ಪರ್ಧಿಗಳು ಸಮಬಲ ಕಾಯ್ದುಕೊಂಡಂತಾಗಿದೆ.

ಆರಂಭದ ಏಳೆಂಟು ಚುನಾವಣೆಗಳಲ್ಲಿ ಮಹಿಳೆಯರ ಸ್ಪರ್ಧೆ ತೀರಾ ನಗಣ್ಯವಾಗಿತ್ತು. ಈ ಚುನಾವಣೆಗಳಲ್ಲಿ ಮಹಿಯರ ಸಂಖ್ಯೆ ಎರಡಂಕಿ ದಾಟಿರಲಿಲ್ಲ. 1985ರ ಬಳಿಕ ಮಹಿಳಾ ಸ್ಪರ್ಧಿಗಳ ಸಂಖ್ಯೆ ಹೆಚ್ಚಾಯಿತು. 1985ರಲ್ಲಿ 11, 1991ರಲ್ಲಿ 16, 1996ರಲ್ಲಿ 71 ಮಹಿಳೆಯರು ಸ್ಪರ್ಧಿಸಿದ್ದರು. ಆ ಚುನಾವಣೆಯಲ್ಲಿ ಎಲ್ಲ 28 ಕ್ಷೇತ್ರಗಳಲ್ಲಿ ಒಟ್ಟು 987 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಹಾಗಾಗಿ ಮಹಿಳೆಯರ ಸಂಖ್ಯೆಯೂ ಹೆಚ್ಚಾಗಿತ್ತು. 1998ರಲ್ಲಿ 16, 1999ರಲ್ಲಿ 11, 2004ರಲ್ಲಿ 10, 2009ರಲ್ಲಿ 14, 2014ರಲ್ಲಿ 18, 2019ರಲ್ಲಿ 26 ಮಹಿಳೆಯರು ಸ್ಪರ್ಧಿಸಿದ್ದರು. 1996 ಹೊರತುಪಡಿಸಿ 1985ರಿಂದ 2014ರ ವರೆಗೆ ಮಹಿಳಾ ಸ್ಪರ್ಧಿಗಳ ಸಂಖ್ಯೆ 20 ದಾಟಿರಲಿಲ್ಲ. 2019ರಲ್ಲಿ 26 ಮಹಿಳೆಯರು ಹಾಗೂ ಈ ಬಾರಿ 42 ಮಹಿಳೆಯರು ಸ್ಪರ್ಧಿಸಿದ್ದಾರೆ. ಇದರಲ್ಲಿ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಗಿಂತ ಪಕ್ಷೇತರ ಅಭ್ಯರ್ಥಿಗಳ ಸಂಖ್ಯೆಯೇ ಹೆಚ್ಚು.

ಎಲ್ಲಿ, ಎಷ್ಟು ಮಹಿಳೆಯರ ಸ್ಪರ್ಧೆ?
ಮೊದಲ ಹಂತದ 14 ಕ್ಷೇತ್ರಗಳಲ್ಲಿ ಬೆಂಗಳೂರು ಉತ್ತರದಲ್ಲಿ 6, ಬೆಂಗಳೂರು ಕೇಂದ್ರ ಮತ್ತು ದಕ್ಷಿಣ ಕ್ಷೇತ್ರದಲ್ಲಿ ತಲಾ 3, ಚಿತ್ರದುರ್ಗ 2, ದಕ್ಷಿಣ ಕನ್ನಡ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರದಲ್ಲಿ ತಲಾ ಒಬ್ಬರು ಸ್ಪರ್ಧಿಸಿದ್ದಾರೆ. ಉಡುಪಿ-ಚಿಕ್ಕಮಗಳೂರು, ಹಾಸನ, ಚಿಕ್ಕಬಳ್ಳಾಪುರದಲ್ಲಿ ಮಹಿಳಾ ಅಭ್ಯರ್ಥಿಗಳ ಸ್ಪರ್ಧೆ ಶೂನ್ಯವಾಗಿದೆ. ಎರಡನೇ ಹಂತದ 14 ಲೋಕಸಭೆ ಕ್ಷೇತ್ರಗಳಲ್ಲಿ ಅತಿ ಹೆಚ್ಚು ಐದು ಮಂದಿ ಮಹಿಳಾ ಅಭ್ಯರ್ಥಿಗಳು ದಾವಣೆಗೆರೆಯಲ್ಲಿ ಸ್ಪರ್ಧಿಸಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಎರಡೂ ಪಕ್ಷದ ಅಭ್ಯರ್ಥಿಗಳು ಇದ್ದಾರೆ. ಹಾವೇರಿಯಲ್ಲಿ 3, ಬಾಗಲಕೋಟೆ, ವಿಜಯಪುರ, ಕಲಬುರಗಿ, ಕೊಪ್ಪಳ, ಶಿವಮೊಗ್ಗದಲ್ಲಿ ತಲಾ ಇಬ್ಬರು ಮಹಿಳೆಯರು, ಚಿಕ್ಕೋಡಿ, ರಾಯಚೂರು, ಉತ್ತರ ಕನ್ನಡದಲ್ಲಿ ತಲಾ ಒಬ್ಬರು ಸ್ಪರ್ಧೆ ಮಾಡಿದ್ದಾರೆ. ಬೆಳಗಾವಿ, ಬೀದರ್‌, ಬಳ್ಳಾರಿ, ಧಾರವಾಡದಲ್ಲಿ ಒಬ್ಬರೂ ಮಹಿಳಾ ಸ್ಪರ್ಧಿ ಇಲ್ಲ.

Advertisement

– ರಫೀಕ್‌ ಅಹ್ಮದ್‌

 

Advertisement

Udayavani is now on Telegram. Click here to join our channel and stay updated with the latest news.

Next