Advertisement

ಕಸದಿಂದ ರಸ  

02:52 PM Feb 02, 2018 | |

ಉಡುಪಿ ವಳಕಾಡಿನ ಸರಕಾರಿ ಪ್ರೌಢಶಾಲೆಯಲ್ಲಿ ನಿರುಪಯೋಗಿ ವಸ್ತುಗಳಿಂದ ಸಂಗೀತ ಉಪಕರಣಗಳನ್ನು ರಚಿಸಿ ಅದನ್ನು ಹಾಡಿನೊಂದಿಗೆ ನುಡಿಸುವ ಕಾರ್ಯಾಗಾರ ಇತ್ತೀಚೆಗೆ ನಡೆಯಿತು. ಹತ್ತನೆಯ ತರಗತಿಯ ವಿದ್ಯಾರ್ಥಿಗಳ ಪರೀಕ್ಷೆ ತಯಾರಿಯ ಸಂದರ್ಭದಲ್ಲಿ ಎಂಟನೆಯ ಮತ್ತು ಒಂಭತ್ತನೆಯ ತರಗತಿಯ ಮಕ್ಕಳು ವ್ಯರ್ಥ ಕಾಲಹರಣ ಮಾಡುವ ಬದಲು ಅವರ ಸಮಯದ ಸದುಪಯೋಗಕ್ಕೆ ದಾರಿ ಮಾಡಿಕೊಡುವ ನಿಟ್ಟಿನಲ್ಲಿ ವಿಕಸನ ಸಪ್ತಾಹವನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಯೋಗ, ಧ್ಯಾನ, ಚಿಂತನ, ಮೌಲ್ಯ ಶಿಕ್ಷಣ, ಸಂಪನ್ಮೂಲ ವ್ಯಕ್ತಿಗಳಿಂದ ಲಲಿತಕಲೆಗಳ ತರಬೇತಿ ನಡೆದು ಮಕ್ಕಳನ್ನು ಪುನಶ್ಚೇತನಗೊಳಿಸುವ ಕಾರ್ಯ ನಿರಂತರಗೊಳ್ಳುತ್ತಿದೆ. 

Advertisement

 ಸುಮಾರು ಇನ್ನೂರು ವಿದ್ಯಾರ್ಥಿಗಳು ಭಾಗವಹಿಸಿದ್ದ ವಿಕಸನ ಸಪ್ತಾಹದ ಮೊದಲೆರಡು ದಿನ ಕಲಾವಿದೆ ಪವನ ಬಿ. ಆಚಾರ್‌ ಲಲಿತಕಲೆಗೆ ಸಂಬಂಧಪಟ್ಟು ಸಂಗೀತ-ಕ್ರಾಫ್ಟ್ ಮಿಶ್ರಿತ ಕಾರ್ಯಾಗಾರ ನಡೆಸಿದರು. ಸಂಗೀತದಲ್ಲಿ ಶ್ರುತಿ ಎಂದರೇನು? ಶ್ರುತಿಗೆ ಸ್ವರವನ್ನು ಲೀನಗೊಳಿಸುವುದು ಮತ್ತು ಲಯ/ತಾಳದ ಬಗ್ಗೆ ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು. ಮಾನವನ ಧ್ವನಿ ಪೆಟ್ಟಿಗೆಯ ರಚನೆ, ಅದರ ಕಾರ್ಯವೈಖರಿ, ವೈಜ್ಞಾನಿಕ ಹಿನ್ನೆಲೆಯ ಬಗ್ಗೆ ಹಾಗೂ ಧ್ವನಿಪೆಟ್ಟಿಗೆಯನ್ನು ಆರೋಗ್ಯಪೂರ್ಣವಾಗಿರಿಸಲು ಮಾಡುವ ಭಾÅಮರಿ ಪ್ರಾಣಾಯಾಮದ ಬಗ್ಗೆ ಪ್ರಾತ್ಯಕ್ಷಿಕೆ ನೀಡಿ ಮಕ್ಕಳ ಕುತೂಹಲಭರಿತವಾದ ಪ್ರಶ್ನೆಗಳಿಗೆ ಉತ್ತರಿಸಿದರು. ಪ್ರಾರ್ಥನಾ ಗೀತೆದೇಶಭಕ್ತಿ ಗೀತೆಗಳನ್ನು ಸ್ವರಬದ್ಧವಾಗಿ ಕಲಿಸಿಕೊಟ್ಟರು. 

 ಎರಡನೇ ದಿನ ಕಸದಿಂದ ರಸ ತತ್ವಕ್ಕೆ ಮಹತ್ವಕೊಟ್ಟು ಸಂಗೀತ ಉಪಕರಣಗಳನ್ನು ಸುಲಭವಾಗಿ ತಯಾರಿಸುವ ಹಾಗೂ ಅದನ್ನು ಹಾಡುಗಾರಿಕೆಯ ವೇಳೆ ನುಡಿಸುವ ಬಗ್ಗೆ ಪವನ ಆಚಾರ್‌ ಪ್ರಾತ್ಯಕ್ಷಿಕೆ ನೀಡಿದರು. ವೀಣೆಯನ್ನು ಹೋಲುವ ತಂತಿವಾದ್ಯ, ಲಯವಾದ್ಯ ತಬಲಾ, ಚಿಕಿ-ಚಿಕಿ, ಬುಡುಬುಡಿಕೆ, ತಾಳಗಳನ್ನು ಕರಾವಳಿಯಲ್ಲಿ ಹೇರಳವಾಗಿ ಸಿಗುವ ತೆಂಗಿನಕಾಯಿ ಗೆರಟೆ, ಸೋಗೆಯ ದಿಂಡುಗಳನ್ನು ಬಳಸಿ ರಚಿಸುವ ಕುಶಲಕಲೆಯನ್ನು ಮಕ್ಕಳಿಗೆ ಹೇಳಿಕೊಟ್ಟರು. ದೊಡ್ಡ ಗಾತ್ರದ ಗೆರಟೆಗಳನ್ನು ವೀಣೆಯ ಬುರುಡೆಗೆ, ತಬಲಾದ ಪಾತ್ರೆಗೆ ಬಳಸಲಾಯಿತು. ದಪ್ಪ ಕಾಗದ, ರಬ್ಬರ್‌ ಬ್ಯಾಂಡ್‌, ಬೀಣೆ, ತಂತಿಗಳನ್ನು ಬೇಕಾದ ಹಾಗೆ ಬಳಸಿಕೊಂಡು ಬಿಗುವಾಗಿ ಬಂಧಿಸಿ ವೈವಿಧ್ಯಮಯ ಸ್ವರ ಬರುವಂತೆ ವ್ಯವಸ್ಥೆಗೊಳಿಸಲಾಯಿತು. ಬಣ್ಣಗಳಿಂದ ಅಲಂಕಾರ ಮಾಡಲಾಯಿತು. ಹಿಂದಿನ ದಿನ ಕಲಿತ ಹಾಡುಗಳಿಗೆ ಈ ವಾದ್ಯಗಳನ್ನು ಅಳವಡಿಸಿಕೊಂಡು ಸುಸ್ವರದೊಂದಿಗೆ ಹಾಡಲಾಯಿತು. ನಂತರ ವಿದ್ಯಾರ್ಥಿಗಳು ತಮ್ಮ ಇಷ್ಟದ ಹಾಡುಗಳಿಗೆ ಈ ವಾದ್ಯಗಳನ್ನು ನುಡಿಸಿ ಹಾಡಿ ಕುಣಿದು ಕುಪ್ಪಳಿಸಿದರು. 

 ಕಾರ್ಯಾಗಾರದ ಯಶಸ್ಸಿನ ಹಿಂದೆ ಕಲಾವಿದೆ ಪವನ ಆಚಾರ್ಯರ ಕಾರ್ಯಕೌಶಲ, ವಿದ್ಯಾರ್ಥಿಗಳ ಉತ್ಸಾಹ. ಕಾರ್ಯತತ್ಪರತೆ, ಸೃಜನಶೀಲತೆ, ಪುಳಕಿತ ಭಾವ ಎದ್ದು ಕಾಣುತ್ತಿತ್ತು. ಇವರಿಗೆಲ್ಲ ಸ್ಫೂರ್ತಿ ತುಂಬುವಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ನಿರ್ಮಲ ಬಿ. ಹಾಗೂ ಕಲಾಶಿಕ್ಷಕರು ವಿಶೇಷ ಪಾತ್ರ ವಹಿಸಿದ್ದರು. ಒಟ್ಟಿನಲ್ಲಿ ಮಕ್ಕಳ ಸಮಯದ ಸದುಪಯೋಗದ ಜೊತೆಗೆ ಅವರ ಸೃಜನಶೀಲತೆಯ ಮೊಳಕೆಗೆ ಇಂಬನ್ನಿಟ್ಟ ಮೋದಪ್ರದ ಕಾರ್ಯಾಗಾರ ಸಮಯೋಚಿತವೆನಿಸಿತು. 

ಉಪಾಧ್ಯಾಯ ಮೂಡುಬೆಳ್ಳೆ

Advertisement
Advertisement

Udayavani is now on Telegram. Click here to join our channel and stay updated with the latest news.

Next