ಹಳಿಯಾಳ: ವಿವಿಧ ತರಗತಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವಿದ್ಯಾಭ್ಯಾಸದ ಭಾಗವಾಗಿ, ತರಗತಿ ನಾಲ್ಕು ಗೋಡೆಗಳ ಮಧ್ಯದಿಂದ ಹೊರತಂದು ಹಲವಾರು ನೈಜ ಪ್ರಾತ್ಯಕ್ಷಿಕೆ ಕಲಿಕೆಗೆ ಪಟ್ಟಣದ ವಿಆರ್‌ಡಿಎಂ ಟ್ರಸ್ಟನ್ ವಿಮಲ ದೇಶಪಾಂಡೆ ಸ್ಕೂಲ್ ಆಫ್ ಎಕ್ಸಲೆನ್ಸ್‌ನ ವಿದ್ಯಾರ್ಥಿಗಳಿಗೆ ಶಾಲೆ ಅವಕಾಶ ಮಾಡಿಕೊಡುವ ವಿಶಿಷ್ಠ ಪ್ರಯತ್ನ ಮಾಡಿದೆ.
ಶಾಲೆಯ 8ನೇ ತರಗತಿ ವಿದ್ಯಾರ್ಥಿಗಳು ಹಳಿಯಾಳದ ಹಿರಿಯ ಮತ್ತು ಕಿರಿಯ ನ್ಯಾಯಾಲಯಕ್ಕೆ ಭೇಟಿ ನೀಡಿದರು. ನ್ಯಾಯಾಲಯದಲ್ಲಿ ಸುಮಾರು 2 ಗಂಟೆ ನ್ಯಾಯಾಲಯದ ಕಾರ್ಯಕಲಾಪ, ವಾದ-ವಿವಾದ ಮತ್ತು ಸಂವಿಧಾನದ ಕಾನೂನಿನ ಅಡಿಯಲ್ಲಿ ಬರುವ ಹಲವಾರು ವಿಷಯಗಳ ಕುರಿತು ತಿಳಿದುಕೊಂಡರು.
ಹಿರಿಯ ನ್ಯಾಯವಾದಿ ಎ.ಪಿ. ಮುಜಾವರ, ಸುರೇಖಾ ಗುನಗಾ ನ್ಯಾಯಾಲಯದ ಕಾರ್ಯಕಲಾಪಗಳ ಕುರಿತು ಮಾಹಿತಿ ನೀಡಿದರು. ಅಲ್ಲದೇ ಮಕ್ಕಳ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿ, ಮಾರ್ಗದರ್ಶನ ನೀಡಿದರು.
3ನೇ ತರಗತಿ ವಿದ್ಯಾರ್ಥಿಗಳು ಕೆನರಾ ಬ್ಯಾಂಕ್ ಹಳಿಯಾಳ ಶಾಖೆಗೆ ಭೇಟಿ ನೀಡಿ, ಬ್ಯಾಂಕಿನಲ್ಲಿ ನಡೆಯುವ ಹಣಕಾಸಿನ ವ್ಯವಹಾರಗಳ ಕುರಿತು ತಿಳಿದುಕೊಂಡರು. ಬ್ಯಾಂಕಿನ ನಿರ್ದೇಶಕ ಎನ್.ಡಿ. ಕಾಮತ್ ಹಾಗೂ ಸಿಬ್ಬಂದಿ ಮಕ್ಕಳಿಗೆ ಬ್ಯಾಂಕಿನ ಕಾರ್ಯ ನಿರ್ವಹಣೆ ಕುರಿತು ಮಾಹಿತಿ ನೀಡಿದರು.
ಶಾಲೆಯ 10ನೇ ತರಗತಿ ವಿದ್ಯಾರ್ಥಿಗಳು ಕಾರವಾರದ ಕದಂಬ ನೌಕಾನಿಲಯಕ್ಕೆ ಭೇಟಿ ನೀಡಿ, ಐಎನ್‌ಎಸ್ ವಿಕ್ರಮಾದಿತ್ಯ ಯುದ್ಧ ನೌಕೆಯನ್ನು ವಿಕ್ಷೀಸಿದರು. ಅಲ್ಲದೇ ಶಾಲೆಯ ಎಲ್ಲ ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ ಭಾರತದ ಮಹತ್ವಕಾಂಕ್ಷಿ ಉಡಾವಣೆ ಚಂದ್ರಯಾನ -2ರ ನೇರ ಪ್ರಸಾರ ವಿಕ್ಷೀಸಿದರು. ಶಾಲೆಯ ಈ ವಿಶಿಷ್ಠ ನೂತನ ಪ್ರಯತ್ನಕ್ಕೆ ಮಕ್ಕಳು ಸಂತಸ ವ್ಯಕ್ತಪಡಿಸಿದರು.