ಹೊಸದಿಲ್ಲಿ : ಕಪ್ಪು ಹಣ ಮತ್ತು ಭ್ರಷ್ಟಾಚಾರವನ್ನು ನಿಗ್ರಹಿಸುವ ನೋಟು ಅಪನಗದೀಕರಣದಿಂದ ತಾತ್ಕಾಲಿಕವಾಗಿ ಆರ್ಥಿಕ ಹಿನ್ನಡೆಗೆ ಕಾರಣವಾದೀತು ಎಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಹೇಳಿದ್ದಾರೆ.
ದೀರ್ಘಾವಧಿಯ ನಿರೀಕ್ಷಿತ ಅಭಿವೃದ್ಧಿಯನ್ನು ಸಾಧಿಸುವಲ್ಲಿ ಅನಿವಾರ್ಯವಾಗುವ ಬಡವರ ಸಂಕಷ್ಟಗಳನ್ನು ನಿವಾರಿಸುವ ದಿಶೆಯಲ್ಲಿ ನಾವು ಹೆಚ್ಚಿನ ಎಚ್ಚರ ವಹಿಸಬೇಕು ಎಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ರಾಷ್ಟ್ರಪತಿ ಭವನದಿಂದ ರಾಜ್ಯಪಾಲರು ಹಾಗೂ ಲೆಫ್ಟಿನೆಂಟ್ ಗವರ್ನರ್ ಗಳಿಗಾಗಿ ನಡೆಸಲಾದ ಹೊಸ ವರ್ಷದ ಸಂದೇಶವನ್ನು ನೀಡುವ ವಿಡಿಯೋ ಕಾನ್‌ಫರೆನ್ಸಿಂಗ್‌ನಲ್ಲಿ ಹೇಳಿದರು.
ಬಡತನ ನಿವಾರಣೆಯ ಯತ್ನದಲ್ಲಿ ಸಶಕ್ತೀಕರಣದಿಂದ ಉದ್ಯಮಶೀಲತೆಗೆ ಒತ್ತು ನೀಡುವ ಉಪಕ್ರಮವನ್ನು ರಾಷ್ಟ್ರಪತಿಗಳು ಶ್ಲಾಘನೆ ಮಾಡಿದರಾದರೂ “ಅಷ್ಟು ದೀರ್ಘ ಕಾಲ ಬಡವರು ಕಾಯಬಲ್ಲರು ಎಂಬ ಬಗ್ಗೆ ನನಗೆ ಖಚಿತವಿಲ್ಲ’ ಎಂದು ಹೇಳಿದರು.
ಹಸಿವು, ನಿರುದ್ಯೋಗ ಮತುತ ಶೋಷಣೆ ರಹಿತವಾದಭವಿಷ್ಯದೆಡೆಗಿನ ರಾಷ್ಟ್ರದ ನಡೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತಾಗಲು ಬಡವರಿಗೆ ಈಗಲೇ ಅಗತ್ಯವಿರುವ ನೆರವು, ಸಹಾಯವನ್ನು ನೀಡುವುದು ಅಗತ್ಯ ಎಂದು ಪ್ರಣವ್ ಅಭಿಪ್ರಾಯಪಟ್ಟರು.
ದೇಶದಲ್ಲಿನ ವಿಭಿನ್ನ ಸಮುದಾಯಗಳ ನಡುವೆ ಸದ್ಭಾವನೆ ಮತ್ತು ಸಾಮರಸ್ಯ ಇರುವ ಅಗತ್ಯವನ್ನು ರಾಷ್ಟ್ರಪತಿಗಳು ಒತ್ತಿ ಹೇಳಿದರು. ಮುಕ್ತ, ನಿರ್ಭೀತ ಮತ್ತು ನ್ಯಾಯೋಚಿತ ಚುನಾವಣೆಗಳನ್ನು ನಡೆಸುವ ಮೂಲಕ ಭಾರತವು ವಿಶ್ವದಲ್ಲೇ ಅತ್ಯಂತ ಸ್ಪಂದನಶೀಲ ಪ್ರಜಾಸತ್ತೆ ಎನಿಸಿಕೊಂಡಿದೆ ಎಂದವರು ಹೇಳಿದರು.