ನವದೆಹಲಿ: 2016ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತೆಗೆದುಕೊಂಡ ನೋಟು ಅಮಾನ್ಯೀಕರಣ ನಿರ್ಧಾರವನ್ನು ಸುಪ್ರೀಂಕೋರ್ಟ್ 4-1 ಬಹುಮತದ ತೀರ್ಪಿನೊಂದಿಗೆ ಎತ್ತಿಹಿಡಿದಿದೆ. ಆದರೆ ಸುಪ್ರೀಂ ಪಂಚಸದಸ್ಯ ಸಾಂವಿಧಾನಿಕ ಪೀಠದ ಜಡ್ಜ್ ಒಬ್ಬರು ಭಿನ್ನ ತೀರ್ಪು ನೀಡಿದ್ದು, ಇದೊಂದು ಕಾನೂನು ಬಾಹಿರ ಕ್ರಮ ಎಂದು ಕರೆದಿದ್ದಾರೆ.
ಇದನ್ನೂ ಓದಿ:ಬೆಂಗಳೂರಿನ ಶಾಪಿಂಗ್ ಮಾಲ್‌ನಲ್ಲಿ ವ್ಯಕ್ತಿಗೆ ಹೃದಯಾಘಾತ ; ದೇವರಂತೆ ಬಂದು ಪ್ರಾಣ ಉಳಿಸಿದ ಡಾಕ್ಟರ್
ಕೇಂದ್ರ ಸರ್ಕಾರ 2016ರ ನವೆಂಬರ್ 8ರಂದು 1,000 ರೂ. ಮತ್ತು 500 ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸಿರುವ ಕ್ರಮ ಸೂಕ್ತವಾಗಿದೆ. ನೋಟು ಅಮಾನ್ಯೀಕರಣ ಪ್ರಕ್ರಿಯೆಯಲ್ಲಿ ಯಾವುದೇ ಲೋಪವಾಗಿಲ್ಲ ಎಂದು ಸುಪ್ರೀಂಕೋರ್ಟ್ ಸಾಂವಿಧಾನಿಕ ಪೀಠ ತಿಳಿಸಿದ್ದು, ನೋಟು ಅಮಾನ್ಯೀಕರಣ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿತ್ತು.
ಐವರು ನ್ಯಾಯಾಧೀಶರಲ್ಲಿ ಜಸ್ಟೀಸ್ ಬಿವಿ ನಾಗರತ್ನ ಅವರು ಭಿನ್ನ ತೀರ್ಪು ನೀಡಿದ್ದರು. “ನೋಟು ಅಮಾನ್ಯೀಕರಣ ಕಾನೂನು ಬಾಹಿರ ಮತ್ತು ಆರ್ಥಿಕ ಸ್ಥಿತಿ ದುರ್ಬಲಗೊಳಿಸಲು ಅನುವು ಮಾಡಿಕೊಟ್ಟಂತಾಗಿದೆ ಎಂದು ತಿಳಿಸಿದ್ದಾರೆ.
ನೋಟು ಅಮಾನ್ಯೀಕರಣದ ಬಗ್ಗೆ ಸಂಸತ್ ನಲ್ಲಿ ಕಾನೂನಾತ್ಮಕ ಅಂಶಗಳ ಬಗ್ಗೆ ಚರ್ಚೆ ನಡೆಸಿಲ್ಲ. ನೋಟು ಅಮಾನ್ಯೀಕರಣ ಆದೇಶ ಕಾನೂನಿಗೆ ವಿರುದ್ಧವಾದ ಮತ್ತು ಕಾನೂನು ಬಾಹಿರ ಅಧಿಕಾರದ ಪ್ರಯೋಗವಾಗಿದೆ ಎಂದು ಜಡ್ಜ್ ನಾಗರತ್ನ ತೀರ್ಪಿನಲ್ಲಿ ಉಲ್ಲೇಖಿಸಿರುವುದಾಗಿ ವರದಿ ತಿಳಿಸಿದೆ.