Advertisement

ಪ್ರಜಾಪ್ರಭುತ್ವ, ಸಮಾನತೆಗೆ ಅಪಾಯ

09:53 PM Dec 21, 2019 | Lakshmi GovindaRaj |

ಮೈಸೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕೋದ್ಯಮ ಬಾಯಿ ಮುಚ್ಚಿಕೊಂಡಿದ್ದರೆ ಜನರೇ ಪತ್ರಕರ್ತರಾಗಿ ವಸ್ತುಸ್ಥಿತಿಯನ್ನು ಮನೆ ಮನೆಗೆ ತಲುಪಿಸಬೇಕು ಎಂದು ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಮೊಮ್ಮಗ ರಾಜ್‌ ಮೋಹನ್‌ ಗಾಂಧಿ ಹೇಳಿದರು.

Advertisement

ಗಾಂಧಿ ವಿಚಾರ ಪರಿಷತ್ತು, ಮೈವಿವಿ ಗಾಂಧಿ ಅಧ್ಯಯನ ಕೇಂದ್ರ ವತಿಯಿಂದ ಅರವಿಂದ ನಗರದ ಉದ್ದೇಶಿತ ಗಾಂಧಿ ಭವನ ನಿವೇಶನದಲ್ಲಿ ಆಯೋಜಿಸಿದ್ದ ಪತ್ರಿಕೋದ್ಯಮ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಮಾಧ್ಯಮ: ಪ್ರಜಾಸತ್ತೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಭಾರತ ಎಲ್ಲರಿಗೂ ಸೇರಬೇಕು: ಮಹಾತ್ಮ ಗಾಂಧಿ 1903 ರಿಂದ 1948 ರವರೆಗೂ ಪತ್ರಕರ್ತರಾಗಿದ್ದರು. ಅವರು ಹುಟ್ಟಿದಾಗಿನಿಂದ ಸ್ವಾತಂತ್ರ ಹೋರಾಟಗಾರರಲ್ಲ. “ಹರಿಜನ’, “ಯಂಗ್‌ ಇಂಡಿಯಾ’ ಪತ್ರಿಕೆಗಳನ್ನು ತಂದು ಅನಿಸಿದ್ದನ್ನು ಅಭಿವ್ಯಕ್ತಿಸಿದರು. ಸತ್ಯಾಗ್ರಹ ಆರಂಭಿಸಿದ ನೆಹರು, ವಿನೋದಾಬಾವೆ ಸೇರಿಕೊಂಡರು. ಸ್ವಾತಂತ್ರ್ಯ ಬಂದ ನಂತರ ಭಾರತ ಹಿಂದೂಗೆ ಸೇರಬೇಕಾ, ಮುಸ್ಲಿಮರೂ ಇರಬೇಕಾ ಎಂದಾಗ ಗಾಂಧಿ ಹೇಳಿದ್ದು, ಈ ಭಾರತ ಎಲ್ಲರಿಗೂ ಸೇರಬೇಕು ಎಂದಿದ್ದರು. ಅದನ್ನು ನಾವು ಇಂದಿಗೂ ಅನ್ವಯಿಸಿಕೊಳ್ಳಬೇಕು ಎಂದರು.

ಪ್ರತಿಯೊಬ್ಬರಿಗೂ ಸ್ವಾತಂತ್ರವಿರಬೇಕು: ಗಾಂಧೀಜಿ ಎಂದೂ ತಮ್ಮ ಪ್ರಜ್ಞೆ ಮರೆತರವರಲ್ಲ. ರಾಮನನ್ನು ಪ್ರೀತಿಸುತ್ತಿದ್ದನೆ, ನೀವು ರಾಮನನ್ನು ಹೆಸರಿನಲ್ಲಿ ಪ್ರೀತಿಸುತ್ತೀರಿ ಎಂದಿದ್ದರು. ಇಂದು ವಿಶ್ವ ಮತ್ತು ಭಾರತ ಒಂದೇ ತರದ ಸವಾಲು ಎದುರಿಸುತ್ತಿದೆ. ಜೈ ಹಿಂದ್‌, ವಂದೇ ಮಾತರಂ, ಹೇ ರಾಮ್‌ ಎಂಬ ಶಬ್ಧಗಳನ್ನು ಒಂದು ವರ್ಗಕ್ಕೆ ಸೀಮಿತಗೊಳಿಸಲಾಘುತ್ತಿದೆ.

ಯಾರನ್ನು ಹಂಗಿನಲ್ಲಿಟ್ಟುಕೊಳ್ಳಬೇಡಿ, ಹೆದರಿಸಬೇಡಿ, ದಬ್ಟಾಳಿಕೆ ಮಾಡಬೇಡಿ ಎಂದು ಗಾಂಧೀಜಿ ಅಂದೇ ಹೇಳಿದ್ದರು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಯಾರೂ ಯಾರನ್ನೂ ನಿಯಂತ್ರಿಸುವ ಅವಶ್ಯಕತೆಯಿಲ್ಲ. ಪ್ರತಿಯೊಬ್ಬರಿಗೂ ಸ್ವಾತಂತ್ರ್ಯವಿರಬೇಕು. ಪತ್ರಕರ್ತ ಮತ್ತು ಸಾಮಾನ್ಯ ಜನ ತಾವು ಬದುಕಿರುವ ಕೊನೆಯ ಗಳಿಗೆವರೆಗೂ ತಮಗನಿಸಿದ್ದನ್ನು ಅಭಿವ್ಯಕ್ತಿಸಬೇಕು ಎಂದು ತಿಳಿಸಿದರು.

Advertisement

ಪ್ರಜಾಪ್ರಭುತ್ವ, ಸಮಾನತೆಗೆ ಅಪಾಯ: ಇಂದು ಸಮಾನತೆ, ಭಾತೃತ್ವ ಹಾಗೂ ಪ್ರಜಾಪ್ರಭುತ್ವದ ಮೂಲ ತತ್ವಕ್ಕೆ ಅಪಾಯ ಎದುರಾಗಿದ್ದು, ಕಳೆದ 15 ವರ್ಷಗ‌ಳಿಂದೀಚೆಗೆ ಕೊಡಲಿಪೆಟ್ಟು ಬಿದ್ದಿದೆ. ಕೆಲವು ಶಕ್ತಿಗಳು ಭಾರತ ತಮ್ಮ ಕೈವಶದಲ್ಲಿರಬೇಕು ಎಂದು ಪ್ರಭಲವಾಗಿ ಅಭಿಪ್ರಾಯ ಹೇರಲು ಮುಂದಾಗಿವೆ. ಪ್ರಜಾಪ್ರಭುತ್ವದ ಉಳಿವಿಗೆ ಅಂತಹ ಶಕ್ತಿಗಳ ವಿರುದ್ಧ ನಾವೆಲ್ಲ ಹೋರಾಡಬೇಕಿದೆ ಎಂದು ಕರೆ ನೀಡಿದರು.

ಸಮಾನತೆ, ನ್ಯಾಯವನ್ನು ಯಾರು ಪ್ರೀತಿಸುತ್ತಾರೋ ಅವರು ಈ ದಕ್ಷಿಣ ಭಾರತದ್ಲಲಿದ್ದಾರೆ. ದೇಶ ಇಂದು ಎದುರಿಸುತ್ತಿರುವ ಅಭಿಪ್ರಾಯ ಹೇರುವಿಕೆಯ ಸವಾಲಿನ ವಿರುದ್ಧ ಹೋರಾಡಬೇಕು. ದಕ್ಷಿಣ ಭಾರತದ ನಾಯಕತ್ವ ಇಂತಹ ಸವಾಲು ಎದುರಿಸಲು ಶಕ್ತವಾಗಿದೆ ಎಂದರು.

ದಕ್ಷಿಣ ಭಾರತಕ್ಕೂ ನನಗೂ ಸಂಬಂಧವಿದೆ: ನಮ್ಮ ತಂದೆ ದೇವದಾಸ್‌ ಗಾಂಧಿ ರಾಜಗೋಪಾಲಚಾರಿ ಅವರ ಮಗಳನ್ನು ವರಿಸಿದರು. ನಮ್ಮ ತಾತ ದಕ್ಷಿಣ ಭಾರ ತದವರು. ಹಾಗಾಗಿ ನನಗೆ ಇಲ್ಲಿನ ನಂಟು ಜ್ಞಾಪಕಕ್ಕೆ ಬರುತ್ತದೆ. ನಮ್ಮ ತಾತ ಗಾಂಧಿ ಸ್ವಾತಂತ್ರ ಸಿಕ್ಕ ನಂತರ ನಡೆದ ಪ್ರಾರ್ಥನಾ ವೇಳೆ ಖುರಾನ್‌ನ ಉಕ್ತಿಯೊಂದನ್ನು ಓದಲು ಮುಂದಾದಾಗ ಈಗಿನ ಜನರಂತೆ ಆಗಲೂ ಒಬ್ಬ ಉಕ್ತಿ ಓದದಂತೆ ತಡೆಯೊಡ್ಡಿದ್ದ.

ಆತ ನಮ್ಮ ತಾತನಿಗೆ ಹೊಡೆದರೆ ನಾನು ಹೇಗೆ ತಡೆಯುವುದು ಎಂಬುದನ್ನು ಪಕ್ಕದಲ್ಲಿಯೇ ಕುಳಿತು ಚಿಂತಿಸುತ್ತಿದ್ದೆ. ನಮ್ಮ ತಾತ 1948ರ ಜ.30 ರಂದು ಹತ್ಯೆಯಾದಾಗ ನಾನು ಶಾಲೆಗೆ ಹೋಗಿದ್ದೆ. ಒಂದು ವೇಳೆ ಅಲ್ಲಿಯೇ ಇದ್ದಿದ್ದರೆ ತಡೆಯಬಹುದಿತ್ತೇನೋ? ಎಂದು ತಮ್ಮ ತಾತನ ಹತ್ಯೆಯ ಬಗ್ಗೆ ಹೇಳಿಕೊಂಡರು.

ಪತ್ರಿಕಾ ಮಾಧ್ಯಮ ಮಾರಾಟವಾಗಿದೆ: ಹಿರಿಯ ಸಮಾಜವಾದಿ ಪ. ಮಲ್ಲೇಶ್‌, ಮಾತನಾಡಿ, ಸ್ವಾತಂತ್ರ್ಯ ಚಳವಳಿ ಮತ್ತು ತುರ್ತು ಪರಿಸ್ಥಿತಿ ವೇಳೆ ಬಹಳ ಗಂಭೀರವಾಗಿ ನಡೆದುಕೊಂಡಿದ್ದ ಪತ್ರಿಕಾ ಮಾಧ್ಯಮ ಇಂದು ಕಾರ್ಪೋರೆಟ್‌ ಕುಳಗಳಿಗೆ ಮಾರಾಟವಾಗಿದೆ. ಅಂದು ಸಂಪಾದಕರನ್ನು ನೋಡಿ ಪತ್ರಿಕೆ ತರಿಸುತ್ತಿದ್ದೆವು. ಇಂದು ಪತ್ರಿಕೆಗಳ ಸಂಪಾದಕರೇ ಯಾರೆಂಬುದು ಗೊತ್ತಾಗುತ್ತಿಲ್ಲ.

ಆ ಪತ್ರಿಕೆಯ ಮಾಲೀಕರಷ್ಟೇ ಗೊತ್ತಾಗುತ್ತಾರೆ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಳಿ ತಪ್ಪಿದರೆ ತಿದ್ದಲು ಪತ್ರಿಕಾಂಗ ಇತ್ತು. ಈಗ ಆ ಭರವಸೆಯೂ ಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಗಾಂಧಿ ವಿಚಾರ ಪರಿಷತ್ತಿನ ಗೌರವ ಉಪಾಧ್ಯಕ್ಷ ಡಾ.ಎಚ್‌.ಸಿ. ಮಹದೇವಪ್ಪ, ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತ್‌ಕುಮಾರ್‌, ಕುಲಸಚಿವ ಪ್ರೊ.ಆರ್‌. ಶಿವಪ್ಪ, ಗಾಂಧಿ ಭವನ ನಿರ್ದೇಶಕ ಪ್ರೊ.ಎಂ.ಎಸ್‌. ಶೇಖರ್‌, ಪರಿಷತ್ತಿನ ಕಾರ್ಯದರ್ಶಿ ಸಂಸ್ಕೃತಿ ಸುಬ್ರಹ್ಮಣ್ಯ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next