ಬೆಂಗಳೂರು: ಪ್ರಜಾಪ್ರಭುತ್ವಕ್ಕೆ ಬಿಜೆಪಿ ದೊಡ್ಡ ಆತಂಕ ಎಂದುಕೊಂಡರೂ, ಉಳಿದವರು ಸಾಚಾ ಅಲ್ಲ. ಆದ್ದರಿಂದ ಆ ಪಕ್ಷಗಳ ಬಗ್ಗೆಯೂ ಎಚ್ಚರದಿಂದ ಇರಬೇಕು ಎಂದು ಸಾಹಿತಿ ಪ್ರೊ.ಕೆ. ಮರುಳಸಿದ್ದಪ್ಪ ಆತಂಕ ವ್ಯಕ್ತಪಡಿಸಿದರು.
ನಗರದ ಗಾಂಧಿ ಭವನದಲ್ಲಿ ಕ್ರಿಯಾ ಪ್ರಕಾಶನ ಭಾನುವಾರ ಹಮ್ಮಿಕೊಂಡಿದ್ದ “ಮಾರ್ಕ್ಸ್ 200- ಕ್ಯಾಪಿಟಲ್ 150′ ಮಾಲಿಕೆಯ ಮೊದಲ ಕಂತಿನ ಪುಸ್ತಕಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಆವರು, ರಾಜ್ಯದ ಈಗಿನ ಪರಿಸ್ಥಿತಿ ನೋಡಿದರೆ, ಪ್ರಜಾಪ್ರಭುತ್ವ ಅವಸಾನದ ಅಂಚಿನತ್ತ ಸಾಗಿದೆ ಎಂಬ ಆತಂಕ ಕಾಡುತ್ತದೆ ಎಂದು ಹೇಳಿದರು.
ಮಹಾತ್ಮ ಗಾಂಧಿ, ಡಾ.ಬಾಬಾ ಸಾಹೇಬ್ ಅಂಬೇಡ್ಕರ್, ರಾಮಮನೋಹರ ಲೋಹಿಯಾ ಅವರ ಕುರಿತ ಸಮಗ್ರ ಕೃತಿಗಳು ಬಂದಿವೆ. ಅದೇ ರೀತಿ, ಕಾರ್ಲ್ಮಾರ್ಕ್ಸ್ ಅವರ ಬಗೆಗಿನ ಸಮಗ್ರ ಕೃತಿಗಳೂ ಬರಬೇಕು. ಹಾಗೂ ಬಿಡುಗಡೆಯಾದ ಕೃತಿಗಳನ್ನು ಗ್ರಂಥಾಲಯಗಳಲ್ಲಿ ಲಭ್ಯವಾಗುವಂತೆ ಮಾಡುವುದು ಸರ್ಕಾರದ ಜವಾಬ್ದಾರಿ ಆಗಬೇಕು ಎಂದರು.
ವಿಮರ್ಶಕ ಡಾ.ಜಿ.ರಾಮಕೃಷ್ಣ ಮಾತನಾಡಿ, ಮಾರ್ಕ್ಸ್ವಾದ ಅಧ್ಯಯನ ಮಾಡಿದವರೆಲ್ಲರೂ ಕಮ್ಯುನಿಸ್ಟ್ ಆಗಿರುವುದಿಲ್ಲ. ಮೊದಲು ಕಮ್ಯುನಿಸ್ಟ್ ಅನ್ನು ಅಧ್ಯಯನ ಮಾಡಿ, ನಂತರ ಮಾರ್ಕ್ಸ್ವಾದ ಓದಿ ಅಳವಡಿಸಿಕೊಳ್ಳಬೇಕು. ಈಗಲೂ ಮಾರ್ಕ್ಸ್ವಾದ ಗೊತ್ತಿಲ್ಲದ ಅನೇಕರು ವೈಚಾರಿಕವಾಗಿ ತಮ್ಮ ಬದುಕಿನಲ್ಲಿ ಮಾರ್ಕ್ಸ್ವಾದಿಗಳಾಗಿದ್ದಾರೆ. ಅಷ್ಟರಮಟ್ಟಿಗೆ ಮಾರ್ಕ್ಸ್ವಾದ ವೈಜ್ಞಾನಿಕವಾಗಿದೆ ಎಂದು ಹೇಳಿದರು.
ಇದೇ ವೇಳೆ “ಫ್ರಾನ್ಸಿನಲ್ಲಿ ಅಂತರಯುದ್ಧ’ ಮತ್ತು “ತತ್ವಶಾಸ್ತ್ರದ ದಾರಿದ್ರé’ ಅನುವಾದಿತ ಕೃತಿಗಳು ಬಿಡುಗಡೆಗೊಳಿಸಲಾಯಿತು. ಡಾ.ಬಿ.ಆರ್. ಮಂಜುನಾಥ್, ಪ್ರೊ.ವಿ.ಎನ್. ಲಕ್ಷ್ಮೀನಾರಾಯಣ್ ಕೃತಿ ಪರಿಚಯಿಸಿದರು. ಲೇಖಕರಾದ ವಿಶ್ವ ಕುಂದಾಪುರ, ಕೆ.ಪಿ. ವಾಸುದೇವನ್, ಕೆ.ಎಸ್. ಪಾರ್ಥಸಾರಥಿ ಉಪಸ್ಥಿತರಿದ್ದರು.