Advertisement

Democracy Day: ಮಾನವ ಸರಪಳಿಯಲ್ಲಿ ಒಂದು ಕಿ. ಮೀ. ಉದ್ದದ ಧ್ವಜ

01:09 AM Sep 14, 2024 | Team Udayavani |

ಉಡುಪಿ: ರವಿವಾರ ಜಿಲ್ಲೆಯಲ್ಲಿ ರಚನೆಯಾಗಲಿರುವ 100 ಕಿ.ಮೀ. ಉದ್ದದ ಮಾನವ ಸರಪಳಿಯಲ್ಲಿ ತಲಾ 500 ಮೀಟರ್‌ನ ರಾಷ್ಟ್ರಧ್ವಜ ಮತ್ತು ನಾಡ ಧ್ವಜ ಅನಾವರಣಗೊಳ್ಳಲಿದೆ.

Advertisement

ಎರಡು ಧ್ವಜಗಳನ್ನು ನುರಿತ ದರ್ಜಿಗಳು ಸಿದ್ಧಪಡಿಸಿದ್ದು, ಇದರ ರೋಲಿಂಗ್‌ ಕಾರ್ಯ ಹಂತಹಂತವಾಗಿ ವಿದ್ಯಾರ್ಥಿಗಳಿಂದ ನಡೆಯುತ್ತಿದೆ.
ಮಾನವ ಸರಪಳಿಯಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಸರಕಾರಿ ನೌಕರರು ಸಹಿತ ಲಕ್ಷಾಂತರ ಮಂದಿ ಭಾಗವಹಿಸಲಿದ್ದು, ಕಿನ್ನಿಮೂಲ್ಕಿ ಸ್ವಾಗತ ಗೋಪುರದಲ್ಲಿ ರಾಷ್ಟ್ರಧ್ವಜ ಹಾಗೂ ಕನ್ನಡ ಬಾವುಟ ಹಿಡಿದು ಸಂಭ್ರಮಿಸುವರು.

ಸಮಾಜ ಕಲ್ಯಾಣ ಇಲಾಖೆ, ಹಿಂದು ಳಿದ ವರ್ಗಗಳ ಕಲ್ಯಾಣ ಇಲಾಖೆ, ಐಟಿಡಿಪಿ ಹಾಸ್ಟೆಲ್‌ಗ‌ಳ ವಿದ್ಯಾರ್ಥಿಗಳು ಬಾವುಟವನ್ನು ಹಿಡಿಯುವರು. ಎಲ್ಲ ಇಲಾಖೆ ಹಾಸ್ಟೆಲ್‌ಗ‌ಳ ಮೇಲ್ವಿಚಾರಕರಿಗೆ ಈ ಬಗ್ಗೆ ಮೇಲುಸ್ತುವಾರಿ ವಹಿಸಲಾಗಿದೆ. ಇದರೊಂದಿಗೆ ಹಾಸ್ಟೆಲ್‌ ಸಿಬಂದಿ, ಕರಾಟೆ ತರಬೇತು ನೀಡುವ ಮಾರ್ಗದರ್ಶಕರು ಭಾಗವಹಿಸಲಿದ್ದಾರೆ.

500 ಮೀ. ಉದ್ದದ ಧ್ವಜದ ಫೋಲ್ಡಿಂಗ್‌ ಮತ್ತು ಅನ್‌ಫೋಲ್ಡಿಂಗ್‌ ಸವಾಲಿನ ಕೆಲಸವಾಗಿದ್ದು, ರಾಷ್ಟ್ರ ಮತ್ತು ನಾಡ ಧ್ವಜದ ಘನತೆಗೆ ಕುತ್ತು ಬಾರದಂತೆ ಈ ಕಾರ್ಯ ನಡೆಯಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್‌ ಇಲಾಖೆಯ 100 ಸಿಬಂದಿಯು ವಿದ್ಯಾರ್ಥಿಗಳಿಗೆ ಸಾಥ್‌ ನೀಡಲಿದ್ದಾರೆ. ಎರಡು ಧ್ವಜ ಹಾರಾಟ ವನ್ನು ವ್ಯವಸ್ಥಿತವಾಗಿಸಲು ಕ್ರೀಡಾ ಇಲಾಖೆಯ ಡಾ| ರೋಶನ್‌ ಶೆಟ್ಟಿ, ಕೆಬಿಕೆ ಕರಾಟೆ ಸಂಸ್ಥೆಯ ರವಿ ಅವರನ್ನು ನಿರ್ವಾಹಕರನ್ನಾಗಿ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

3 ಸಾವಿರ ಮೀ. ಬಟ್ಟೆ ಬಳಕೆ
ರಾಷ್ಟ್ರ ಧ್ವಜ 500 ಮೀ. ಉದ್ದ 3 ಮೀ. ಅಗಲ ಹಾಗೂ ನಾಡ ಧ್ವಜ 500 ಮೀ. 2 ಮೀ. ಅಗಲ ಹೊಂದಿದೆ. ಇದಕ್ಕೆ 3 ಸಾವಿರ ಮೀ. ಬಟ್ಟೆ ಬಳಸಲಾಗಿದ್ದು, ಸಾನಿಧ್ಯ ಸಂಸ್ಥೆಯ ಟೈಲರ್‌ ಶ್ವೇತಾಶ್ರೀ ಮತ್ತು ತಂಡ 4 ದಿನಗಳಲ್ಲಿ ಧ್ವಜವನ್ನು ಸಿದ್ಧಪಡಿಸಿದೆ. ಬನ್ನಂಜೆ ಹಾಸ್ಟೆಲ್‌ ವಿದ್ಯಾರ್ಥಿಗಳು ಈ ಧ್ವಜವನ್ನು ಮಡಚಲು ಶ್ರಮಿಸುತ್ತಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಅನಿತಾ ಮಡ್ಲೂರು ತಿಳಿಸಿದ್ದಾರೆ.

Advertisement

ಹೆದ್ದಾರಿಯಲ್ಲಿ ಮಾನವ ಸರಪಳಿ: ಪರ್ಯಾಯ ಮಾರ್ಗ ಬಳಕೆಗೆ ಸೂಚನೆ
ಮಂಗಳೂರು: ವಿಶ್ವ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ಸೆ.15ರಂದು ಬೆಳಗ್ಗೆ 7.30ರಿಂದ 11 ಗಂಟೆಯ ವರೆಗೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬೃಹತ್‌ ಮಾನವ ಸರಪಳಿ ನಡೆಯಲಿದೆ. ಇದಕ್ಕೆ ಶಾಲಾ ಮಕ್ಕಳ ಆಗಮನ, ನಿರ್ಗಮನ ಹಾಗೂ ಮಾನವ ಸರಪಳಿ ನಿರ್ಮಿಸುವ ಸಮಯದಲ್ಲಿ ಮಕ್ಕಳ ಮತ್ತು ಸಾರ್ವಜನಿಕರ ಸುರಕ್ಷೆ ದೃಷ್ಟಿಯಿಂದ ಹೆಜಮಾಡಿ, ಬಪ್ಪನಾಡು, ಮೂಲ್ಕಿ, ಕಾರ್ನಾಡು, ಹಳೆಯಂಗಡಿ, ಪಾವಂಜೆ, ಮುಕ್ಕ, ಸುರತ್ಕಲ್‌, ಹೊಸಬೆಟ್ಟು, ಹೊನ್ನಕಟ್ಟೆ, ಬೈಕಂಪಾಡಿ, ಪಣಂಬೂರು, ಕೂಳೂರು, ಕೊಟ್ಟಾರಚೌಕಿ, ಪಡೀಲ್‌, ಕುಂಟಿಕಾನ, ಕೆಪಿಟಿ ವೃತ್ತ, ಪದವು ಜಂಕ್ಷನ್‌, ಕಣ್ಣೂರು, ಅಡ್ಯಾರ್‌, ಸಹ್ಯಾದ್ರಿ, ವಳಚ್ಚಿಲ್‌, ನಂತೂರು ವೃತ್ತ, ಅರ್ಕುಳ, ಬಿಕರ್ನಕಟ್ಟೆ , ಕೈಕಂಬ ವರೆಗಿನ ರಾಷ್ಟ್ರೀಯ ಹೆದ್ದಾರಿ 66 ಮತ್ತು 73ರಲ್ಲಿ ಸಂಚರಿಸುವ ವಾಹನಗಳ ಚಾಲಕರು / ಸವಾರರು ಪರ್ಯಾಯ ಮಾರ್ಗಗಳನ್ನು ಬಳಸಬೇಕು ಎಂದು ಮಂಗಳೂರು ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next