ಅಫಜಲಪುರ: ಪ್ರಧಾನಿ ಮೋದಿಯವರು “ಒನ್ ನೇಷನ್-ಒನ್ ಎಲೆಕ್ಷನ್’ ಎನ್ನುತ್ತಾ ಪ್ರಜಾತಂತ್ರ ವ್ಯವಸ್ಥೆಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಾರೆ. ಇದಕ್ಕೆ ನಾನೊಂದು ಸೇರಿಸಿದ್ದೇನೆ.
“ಒಂದು ದೇಶ-ಒಂದು ಚುನಾವಣೆ-ಒಂದೇ ಪಕ್ಷ-ಒಬ್ಬನೇ ಅಭ್ಯರ್ಥಿ’, ಅರ್ಥಾತ್ “ಚುನಾವಣೆಯೂ ಬೇಡ, ಮತದಾನವೂ ಬೇಡ’ ಎನ್ನುವುದು ಮೋದಿ ಮನದಾಳ ಆಗಿರಬಹುದು ಎಂದು ಮಾಜಿ ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯವಾಡಿದರು.
ಮಂಗಳವಾರ ಆಯೋಜಿಸಿದ್ದ ಮತದಾರರಿಗೆ ಅಭಿನಂದನೆ ಸಮಾರಂಭದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಭಾವನಾತ್ಮಕವಾಗಿ ಮಾತನಾಡಿ ಜನರನ್ನು ಮರುಳು ಮಾಡಿ ದೇಶ ಒಡೆಯುವ ಕೆಲಸ ಮಾಡುತ್ತಿದ್ದಾರೆ.
ಮೋದಿ ಸಂಸತ್ತಿನಲ್ಲಿ ಸಂವಿಧಾನ ಪ್ರತಿಗೆ ನಮಸ್ಕಾರ ಮಾಡುತ್ತಾರೆ. ಅವರ ಸಂಸದರು, ಸಚಿವರು ಮತ್ತು ಮುಖಂಡರು ಸಂವಿಧಾನ ಬದಲಾವಣೆಯ ಮಾತುಗಳನ್ನಾಡುತ್ತಾರೆ.
ಇಂತಹ ಸಮಾಜಘಾತುಕ ಶಕ್ತಿಗಳಿಗೆ ಮೋದಿ ಟಿಕೆಟ್ ಕೊಡುತ್ತಾರೆ. ಹಾಗಾದರೆ, ಯಾವ ಸಮಾನತೆ, ಯಾವ ಪ್ರಜಾಪ್ರಭುತ್ವದ ಬಗ್ಗೆ ಮೋದಿ ಮಾತನಾಡುತ್ತಾರೆ ಎಂದು ಗೊತ್ತಾಗುತ್ತಿಲ್ಲ ಎಂದರು.