ಹೊಸದಿಲ್ಲಿ: ಪಂಚಾಯತ್ ಚುನಾವಣೆಯ ಘೋಷಣೆಯ ನಂತರ ತ್ರಿಪುರಾದಲ್ಲಿ ನಡೆದ ಹಿಂಸಾಚಾರದ ಘಟನೆಗಳ ಬಗ್ಗೆ ಕಾಂಗ್ರೆಸ್ ಸೋಮವಾರ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದೆ. ಈಶಾನ್ಯ ರಾಜ್ಯಗಳಲ್ಲಿ ಹಾಡ ಹಗಲಿನಲ್ಲೇ ಪ್ರಜಾಪ್ರಭುತ್ವವನ್ನು ಕೊಲೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಇದು “ನೈಜ ಸಂವಿಧಾನ ಹತ್ಯೆ” ಎಂದು ಆಕ್ರೋಶ ಹೊರ ಹಾಕಿದೆ.
ಹಿಂಸಾಚಾರ “ಸ್ವಯಂ-ಶೈಲಿಯ ಡಬಲ್ ಎಂಜಿನ್ ಸರ್ಕಾರವು ಮಾಸ್ಟರ್ ಮೈಂಡ್ ಮಾಡುತ್ತಿದೆ” ಎಂಬುದರಲ್ಲಿ ಸಂದೇಹವಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಸಂವಹನಗಳ ಉಸ್ತುವಾರಿ ಜೈರಾಮ್ ರಮೇಶ್ ಹೇಳಿದ್ದಾರೆ.
“ತ್ರಿಪುರಾದಲ್ಲಿ ಹಗಲು ಹೊತ್ತಿನಲ್ಲೇ ಪ್ರಜಾಪ್ರಭುತ್ವವನ್ನು ಕೊಲೆ ಮಾಡಲಾಗುತ್ತಿದೆ ಎಂದು ‘ಎಕ್ಸ್’ ನಲ್ಲಿ ಕಾಂಗ್ರೆಸ್‌ನ ತ್ರಿಪುರಾ ಉಸ್ತುವಾರಿ ಗಿರೀಶ್ ಚೋಡಂಕರ್ ಅವರ ಪೋಸ್ಟ್ ಅನ್ನು ಟ್ಯಾಗ್ ಮಾಡಿದ್ದಾರೆ.
ತ್ರಿಪುರಾದಲ್ಲಿ ಆಗಸ್ಟ್ 8 ರಂದು ಪಂಚಾಯತ್ ಚುನಾವಣೆ ನಡೆಯಲಿದ್ದು, ಆಗಸ್ಟ್ 10 ರಂದು ಮತ ಎಣಿಕೆ ನಡೆಯಲಿದೆ.
ಚುನಾವಣೆ ದಿನಾಂಕವನ್ನು ಘೋಷಿಸಿದಾಗಿನಿಂದ, ಬಿಜೆಪಿ ಬೆಂಬಲಿತ ಕಿಡಿಗೇಡಿಗಳು ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಮನೆ ಮನೆಗೆ ದಾಳಿ ಮತ್ತು ಬೆದರಿಕೆಗಳನ್ನು ಪ್ರಾರಂಭಿಸಿದ್ದಾರೆ. ಕಾಂಗ್ರೆಸ್‌ನಿಂದ ಚುನಾವಣೆಗೆ ಸ್ಪರ್ಧಿಸಲು ಬಯಸುವವರಿಗೆ ಬೆದರಿಕೆ ಹಾಕಲಾಗುತ್ತಿದೆ ಎಂದು ಗಿರೀಶ್ ಆರೋಪಿಸಿದ್ದಾರೆ.
ಜುಲೈ 11 ರಂದು ಪಂಚಾಯತ್ ಚುನಾವಣೆ ಘೋಷಣೆಯಾದಒಂದು ದಿನದ ನಂತರ, ಕಲ್ಯಾಣ್‌ಪುರ ಆರ್‌ಡಿ ಬ್ಲಾಕ್, ಮೋಹನ್‌ಪುರ ಆರ್‌ಡಿ ಬ್ಲಾಕ್, ಸತ್ಚಂಡ್ ಆರ್‌ಡಿ ಬ್ಲಾಕ್, ತೆಪಾನಿಯಾ ಆರ್‌ಡಿ ಬ್ಲಾಕ್, ಡುಕ್ಲಿ ಆರ್‌ಡಿ ಬ್ಲಾಕ್, ಸಲೇಮಾ ಬ್ಲಾಕ್, ಬಿಶಾಲ್‌ಗಢ ಬ್ಲಾಕ್‌ಗಳಲ್ಲಿ ಹಿಂಸಾಚಾರ ನಡೆದಿದ್ದು ಹಲವು ಮನೆಗಳನ್ನು ಅಂಗಡಿಗಳನ್ನು ಸುಟ್ಟು ಹಾಕಲಾಗಿದೆ. ಬಿಜೆಪಿ ಕಿಡಿಗೇಡಿಗಳು ಕೃತ್ಯ ಎಸಗಿದ್ದಾರೆ ಎಂದು ಚೋಡಂಕರ್ ಆರೋಪಿಸಿದ್ದಾರೆ.