ಈಗಾಗಲೇ ತನ್ನ ಫಸ್ಟ್‌ಲುಕ್, ಟೀಸರ್, ಟ್ರೇಲರ್ ಮೂಲಕ ಸ್ಯಾಂಡಲ್‌ವುಡ್ ಅಂಗಳದಲ್ಲಿ ಒಂದಷ್ಟು ಸದ್ದು ಮಾಡುತ್ತಿರುವ “ಡೆಮೊ ಪೀಸ್’ ಚಿತ್ರ ತೆರೆಗೆ ಬರೋದಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಸದ್ಯ ಭರದಿಂದ ಚಿತ್ರದ ಪ್ರಮೋಶನ್ ಕೆಲಸಗಳಲ್ಲಿ ನಿರತವಾಗಿರುವ “ಡೆಮೊ ಪೀಸ್’ ಚಿತ್ರತಂಡ, ಇದೇ ಫೆಬ್ರವರಿ 14ರ “ಪ್ರೇಮಿಗಳ ದಿನ’ದಂದು ಚಿತ್ರವನ್ನು ತೆರೆಗೆ ತರಲು ಅಣಿಯಾಗಿದೆ. ಕಿರುತೆರೆಯ “ಬ್ರಹ್ಮ ಗಂಟು’ ಧಾರಾವಾಹಿಯ ಖ್ಯಾತಿಯ ನಟ ಭರತ್ ಭೂಪಣ್ಣ “ಡೆಮೊ ಪೀಸ್’ ಚಿತ್ರದ ಮೂಲಕ ನಾಯಕ ನಟನಾಗಿ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ.
“ಪಂಚತಂತ್ರ’ ಖ್ಯಾತಿಯ ಸೋನಾಲ್ ಮಂತೆರೋ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಸ್ಪರ್ಶ ರೇಖಾ, ಚಕ್ರವರ್ತಿ ಚಂದ್ರ ಚೂಡ್, ರೂಪೇಶ್, ಲೋಹಿತ್, ರಾಕ್‌ಲೈನ್ ಸುಧಾಕರ್ ಮೊದಲಾದವರು “ಡೆಮೊ ಪೀಸ್’ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಹಲವು ಚಿತ್ರಗಳಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವವಿರುವ ವಿವೇಕ್. ಎ “ಡೆಮೊ ಪೀಸ್’ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಮೊದಲ ಬಾರಿಗೆ ನಿರ್ದೇಶಕರಾಗುತ್ತಿದ್ದಾರೆ.
ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ “ಡೆಮೊ ಪೀಸ್’ ಚಿತ್ರದ ಟ್ರೇಲರ್‌ಗೆ ಸೋಶಿಯಲ್ ಮೀಡಿಯಾಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದ್ದು, ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಸುಮಾರು 1.30 ಲಕ್ಷ ಜನರು ಟ್ರೇಲರ್ ವೀಕ್ಷಿಸಿ ಮೆಚ್ಚುಗೆ ಸೂಚಿಸಿದ್ದಾರೆ. ಇದೇ ಖುಷಿಯಲ್ಲಿರುವ ಚಿತ್ರ ತಂಡ, ಈಗ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ. ಸದ್ಯ ಚಿತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆಗಳ ಬಗ್ಗೆ ಮಾತನಾಡುವ ನಿರ್ದೇಶಕ ವಿವೇಕ್. ಎ, “ಇದೊಂದು ಪಕ್ಕಾ ಎಂಟರ್‌ಟೈನ್ಮೆಂಟ್ ಸಿನಿಮಾ. ಇಂದಿನ ಆಡಿಯನ್ಸ್ ಏನೇನು ನಿರೀಕ್ಷಿಸುತ್ತಾರೋ ಅದೆಲ್ಲವೂ ಸಿನಿಮಾದಲ್ಲಿದೆ.
ಅದರ ಜೊತೆಗೆ ಒಂದು ಗಂಭೀರ ವಿಷಯವನ್ನೂ ಇದರಲ್ಲಿ ಹೇಳುತ್ತಿದ್ದೇವೆ. ಲವ್, ಕಾಮಿಡಿ, ಕಾಲೇಜ್ ಲೈಫ್, ಇಂದಿನ ಹುಡುಗರ ಲೈಫ್ ಸ್ಟೈಲ್, ಪೋಷಕರ ಕನಸು, ನಮ್ಮ ಶಿಕ್ಷಣ ವ್ಯವ್ಯಸ್ಥೆ, ಹೀಗೆ ಹಲವು ವಿಷಯಗಳ ಸುತ್ತ ಸಿನಿಮಾ ಸಾಗುತ್ತದೆ. ಎಲ್ಲಾ ಥರದ ಆಡಿಯನ್ಸ್‌ಗೂ ಕನೆಕ್ಟ್ ಆಗುವಂಥ ಕಥೆ ಚಿತ್ರದಲ್ಲಿದೆ. ಈಗಾಗಲೇ ಸಿನಿಮಾಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದ್ದು, ಫೆ. 14ಕ್ಕೆ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರಲಿದ್ದೇವೆ’ ಎನ್ನುತ್ತಾರೆ. ಇನ್ನು “ಡೆಮೊ ಪೀಸ್’ ಚಿತ್ರದಲ್ಲಿ ಮೂರು ಹಾಡುಗಳಿದ್ದು, ಅರ್ಜುನ್ ರಾಮು ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ.
ಚಂದನ್ ಶೆಟ್ಟಿ, ಸಂಚಿತ್ ಹೆಗ್ಡೆ, ರಾಜೇಶ್ ಕೃಷ್ಣನ್ ಹಾಡುಗಳಿಗೆ ಧ್ವನಿಯಾಗಿದ್ದಾರೆ. ನಾಗಾರ್ಜುನ ಶರ್ಮ ಹಾಡುಗಳಿಗೆ ಸಾಹಿತ್ಯ ರಚಿಸಿದ್ದಾರೆ. ಚಿತ್ರಕ್ಕೆ ಪ್ರಸಾದ್ ಬಾಬು ಛಾಯಾಗ್ರಹಣ, ವೆಂಕಿ ಯುಡಿವಿ ಸಂಕಲನ, ವಿಕ್ರಂ ಮೋರ್ ಸಾಹಸವಿದೆ. ಬೆಂಗಳೂರು, ತುಮಕೂರು, ದಾಂಡೇಲಿ ಮೊದಲಾದ ಕಡೆಗಳಲ್ಲಿ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. “ರೇಖಾ ಮೂವೀಸ್’ ಬ್ಯಾನರ್‌ನಲ್ಲಿ ನಟಿ ಸ್ಪರ್ಶ ರೇಖಾ ಮತ್ತು ವಿವೇಕ್. ಎ ಜಂಟಿಯಾಗಿ “ಡೆಮೊ ಪೀಸ್’ ಚಿತ್ರವನ್ನು ನಿರ್ಮಿಸಿದ್ದಾರೆ. ಒಟ್ಟಾರೆ “ಡೆಮೊ ಪೀಸ್’ ತೆರೆಮೇಲೆ ಪ್ರೇಕ್ಷಕ ಪ್ರಭುಗಳಿಗೆ ಎಷ್ಟರ ಮಟ್ಟಿಗೆ ಇಷ್ಟವಾಗಲಿದೆ ಅನ್ನೋದು ಫೆಬ್ರವರಿ ಎರಡನೇ ವಾರ ಗೊತ್ತಾಗಲಿದೆ.