ಕುಮಟಾ: ತಾಲೂಕಿನ ದೀವಗಿಯಲ್ಲಿ ಕುಮಟಾದಿಂದ ಶಿರಸಿ ಕಡೆಗೆ ಸಂಚರಿಸುವ ಚತುಷ್ಪಥ ಹೆದ್ದಾರಿಯ ತಿರುವು ಹಾಗೂ ಅಂಗಡಿಕೇರಿ ಮತ್ತು ನವನಗರದ ಮಧ್ಯದ ಹೆದ್ದಾರಿ ಕಾಮಗಾರಿಯಲ್ಲಿ ಸಾಕಷ್ಟು ಲೋಪದೋಷಗಳಿದ್ದು, ಮುಂದಿನ ದಿನಗಳಲ್ಲಿ ಈ ರಸ್ತೆ ಡೇಂಜರ್ ಝೋನ್ ಆಗಿ ಮಾಪಾರ್ಡಾಗುವ ಸಂಭವವಿದೆ. ಆದ್ದರಿಂದ ಈ ಚತುಷ್ಪಥ ನಿರ್ಮಾಣದ ವಿನ್ಯಾಸವನ್ನು ಶೀಘ್ರದಲ್ಲೇ ಸರಿಪಡಿಸಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ಕಳೆದ ಎರಡು ತಿಂಗಳ ಹಿಂದೆ ದೀವಗಿ ಗ್ರಾಮಸ್ಥರು ಚತುಷ್ಪಥ ಅವೈಜ್ಞಾನಿಕ ಕಾಮಗಾರಿಯನ್ನು ವಿರೋಧಿಸಿ, ರಸ್ತೆತಡೆ ನಡೆಸಿದ್ದರು. ಈ ವೇಳೆ ಶಾಸಕ ದಿನಕರ ಶೆಟ್ಟಿ ಹಾಗೂ ರಾ.ಹೆ. ಪ್ರಾಧಿಕಾರದ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಮನವಿ ಸಲ್ಲಿಸಿದ್ದರು. ಅದಕ್ಕೂ ಪೂರ್ವದಲ್ಲಿಯೂ ಸಾರ್ವಜನಿಕರು ದಿವಗಿಯಲ್ಲಿ ಚತುಷ್ಪಥದ ಅಪಾಯಕಾರಿ ಲಕ್ಷಣದ ಬಗ್ಗೆ ಸೂಕ್ತ ಕ್ರಮಕ್ಕಾಗಿ ಹಲವಾರು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದ್ದರು.
ಆದರೆ ಪ್ರತೀ ಬಾರಿಯೂ ಸಿಕ್ಕ ಭರವಸೆಗಳು ಆಶ್ವಾಸನೆಗಳಾಗಿಯೇ ಉಳಿದುಕೊಂಡಿದೆ. ಕುಮಟಾದಿಂದ ಶಿರಸಿ ಮಾರ್ಗವಾಗಿ ತೆರಳುವಾಗ ದೀವಗಿ ತಿರುವಿನಲ್ಲಿ ವಾಹನ ಸವಾರರು ತಮ್ಮ ಜೀವ ಕೈಯಲ್ಲಿ ಹಿಡಿದು ರಸ್ತೆ ದಾಟಬೇಕಾದ ಸ್ಥಿತಿ ಎದುರಾಗಿದೆ. ಇದರಿಂದಾಗಿ ವಾಹನ ಸವಾರರು ತೀರಾ ಸಮಸ್ಯೆ ಎದುರಿಸಬೇಕಿದೆ. ಅತಿಯಾದ ವಾಹನ ದಟ್ಟಣೆ ಇರುವ ಸಂದರ್ಭದಲ್ಲಿ ಶಿರಸಿಯತ್ತ ತಿರುವು ಪಡೆಯಬೇಕು ಎಂದಾದರೆ ಕಾರವಾರ ಮಾರ್ಗದ ವಾಹನ ಸಂಚಾರಕ್ಕೆ ಅಡಚಣೆಯಾಗುವ ಜೊತೆ ಎದುರಿನಿಂದ ಹಾಗೂ ಹಿಂದಿನಿಂದಲೂ ಬರುವ ವಾಹನಗಳಿಂದ ಅಪಘಾತಗಳಾಗುವ ಸಂಭವ ಹೆಚ್ಚಾಗಿದೆ. ಇನ್ನು ಈ ಭಾಗದಲ್ಲಿ ಯಾವುದೇ ಅಡೆತಡೆ ಅಥವಾ ವೇಗ ನಿಯಂತ್ರಕಗಳು ಇಲ್ಲದೇ ಇರುವುದರಿಂದ ವಾಹನಗಳು ವೇಗವಾಗಿಯೇ ಸಾಗುವುದು ಹಾಗೂ ಶಿರಸಿ ರಸ್ತೆಗೆ ತಿರುವು ತೆಗೆದುಕೊಳ್ಳುವುದು ಸಾಮಾನ್ಯ ದೃಶ್ಯವಾಗಿದೆ.
ಸ್ಥಳೀಯರ ಪ್ರಮುಖ ಬೇಡಿಕೆಗಳಲ್ಲಿ ಒಂದಾದ ಅಂಗಡಿಕೇರಿ ಹಾಗೂ ನವನಗರದ ನಡುವಿನ ಮೇಲ್ಸೇತುವೆ ನಿರ್ಮಾಣದ ಕಾರ್ಯ ಹಾಗೇಯೇ ಉಳಿದಿದೆ. ಅಘನಾಶಿನಿ ನದಿಗೆ ಚತುಷ್ಪಥ ಕಾಮಗಾರಿ ಅಡಿಯಲ್ಲಿ ನಿರ್ಮಿಸಲಾದ ಹೊಸ ಸೇತುವೆಗೆ ಮಾತ್ರ ಪಾದಚಾರಿಗಳ ಮಾರ್ಗವಿದ್ದು, ಇನ್ನೊಂದು ಬದಿಯಲ್ಲಿರುವ ಹಳೆಯ ಸೇತುವೆಗೆ ಈ ವ್ಯವಸ್ಥೆ ಇಲ್ಲ. ದೀವಗಿಯಲ್ಲಿ ಒಂದೆಡೆ ಚತುಷ್ಪಥ ಹೆದ್ದಾರಿ ದಾಟುವಲ್ಲಿ ಜನ, ಜಾನುವಾರುಗಳಿಗೆ ಅಪಾಯವಿದ್ದರೆ, ಇನ್ನೊಂದೆಡೆ ಅಂಗಡಿಕೇರಿಯಿಂದ ಕುಮಟಾದತ್ತ ಹೊರಡುವ ವಾಹನಗಳು ತಿರುವು ತೆಗೆದುಕೊಳ್ಳುವಲ್ಲಿ ಎಲ್ಲಿಯೂ ಯೂ ಟರ್ನ್ ಇಲ್ಲ. ರಸ್ತೆಯ ಇನ್ನೊಂದು ಬದಿಗೆ ಸಂಚರಿಸಬೇಕು ಎಂದಾದರೆ ಅಲ್ಲಿಂದ ಸ್ವಲ್ಪ ದೂರದಲ್ಲಿರುವ ಶಿರಸಿ ತಿರುವಿನವರೆಗೆ ವಿಮುಖ ಸಂಚಾರ ಮಾಡಿ ಬರಬೇಕಾಗಿದೆ. ಹೀಗಾಗಿ ಎಲ್ಲ ರೀತಿಯಲ್ಲೂ ಚತುಷ್ಪಥ ಕಾಮಗಾರಿಯಿಂದ ಸ್ಥಳೀಯರಿಗೆ ಹೆಚ್ಚಿನ ಅಪಾಯವಿದೆ.
ದೀವಗಿ ಸಮೀಪ ಶಿರಸಿ ರಸ್ತೆಗೆ ತೆರಳುವ ಚತುಷ್ಪಥ ಹೆದ್ದಾರಿ ತಿರುವು ಮತ್ತು ಅಂಗಡಿಕೇರಿ ಹಾಗೂ ನವನಗರದ ನಡುವಿನ ಮೇಲ್ಸೇತುವೆ ನಿರ್ಮಾಣ ಕಾಮಗಾರಿಯನ್ನು ಶೀಘ್ರದಲ್ಲೇ ಪ್ರಾರಂಭಿಸಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.