Advertisement

ಜನಪ್ರತಿನಿಧಿಗಳ ನಿಲುವು ಸ್ಪಷ್ಟಪಡಿಸಲು ಆಗ್ರಹ

03:01 PM Oct 16, 2019 | Team Udayavani |

ಹೊನ್ನಾವರ: ಜಿಲ್ಲೆಯ ಬಿಜೆಪಿ, ಕಾಂಗ್ರೆಸ್‌ ಶಾಸಕರು, ಸಂಸದರು ಅರಣ್ಯ ಭೂಮಿ ಸಾಗುವಳಿದಾರರ ಕುರಿತು ತಮ್ಮ ನಿಲುವನ್ನು ಸ್ಪಷ್ಟಪಡಿಸುತ್ತಿಲ್ಲ. ವಿಧಾನಸಭೆ, ಲೋಕಸಭೆಗಳಲ್ಲಿ ಸೊಲ್ಲೆತ್ತುತ್ತಿಲ್ಲ. ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಜನ ಬೀದಿಗಿಳಿದು ಪ್ರತಿಭಟನೆ ನಡೆಸಲು ತೊಡಗಿ ವಾರಕಳೆದಿದೆ.

Advertisement

ಜಾತಿ, ಧರ್ಮ, ಮೋದಿ ಹೆಸರಲ್ಲಿ ಮತ ಕೇಳಿದರು, ಮತ ಹಾಕಿದೆವು. ಇವರಿಂದ ಅಲ್ಲವಾದರೂ ರೈತಪರ ಹೋರಾಟಗಾರ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಬಡವರ ಕುರಿತು ವಿಶೇಷ ಕಾಳಜಿ ಹೊಂದಿದ ಮೋದಿಯವರ ಸರ್ಕಾರದಿಂದ ತಮಗೆ ಭೂಮಿ ಹಕ್ಕು ದೊರೆಯಬಹುದು ಎಂದು ಆಸೆಯಿಂದಿರುವ ಜನರಿಗೆ ತೀವ್ರ ನಿರಾಸೆ ಉಂಟಾಗಿದೆ. ಈ ವರ್ಷದ ಮಳೆ 725 ಅತಿಕ್ರಮಣದಾರರ ಮನೆಯನ್ನು ತೊಳೆದುಕೊಂಡು ಹೋಗಿದೆ. 1830 ಹೆಕ್ಟೇರ್‌ ಭೂಮಿಯ ಬೆಳೆ ನಾಶವಾಗಿದೆ.

ಅವರಿಗೆ ಪರಿಹಾರವಿಲ್ಲ, ಮನೆ ಕಟ್ಟಿಕೊಳ್ಳಲು ಅರಣ್ಯ ಇಲಾಖೆ ಬಿಡುವುದಿಲ್ಲ. ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ, ಅರಣ್ಯ ಹಕ್ಕು ಕಾಯಿದೆಯಡಿ ಮಂಜೂರಿಗೆ ಸಂಬಂಧಪಟ್ಟಂತೆ ಪುನರ್‌ ಪರಿಶೀಲನಾ ವಿಧಾನವನ್ನು ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ಕೇಂದ್ರ ಬುಡಕಟ್ಟು ಮಂತ್ರಾಲಯ ಸೂಚಿಸಿದ ಮಾರ್ಗಸೂಚಿಯಂತೆ ನಿರ್ದಿಷ್ಟ ಕಾಲಮಾನದೊಳಗೆ ಮಂಜೂರಿ ಪ್ರಕ್ರಿಯೆಯನ್ನು ಯಾಕೆ ಜರುಗಿಸುತ್ತಿಲ್ಲ ಎಂಬ ಪ್ರಶ್ನೆಗೆ ಮೌನವೇ ಉತ್ತರ.

ಜಿಲ್ಲೆಯ 14 ಲಕ್ಷ ಜನರಲ್ಲಿ ಬದುಕಲು ಬೇರೆ ಗತಿ ಕಾಣದೆ ಸುಮಾರು 1ಲಕ್ಷ ಕುಟುಂಬಗಳ ಜನ 30ಸಾವಿರ ಹೆಕ್ಟೇರ್‌ ಅರಣ್ಯ ಭೂಮಿಯನ್ನು ಸಾಗುವಳಿ ಮಾಡಿಕೊಂಡಿದ್ದಾರೆ. ಸರ್ಕಾರದ, ಜನಪ್ರತಿನಿಧಿಗಳ ಗಮನಕ್ಕೆ ತಾರದೆ ಅಭಯಾರಣ್ಯದ ಘೋಷಣೆಯಾಗಿದೆ. ಭಟ್ಕಳ, ಕುಮಟಾ ಶಾಸಕರು ಮಾನವೀಯ ದೃಷ್ಟಿಯಿಂದ ಅತಿಕ್ರಮಣದಾರರ ಪ್ರತಿನಿಧಿಗಳನ್ನು ಕಂಡು ಬೆಂಬಲ ಸೂಚಿಸಿದ್ದಾರೆ.

ಮುಖ್ಯಮಂತ್ರಿಗಳವರೆಗೆ ಕರೆದೊಯ್ದು ಮನವಿ ಸಲ್ಲಿಸಿದ್ದಾರೆ. ಮುಖ್ಯಮಂತ್ರಿಗಳ ಅಭಿಪ್ರಾಯ ಪ್ರಕಟವಾಗಿಲ್ಲ. ವಿಧಾನಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಅಭಯಾರಣ್ಯ ಪ್ರಕಟಣೆ ಸರಿಯಲ್ಲ ಎಂದು ಹೇಳಿದ್ದಾರೆ. ಕೇಂದ್ರ, ರಾಜ್ಯ ಅರಣ್ಯ ಸಚಿವರಿಗೆ ವಿಷಯ ತಿಳಿದಿದೆಯೋ ಇಲ್ಲವೋ ಗೊತ್ತಿಲ್ಲ. ಇನ್ನೆಷ್ಟು ವರ್ಷ ನಾವು ಕಾಯಬೇಕು ಎಂದು ಜನ ಕೇಳುತ್ತಿದ್ದಾರೆ.

Advertisement

ಭೂಮಿ ಸಾಗುವಳಿಯ ಹಕ್ಕು ಕೊಡಿ, ಇಲ್ಲವಾದರೆ ಬೇರೆ ಉದ್ಯೋಗ ಕೊಡಿ, ಮನೆಕೊಡಿ, ನಮಗೂ ಯಾವುದೇ ಮೂಲ ಸೌಲಭ್ಯವಿಲ್ಲದ ಕಾಡಿನಲ್ಲಿ ಉಳಿಯುವ ಮನಸ್ಸಿಲ್ಲ ಎನ್ನುತ್ತಿದ್ದಾರೆ. ಏನಾದರೂ ಒಂದು ತೀರ್ಮಾನಕ್ಕೆ ಸರ್ಕಾರ ಬರಬೇಕು. ಮೂರು ದಶಕಗಳಿಂದ ಜನ ಅರ್ಜಿಸಲ್ಲಿಸಿ, ಮೆರವಣಿಗೆ ಮಾಡಿ, ಪ್ರತಿಭಟಿಸಿ ದಣಿದಿದ್ದಾರೆ. ಅರಣ್ಯ ಇಲಾಖೆ ಮೇಲೆ ಬೇರೆ ಒತ್ತಡವಿದೆ. ಪೊಲೀಸ್‌ ಬಲದಿಂದ ಒಕ್ಕಲೆಬ್ಬಿಸಿದ ಘಟನೆಗಳು

ನಡೆದಿವೆ. ಜಿಲ್ಲೆಯಲ್ಲಿ ಹುಟ್ಟಿ ಬೆಳೆದವರು ಹೊಟ್ಟೆಪಾಡಿಗೆ ಇನ್ನೆಲ್ಲಿ ಹೋಗಬೇಕು ಎಂಬುದು ಜನರ ಪ್ರಶ್ನೆ. ರವೀಂದ್ರನಾಥ ನಾಯ್ಕ ನಿರಂತರ ಹೋರಾಟ ನಡೆಸಿದ್ದಾರೆ. ಹೋರಾಟಗಾರ ಕಲ್ಕುಳಿ ವಿಠಲ ಹೆಗಡೆ ಪ್ರವೇಶವಾಗಿದೆ. ಅಳಿವು ಉಳಿವಿನ ಪ್ರಶ್ನೆ ಎದುರಾದಾಗ ಏನೂ ಆಗಬಹುದು. ನಮಗೆ ಏನಾದರೂ ನಿರ್ಣಯ ಕೊಡಲಿ, ಕಾಯಿಸುವುದು ಸಾಯಿಸುವುದಕ್ಕಿಂತ ಹೆಚ್ಚಿನ ಸಂಕಟ ಕೊಡುತ್ತದೆ ಅನ್ನುತ್ತಾರೆ ಜನ. ಯಾಕೆ ಜನಪ್ರತಿನಿಧಿಗಳ ಈ ಮೌನ ?

 

ಜೀಯು, ಹೊನ್ನಾವರ

Advertisement

Udayavani is now on Telegram. Click here to join our channel and stay updated with the latest news.

Next