ಕಠ್ಮಂಡು: ಭಾರತದೊಂದಿಗಿನ ಗಡಿಜಗಳದ ನಡು ವೆಯೇ ನೇಪಾಲ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಈಗ ಅವರದ್ದೇ ಪಕ್ಷದಲ್ಲಿ ಛೀಮಾರಿ ಹಾಕಿಸಿಕೊಳ್ಳುತ್ತಿದ್ದಾರೆ.
‘ಆಡಳಿತದ ಎಲ್ಲ ವಿಷಯಗಳಲ್ಲೂ ವೈಫಲ್ಯ ಕಂಡಿರುವ ಓಲಿ ಪ್ರಧಾನಿ ಹುದ್ದೆಗೆ ರಾಜೀನಾಮೆ ಕೊಡಬೇಕು’ ಎಂದು ಮಾಜಿ ಪ್ರಧಾನಿ ಪುಷ್ಪ ಕಮಾಲ್ ದಹಾಲ್ (ಮತ್ತೊಂದು ಹೆಸರು ಪ್ರಚಂಡ) ಪಟ್ಟುಹಿಡಿದಿದ್ದಾರೆ.
ನೇಪಾಲದ ಕಮ್ಯುನಿಸ್ಟ್ ಪಕ್ಷದ ಅಧ್ಯಕ್ಷರೂ ಆಗಿರುವ ಪ್ರಚಂಡ, “ರಾಜಕಾರಣಿಯಾಗಿ ನಾನು ಓಲಿಯನ್ನು ಬೆಂಬಲಿಸಿದರೆ ಅದಕ್ಕಿಂತ ದೊಡ್ಡ ಪ್ರಮಾದ ಇನ್ನೊಂದು ಇರಲಾರದು’ ಎಂದಿದ್ದಾರೆ.
ಆದರೆ ಓಲಿ ಪ್ರಧಾನಿ ಕುರ್ಚಿಯಿಂದ ಇಳಿಯಲು ನಿರಾಕರಿಸುತ್ತಿದ್ದಾರೆ. ಒಂದು ವೇಳೆ ರಾಜೀನಾಮೆ ಕೊಡದಿದ್ದರೆ ಕಮ್ಯುನಿಸ್ಟ್ ಪಕ್ಷವನ್ನು ವಿಭಜಿಸುವುದಾಗಿ ಪ್ರಚಂಡ ಕಟುವಾಗಿ ಹೇಳಿದ್ದಾರೆ.
ಈಗಾಗಲೇ ನೇಪಾಲ ಕಮ್ಯುನಿಸ್ಟ್ ಪಕ್ಷದ ಉನ್ನತ ನಾಯಕರು ಓಲಿ ಬಳಗದಿಂದ ಹೊರಬಂದು ಪ್ರಚಂಡ ಅವರನ್ನು ಬೆಂಬಲಿಸುತ್ತಿದ್ದಾರೆ. ಭಾರತದೊಂದಿಗೆ ಜಗಳ ಸೇರಿದಂತೆ ಓಲಿ ಸರಕಾರ ಇತ್ತೀಚೆಗೆ ಇಟ್ಟ ತಪ್ಪು ಹೆಜ್ಜೆಗಳೇ ಅವರ ಪಕ್ಷದಲ್ಲಿ ಭಿನ್ನಮತ ಸ್ಫೋಟಗೊಳ್ಳಲು ಕಾರಣ ಎನ್ನಲಾಗಿದೆ.