ಗೋಕಾಕ: ದೇಶದ ಸ್ವಾತಂತ್ರ್ಯ ಪೂರ್ವದಲ್ಲಿಯೇ “ಸಬ್ ಡಿಸ್ಟ್ರಿಕ್ಟ್’ ಇದ್ದ ಗೋಕಾಕ ನಗರವನ್ನು ರಾಜ್ಯ ಸರಕಾರ ಜಿಲ್ಲೆಯಾಗಿ ಘೋಷಿಸಬೇಕೆಂದು ಬಿಜೆಪಿ ಮುಖಂಡ ಅಶೋಕ ಪೂಜಾರಿ ಆಗ್ರಹಿಸಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಈವರೆಗೆ ಗೋಕಾಕ ಜಿಲ್ಲೆ ಘೋಷಣೆಯಾಗಿಲ್ಲ. 1891ರಲ್ಲಿಯೇ ಗೋಕಾಕ ಮಿಲ್ಲಿಗೆ ಜಮೀನು ಲೀಜ್ ನೀಡಿದ ಸಮಯದಲ್ಲಿ ಅದು ಗೆಜೆಟ್‌ದಲ್ಲಿ
ಪ್ರಕಟಗೊಂಡಿದ್ದು, ಅದರಲ್ಲಿ ಗೋಕಾಕ ಸಬ್ ಡಿಸ್ಟ್ರಿಕ್ಟ್ ಎಂದು ಉಲ್ಲೇಖೀಸಲಾಗಿದೆ. ಕಾರಣಾಂತರದಿಂದ ಹಾಗೂ ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಗೋಕಾಕ ಜಿಲ್ಲೆಯಾಗಲು ಸಾಧ್ಯವಾಗಿಲ್ಲ. ಕಳೆದ 40 ವರ್ಷಗಳಿಂದ ಗೋಕಾಕ ಜಿಲ್ಲೆಗಾಗಿ ಆಗ್ರಹಿಸಿ ಹೋರಾಟ, ಚಳವಳಿಯನ್ನು ಈ ಭಾಗದ ಜನತೆ ನಡೆಸಿದರೂ ಉಪಯೋಗವಾಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಈಗ ವಿಜಯನಗರ ಜಿಲ್ಲೆ ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೊರಟಿರುವುದು ನೋಡಿದರೆ ಈ ಭಾಗದ ಜನಸಾಮಾನ್ಯರ ಬೇಡಿಕೆಗೆ ಯಾವ ಬೆಲೆಯೂ ಇಲ್ಲದಂತಾಗಿದೆ. ಜಿಲ್ಲಾ ವಿಭಜನೆಗಾಗಿ ರಚಿಸಿದ ಎಲ್ಲ ಆಯೋಗಗಳು ಗೋಕಾಕ ಜಿಲ್ಲೆ ಮಾಡಲು ಶಿಫಾರಸು ಮಾಡಿದ್ದರೂ ರಾಜ್ಯ ಸರಕಾರ ಗೋಕಾಕ ಜಿಲ್ಲೆ ಮಾಡಲು ಮೀನಿಮೇಷ ಮಾಡುತ್ತಿರುವುದು ದುಃಖದ ಸಂಗತಿ ಎಂದರು.
ರಾಜ್ಯ ಸರಕಾರದ ಮೇಲೆ ಒತ್ತಡ ಹೇರಲು ಈ ಬಗ್ಗೆ ಚಳವಳಿ, ಬಂದ್ ಇತ್ಯಾದಿ ಹೋರಾಟದ ಮೂಲಕ ಯತ್ನಿಸಲಾಗುವುದು. ಇದು ಪಕ್ಷಾತೀತವಾಗಿ ನಡೆಯಲಿದ್ದು, ಹೋರಾಟದಲ್ಲಿ ಜನಪ್ರತಿನಿಧಿ ಗಳು ಪಾಲ್ಗೊಳ್ಳುವಂತೆ ಮನವೊಲಿಸಲಾಗುವುದು.ತಾಲೂಕಿನ ಜನತೆ ಕೂಡಾ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ನ್ಯಾಯವಾದಿಗಳ ಸಂಘದ ಅಧ್ಯಕ್ಷ ಯು.ಬಿ. ಶಿಂಪಿ ಮಾತನಾಡಿ, ಈವರೆಗೆ ಜಿಲ್ಲಾ ಹೋರಾಟದಲ್ಲಿ ನ್ಯಾಯವಾದಿಗಳ ಸಂಘ ಮುಂಚೂಣಿಯಲ್ಲಿದ್ದು, ಸೆ.23ರಂದು ನ್ಯಾಯವಾದಿಗಳ ಸಂಘದ ಸಭೆ ಕರೆದು, ಈ ಬಗ್ಗೆ ಚರ್ಚಿಸಿ ಹೋರಾಟದ ರೂಪುರೇಷೆ ತಯಾರಿಸಲಾಗುವುದು ಎಂದರು.
ಬಿಜೆಪಿ ನಗರ ಘಟಕದ ಅಧ್ಯಕ್ಷ ಎಸ್.ವ್ಹಿ. ದೇಮಶೆಟ್ಟಿ, ಪ್ರಕಾಶ ಭಾಗೋಜಿ, ದಸ್ತಗೀರ ಪೈಲವಾನ, ಸುನೀಲ ಮುರಕೀಭಾಂವಿ, ನ್ಯಾಯವಾದಿಗಳಾದ ಎಸ್.ಎಸ್. ಪಾಟೀಲ, ಜಿ.ಆರ್. ಪೂಜೇರ, ಗಿರೀಶ ನಂದಿ ಅವರು ಮಾತನಾಡಿದರು.