ಚಿಕ್ಕಮಗಳೂರು: ಕೋವಿಡ್ ನಿರ್ವಹಣೆಯಲ್ಲಿ ಜಿಲ್ಲಾಡಳಿತ ವಿಫಲವಾಗಿದ್ದು, ಹೊರ ಜಿಲ್ಲೆ ಮತ್ತು ಹೊರರಾಜ್ಯದಿಂದ ಬಂದು ಹೋಂ ಸ್ಟೇಗಳಲ್ಲಿ ವಾಸ್ತವ್ಯ ಹೂಡಿರುವರನ್ನು ಪತ್ತೆಹಚ್ಚಿ ಬಂಧಿಸಬೇಕೆಂದು ಜೆಡಿಎಸ್ ಉಪಾಧ್ಯಕ್ಷ ಎಚ್.ಎಚ್. ದೇವರಾಜ್ ಆಗ್ರಹಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊರಜಿಲ್ಲೆ ಮತ್ತು ಹೊರರಾಜ್ಯದಿಂದ ಬಂದು ಕೋವಿಡ್ ನಿಯಮಉಲ್ಲಂಘಿಸಿ ವಾಸ್ತವ್ಯ ಹೂಡಿದ್ದಾರೆಂಬ ಮಾಹಿತಿ ಇದ್ದು,ಇದರಲ್ಲಿ ಪ್ರಭಾವಿ ರಾಜಕಾರಣಿಗಳ ಕೈವಾಡವೂ ಇದೆ. ಅಂತಹ ವ್ಯಕ್ತಿಗಳ ವಾಹನವನ್ನು ವಶಪಡಿಸಿಕೊಂಡು ಬಂಧಿಸಬೇಕೆಂದು ತಿಳಿಸಿದರು. ಲಾಕ್‌ಡೌನ್‌ನಿಂದ ರೈತರ ಸ್ಥಿತಿ ಚಿಂತಜನಕವಾಗಿದೆ. ತರಕಾರಿ ಬೆಳೆದು ಕೈಸುಟ್ಟುಕೊಂಡಿದ್ದಾರೆ.
ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿದ್ದಾರೆ. ಸರ್ಕಾರ ರೈತರಿಗಾದ ನಷ್ಟವನ್ನು ತುಂಬಿಕೊಡಬೇಕು. ಇಲ್ಲದಿದ್ದರೆ ಪಕ್ಷದಿಂದ ಹೋರಾಟ ನಡೆಸುವ ಎಚ್ಚರಿಕೆಯನ್ನು ನೀಡಿದರು. ಇಂಧನ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನ ವಿರೋಧಿ ನೀತಿ ಮತ್ತು ಅವೈಜ್ಞಾನಿಕ ನಿರ್ವಹಣೆ ಖಂಡನೀಯ ಎಂದ ಅವರು, ಇಂಧನ ಮತ್ತು ವಿದ್ಯುತ್ ದರವನ್ನು ಕಡಿಮೆ ಮಾಡಬೇಕೆಂದು ಹೇಳಿದರು. ಕೋವಿಡ್ ಪರಿಸ್ಥಿತಿಯಲ್ಲಿ ಅಧಿಕಾರಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜನಪ್ರತಿನಿಧಿ ಗಳುಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದಾರೆ. ಬೇರೆ ಬೇರೆ ಸಂಘಸಂಸ್ಥೆಗಳು ನೀಡುವ ಆಹಾರದ ಕಿಟ್‌ಗಳನ್ನು ಜನಪ್ರತಿನಿಧಿ ಗಳು ನೀಡಿ ಮತ್ತು ಪಡಿತರ ಅಕ್ಕಿ ನೀಡಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.
ಮಲ್ಲೇನಹಳ್ಳಿಯ ಹೋಂಸ್ಟೇವೊಂದರಲ್ಲಿ ಗ್ರಾಪಂ ಮಾಜಿ ಸದಸ್ಯರ ಪತಿಯೊಬ್ಬರು ಪಾರ್ಟಿ ನೀಡಿದ್ದು, ಗ್ರಾಮದಲ್ಲಿ ಕೋವಿಡ್ ಸೋಂಕು ಹೆಚ್ಚಾಗಿ ಹರಡಲುಕಾರಣವಾಗಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದಚಂದ್ರಪ್ಪ, ಮಂಜಪ್ಪ, ಹುಣಸೆಮಕ್ಕಿ ಲಕ್ಷ್ಮಣ್, ಜಯಕುಮಾರ್ ಇದ್ದರು.