ಲಿಂಗಸುಗೂರು: ರಸ್ತೆ ಸಾರಿಗೆ ಸಂಸ್ಥೆ ಸ್ಥಳೀಯ ಘಟಕದ ಚಾಲಕನ ಮೇಲೆ ಹಲ್ಲೆ ನಡೆಸಿದ ಮಹಿಳೆ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಆಗ್ರಹಿಸಿ ಸಾರಿಗೆ ನೌಕರರ ಸಂಘದ ಪದಾಧಿಕಾರಿಗಳು ಗುರುವಾರ ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು. ಲಿಂಗಸುಗೂರು-ಕರ್ನೂಲ್ ಮಾರ್ಗದ ಬಸ್ ಚಾಲಕ ಚೆನ್ನಪ್ಪ ಎಂಬುವವರು ಹಲ್ಲೆಗೊಳಗಾಗಿದ್ದಾರೆ.
ಪಾಮನಕೆಲ್ಲೂರು ಹತ್ತಿರ ಪಾಮನಕೆಲ್ಲೂರು ಸರಕಾರಿ ಪ್ರೌಢಶಾಲೆಯಲ್ಲಿ ಎಸ್‌ಡಿಎ ಆಗಿರುವ ಬಸಮ್ಮ ಎಂಬುವವರು
ಚಾಲಕನ ಮೇಲೆ ವಿನಾಕಾರಣ ಹಲ್ಲೆ ಮಾಡಿದ್ದಲ್ಲದೇ ಜೀವ ಬೆದರಿಕೆ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ.
ಸಾರ್ವಜನಿಕರಿಗೆ ತೊಂದರೆ ನೀಡಿದ್ದಾರೆ. ಹೀಗಾಗಿ ಸಾರಿಗೆ ನೌಕರರಿಗೆ ರಕ್ಷಣೆ ನೀಡಬೇಕು. ಆರೋಪಿ ಬಸಮ್ಮ ಅವರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಸಾರಿಗೆ ಘಟಕಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವುದು ಎಂದು ಒತ್ತಾಯಿಸಿದರು.
ವ್ಯವಸ್ಥಾಪಕರ ಮೀನಾ ಮೇಷ: ಸಾರಿಗೆ ನೌಕರರಿಂದ ಮನವಿ ಸ್ವೀಕರಿಸಬೇಕಿದ್ದ ಘಟಕ ವ್ಯವಸ್ಥಾಪಕ ಪ್ರಕಾಶ ದೊಡ್ಡಮನಿ ತಮ್ಮ ಕಚೇರಿಯಲ್ಲಿದ್ದರೂ ಮನವಿ ಸ್ವೀಕರಿಸಲು ಹಿಂದೇಟು ಹಾಕಿದರು. ಇದರಿಂದಾಗಿ ಸಾರಿಗೆ ನೌಕರರು ಘಟಕದ ಮುಖ್ಯ ಗೇಟ್ ಮುಂಭಾಗದಲ್ಲಿ ಒಂದು ತಾಸು ಕಾಯುವಂತಾಯಿತು. ನೌಕರರ ಬಗ್ಗೆ ಘಟಕದ ವ್ಯವಸ್ಥಾಪಕರಿಗೆ ಕಾಳಜಿ ಇಲ್ಲದಂತಾಗಿದೆ ಎಂದು ನೌಕರರು ಆಕ್ರೋಶ ವ್ಯಕ್ತಪಡಿಸಿದರು. ಮೇಲಾಗಿ ಮನವಿ ಸಲ್ಲಿಸಲು ಮೆಕ್ಯಾನಿಕ್ ಗಳು ಭಾಗವಹಿಸುವುದನ್ನು ತಡೆದು ಅವರನ್ನು ವಾಪಸ್ ಕೆಲಸಕ್ಕೆ ಹೋಗುವಂತೆ ಸೂಚಿಸಿದ್ದಾರೆ.
ಇದರಿಂದ ನೌಕರರಿಗೆ ರಕ್ಷಣೆಯಿಲ್ಲದಂತಾಗಿದೆ ಎಂದು ನೌಕರರು ದೂರಿದರು. ನೌಕರರ ಸಂಘ ಅಧ್ಯಕ್ಷ ಶಿವನಗೌಡ,
ಕುಪ್ಪಣ್ಣ, ಶಿವಾನಂದ, ಲಕ್ಷ್ಮಪ್ಪ, ಈರಣ್ಣ, ಚೆನ್ನಬಸಪ್ಪ, ಸಿದ್ರಾಮಪ್ಪ, ಮಲ್ಲಪ್ಪ, ರಮೇಶ ಇತರರು ಇದ್ದರು.