Advertisement

ಮೂರನೇ ಅಲೆ ಭೀತಿಗೆ 2ನೇ ಡೋಸ್‌ಗೆ ಬೇಡಿಕೆ!

11:50 AM Dec 07, 2021 | Team Udayavani |

ರಾಯಚೂರು: ಕೋವಿಡ್‌ 19 ಎರಡನೇ ಅಲೆ ವೇಳೆ ಕೋವಿಡ್‌ ಲಸಿಕೆ ನೀಡಲು ಸರ್ಕಾರ ಏನೆಲ್ಲ ಪ್ರಯತ್ನ ಪಟ್ಟರೂ ಅಷ್ಟಾಗಿ ಸ್ಪಂದಿಸದ ಜನ; ಮೂರನೇ ಅಲೆ ಆತಂಕ ಶುರುವಾಗುತ್ತಿದ್ದಂತೆ ಆಸ್ಪತ್ರೆಗಳತ್ತ ಮುಖ ಮಾಡುತ್ತಿದ್ದಾರೆ.

Advertisement

ಇಲಾಖೆ ಅಧಿಕಾರಿಗಳೇ ಹೇಳುವಂತೆ ಜಿಲ್ಲೆಯಲ್ಲಿ ಕೋವ್ಯಾಕ್ಸಿನ್‌ ಮತ್ತು ಕೋವಿಶಿಲ್ಡ್‌ ಸೇರಿ ಮೊದಲ ಡೋಸ್‌ ಶೇ.87ರಷ್ಟು ನೀಡಿದ್ದರೆ, ಎರಡನೇ ಡೋಸ್‌ ಶೇ.52ರಷ್ಟು ಮಾತ್ರ ನೀಡಲಾಗಿತ್ತು. ಮೊದಲ ಡೋಸ್‌ ಪಡೆದವರು ಎರಡನೇ ಡೋಸ್‌ ಪಡೆಯಲು ಉದ್ದೇಶ ಪೂರಕವಾಗಿಯೇ ವಿಳಂಬ ಮಾಡಿದ್ದಾರೆ ಎನ್ನುತ್ತವೆ ಇಲಾಖೆ ಮೂಲಗಳು.

ಆದರೆ, ರಾಜ್ಯದಲ್ಲಿ ಓಮಿಕ್ರಾನ್‌ ಪ್ರಕರಣಗಳು ಪತ್ತೆಯಾಗಿವೆ ಸುದ್ದಿ ಹರಡುತ್ತಿದ್ದಂತೆ ಜನ ಮತ್ತೆ ಎಚ್ಚೆತ್ತುಕೊಂಡಿದ್ದಾರೆ. ಇಷ್ಟು ದಿನ ಆರೋಗ್ಯ ಇಲಾಖೆ ಮನೆ-ಮನೆಗೆ ಬಂದರೂ ಕ್ಯಾರೆ ಎನ್ನದ ಜನ ಈಗ ತಾವೆ ಮತ್ತೆ ಆಸ್ಪತ್ರೆಗಳಿಗೆ ಹೋಗಿ ಲಸಿಕೆ ಪಡೆಯುತ್ತಿದ್ದಾರೆ. ಈ ವಾರ ಲಸಿಕೆ ಪಡೆದವರ ಸಂಖ್ಯೆ ತುಸು ಹೆಚ್ಚಾಗಿದ್ದು, ಬಹುಶ ಎರಡನೇ ಡೋಸ್‌ ಪ್ರಮಾಣ ಕೂಡ ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ.

ಕೋವಿಡ್‌ ಲಸಿಕೆ ನೀಡುವ ಆರಂಭದಲ್ಲಿ ಅಗತ್ಯದಷ್ಟು ಲಸಿಕೆ ಸಿಗದೆ ಜನ ಪರದಾಡಿದ್ದರು. ಕ್ರಮೇಣ ಲಸಿಕೆ ಪೂರೈಕೆ ಹೆಚ್ಚಾದಾಗ ಜನ ಲಸಿಕೆ ಪಡೆಯದೆ ಪಲಾಯನ ಮಾಡಿದರು. ಗ್ರಾಮೀಣ ಭಾಗದ ಜನರಿಗೆ ಲಸಿಕೆ ಹಾಕುವಷ್ಟರಲ್ಲಿ ಸರ್ಕಾರಿ ನೌಕರರು ಹೈರಾಣವಾಗಿ ಬಿಟ್ಟಿದ್ದರು. ಇನ್ನೇನು ಕೊರೊನಾ ಸಂಪೂರ್ಣ ಮರೆಯಾಗಿದ್ದು, ಲಸಿಕೆ ಯಾಕೆ ಎಂದು ಮೌನಕ್ಕೆ ಶರಣಾದವರಿಗೆ ಈಗ ಮತ್ತೆ ಭಯ ಶುರುವಾಗಿದೆ. ಅದಕ್ಕೆ ಮತ್ತೆ ಆಸ್ಪತ್ರೆಗಳತ್ತ ದೌಡಾಯಿಸುತ್ತಿದ್ದಾರೆ.

ಇದನ್ನೂ ಓದಿ:ದಾಂಡೇಲಿ : ಅರಣ್ಯ ಇಲಾಖೆಯಿಂದ ಏಕಾಏಕಿ ಬ್ರಿಟಿಷ್ ರಸ್ತೆ ಬಂದ್, ವ್ಯಾಪಕ ಆಕ್ರೋಶ

Advertisement

ಅಗತ್ಯದಷ್ಟು ಲಸಿಕೆ ಸಂಗ್ರಹ

ಆರೋಗ್ಯ ಇಲಾಖೆ ಬಳಿ ಈಗ ಅಗತ್ಯದಷ್ಟು ಲಸಿಕೆ ಸಂಗ್ರಹವಿದೆ. ಜಿಲ್ಲಾ ಕೇಂದ್ರದಲ್ಲಿ 50 ಸಾವಿರ ಡೋಸ್‌ ಕೋವಿಶೀಲ್ಡ್‌, ಕೋವ್ಯಾಕ್ಸಿನ್‌ ಸಂಗ್ರಹವಿದ್ದರೆ; ಎಲ್ಲ ತಾಲೂಕು ಕೇಂದ್ರಗಳು ಸೇರಿ 2,02,320 ಡೋಸ್‌ ಲಸಿಕೆ ಸಂಗ್ರಹವಿದೆ. ಎಲ್ಲ ಆರೋಗ್ಯ ಕೇಂದ್ರಗಳಲ್ಲೂ ಲಸಿಕೆ ನೀಡಲಾಗುತ್ತಿದೆ. ಅಲ್ಲದೇ, ಆರೋಗ್ಯ ಇಲಾಖೆ ಸಿಬ್ಬಂದಿ ಲಸಿಕೆ ವಿತರಣೆ ನಿರಂತರವಾಗಿ ಮಾಡುತ್ತಿದ್ದು, ಜಿಲ್ಲೆಯಲ್ಲಿ ಬುಧವಾರ ಮತ್ತು ಶುಕ್ರವಾರ ಲಸಿಕೆ ಮೇಳ ಕೂಡ ಮುಂದುವರಿಸಿಕೊಂಡು ಹೋಗಲಾಗುತ್ತಿದೆ. ನಿತ್ಯ 3-4 ಸಾವಿರ ಲಸಿಕೆ ಲಸಿಕೆ ವಿತರಣೆ ಆಗುತ್ತಿದ್ದರೆ, ಲಸಿಕೆ ಮೇಳದಂದು 15-20 ಸಾವಿರ ಡೋಸ್‌ ಲಸಿಕೆ ನೀಡಲಾಗುತ್ತಿದೆ. ಕಳೆದ ವಾರ 35 ಸಾವಿರ ಡೋಸ್‌ವರೆಗೂ ವಿತರಣೆಯಾಗಿದೆ.

ಮತ್ತೆ ಜನ ಜಾಗೃತಿ

ಇಷ್ಟು ದಿನ ಆರೋಗ್ಯ ಇಲಾಖೆ ಕೂಡ ಲಸಿಕೆ ವಿಚಾರ ಕೈ ಬಿಟ್ಟಿತ್ತು. ಈಚೆಗೆ ಮತ್ತೆ ಜನ ಜಾಗೃತಿ ಶುರು ಮಾಡಿದ್ದು, ಹೆಚ್ಚು ಜನ ಸೇರುವಲ್ಲಿ ಲಸಿಕೆ ಪಡೆಯುವಂತೆ ಜಾಗೃತಿ ಮೂಡಿಸುತ್ತಿದೆ. ಜಾತ್ರೆಗಳಲ್ಲಿ ಮೈಕ್‌ಗಳ ಮೂಲಕ ಕರೆ ನೀಡಲಾಗುತ್ತಿದೆ. ಇನ್ನೂ ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತೆ ಹಳ್ಳಿಗಳಲ್ಲಿ ಜಾಗೃತಿಗೆ ಮುಂದಾಗಿದ್ದಾರೆ.

ಸರ್ಕಾರ ಮೂರನೇ ಅಲೆ ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದ್ದು, ಈಗಾಗಲೇ ಎಲ್ಲ ಕಡೆ ಚೆಕ್‌ ಪೋಸ್ಟ್‌ ಸ್ಥಾಪನೆ ಮಾಡಲಾಗಿದೆ. ರೈಲು ನಿಲ್ದಾಣ, ಬಸ್‌ ನಿಲ್ದಾಣದಲ್ಲಿ ಮಾದರಿ ಸಂಗ್ರಹ ಮಾಡಲಾಗುತ್ತಿದೆ. ರೋಗ ಲಕ್ಷಣಗಳಿದ್ದರೆ ಕೂಡಲೇ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಎರಡನೇ ಡೋಸ್‌ ಲಸಿಕೆ ಹೆಚ್ಚಳಕ್ಕೆ ಒತ್ತು ನೀಡಲಾಗಿದೆ. ಡಾ| ರಾಮಕೃಷ್ಣ, ಜಿಲ್ಲಾ ಆರೋಗ್ಯಾಧಿಕಾರಿ

-ಸಿದ್ಧಯ್ಯಸ್ವಾಮಿ ಕುಕನೂರು

Advertisement

Udayavani is now on Telegram. Click here to join our channel and stay updated with the latest news.

Next