ಬೀದರ: ಸ್ವಾಯತ್ತ ಸಂಸ್ಥೆಗಳ ಆಸ್ಪತ್ರೆಗಳಲ್ಲಿ ಇರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ಶುಶ್ರೂಷಾಧಿಕಾರಿ ವೃಂದದ ಪದೋನ್ನತಿ ಹುದ್ದೆಗಳನ್ನು ಯಥಾವತ್ತಾಗಿ ಮುಂದುವರಿಸಬೇಕು ಎಂದು ರಾಜ್ಯ ಸರ್ಕಾರಿ ಶುಶ್ರೂಷಾ ಧಿಕಾರಿಗಳ ಸಂಘ ಆಗ್ರಹಿಸಿದೆ.
ಸಂಘದ ರಾಜ್ಯ ಅಧ್ಯಕ್ಷ ರಾಜಕುಮಾರ ಮಾಳಗೆ ನೇತೃತ್ವದ ರಾಜ್ಯದ ಎಲ್ಲ ಜಿಲ್ಲೆಗಳ ಶುಶ್ರೂಷಾ ಧಿಕಾರಿಗಳ ನಿಯೋಗವು ಬೆಂಗಳೂರಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ| ಕೆ. ಸುಧಾಕರ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಶುಶ್ರೂಷಾಧಿಕಾರಿಗಳು ದಿನದ 24ಗಂಟೆ ಸಾರ್ವಜನಿಕರ ಆರೋಗ್ಯ ಕಾಪಾಡಲು ಶ್ರಮಿಸುತ್ತಾರೆ. ಆದರೆ, ಶುಶ್ರೂಷಾಧಿಕಾರಿ ವೃಂದದವರು 25-30 ವರ್ಷಗಳ ಸೇವೆಯ ನಂತರವೂ ಒಂದೇ ಒಂದು ಪದೋನ್ನತಿ ಪಡೆಯದೆ ನಿವೃತ್ತಿ ಹೊಂದುತ್ತಿರುವುದು ನೋವಿನ ಸಂಗತಿಯಾಗಿದೆ ಎಂದು ಸಂಘದ ಪದಾಧಿಕಾರಿಗಳು ಸಚಿವರ ಗಮನ ಸೆಳೆದರು.
ಶುಶ್ರೂಷಾಧಿಕಾರಿ ವೃಂದದ ಬಹುತೇಕ ಪದೋನ್ನತಿ ಹುದ್ದೆಗಳು ಸ್ವಾಯತ್ತ ಸಂಸ್ಥೆಗಳ ಆಸ್ಪತ್ರೆಗಳಲ್ಲಿ ಇವೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕಡಿಮೆ ಹುದ್ದೆಗಳನ್ನು ಸೃಷ್ಟಿಸಲಾಗಿದೆ. ಕಾರಣ, ಸ್ವಾಯತ್ತ ಸಂಸ್ಥೆಗಳ ಆಸ್ಪತ್ರೆಗಳಲ್ಲಿನ ಆರೋಗ್ಯ ಇಲಾಖೆ ವ್ಯಾಪ್ತಿಗೆ ಒಳಪಟ್ಟ ಶುಶ್ರೂಷಾಧಿಕಾರಿ ವೃಂದದ ಪದೋನ್ನತಿ ಹುದ್ದೆಗಳನ್ನು ಯಥವತ್ತಾಗಿ ಮುಂದುವರಿಸಬೇಕು. ಆರೋಗ್ಯ ಇಲಾಖೆ ಆಸ್ಪತ್ರೆಗಳಲ್ಲಿ ಹಾಸಿಗೆ ಸಾಮರ್ಥ್ಯಕ್ಕೆ ಅನುಗುಣವಾಗಿ ಹುದ್ದೆಗಳನ್ನು ಸೃಷ್ಟಿಸಬೇಕು ಎಂದು ಹೇಳಿದರು.
ಸ್ವಾಯತ್ತ ಸಂಸ್ಥೆಗಳಲ್ಲಿನ ಖಾಲಿ ಇರುವ ಆರೋಗ್ಯ ಮತ್ತು ಕುಟುಂಬ ಇಲಾಖೆಯ ಹುದ್ದೆಗಳನ್ನು ಆರೋಗ್ಯ ಇಲಾಖೆಗೇ ಮೀಸಲಿಡಬೇಕು. ಕಲ್ಯಾಣ ಕರ್ನಾಟಕದಲ್ಲಿ ಖಾಲಿ ಇರುವ ಎಲ್ಲ ಹಿರಿಯ ಶುಶ್ರೂಷಾ ಅಧಿಕಾರಿಗಳ ಹುದ್ದೆಗಳನ್ನು ಪದೋನ್ನತಿ ಮೂಲಕ ಭರ್ತಿ ಮಾಡಬೇಕು ಎಂದು ಬೇಡಿಕೆ ಮಂಡಿಸಿದರು.
ಸಚಿವರು ತಮ್ಮ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸ್ವಾಯತ್ತ ಸಂಸ್ಥೆಗಳ ಆಸ್ಪತ್ರೆಗಳು ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹುದ್ದೆಗಳಿಗೆ ಸಂಬಂಧಿಸಿದಂತೆ ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳ ಸಭೆ ಶೀಘ್ರ ನಡೆಸಿ ಸಮಸ್ಯೆ ಪರಿಹರಿಸಲಾಗುವುದು. ಕಲ್ಯಾಣ ಕರ್ನಾಟಕದ ಪದೋನ್ನತಿ ಹುದ್ದೆಗಳನ್ನು ತುಂಬಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ರಾಜಕುಮಾರ ಮಾಳಗೆ ತಿಳಿಸಿದರು.
ಕೇಂದ್ರ ಸಂಘದ ಕೋಶಾಧ್ಯಕ್ಷೆ ಲಕ್ಷ್ಮೀ, ಕಾನೂನು ಸಲಹೆಗಾರ ಶ್ರೀಕಾಂತ ಫುಲಾರಿ, ಕಲಬುರಗಿ ಜಿಲ್ಲಾಧ್ಯಕ್ಷ ಮಡಿವಾಳಪ್ಪ ನಾಗರಹಳ್ಳಿ, ಹುಬ್ಬಳ್ಳಿ ಜಿಲ್ಲಾಧ್ಯಕ್ಷೆ ಸುನಿತಾ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳ ಶೂಶ್ರೂಷಾಧಿಕಾರಿಗಳು ನಿಯೋಗದಲ್ಲಿ ಇದ್ದರು.