ಕುಷ್ಟಗಿ: ರುದ್ರಭೂಮಿಯನ್ನು ವಾಣಿಜ್ಯೀಕರಣಕ್ಕೆ ಬಳಸದೇ ಗ್ರಾಮಕ್ಕೆ ಬಿಟ್ಟುಕೊಡಬೇಕೆಂದು ಆಗ್ರಹಿಸಿ ನಿಡಶೇಸಿ ಗ್ರಾಮಸ್ಥರು ಕುಷ್ಟಗಿ ತಹಶೀಲ್ದಾರ ಕಛೇರಿವರೆಗೆ ಬಾಯಿ ಬಡಿದುಕೊಳ್ಳುತ್ತಾ ಶುಕ್ರವಾರ ಬೆಳಗ್ಗೆ ಪಾದಯಾತ್ರೆ ನಡೆಸಿದರು.
ಕುಷ್ಟಗಿ ತಾಲೂಕಿನ ನಿಡಶೇಸಿ ಗ್ರಾಮಸ್ಥರ, ಇತಿಹಾಸವಿರುವ ರುದ್ರಭೂಮಿ ತಾಲೂಕಾಡಳಿತ ಹಸ್ತಕ್ಷೇಪದ ಹಿನ್ನೆಲೆಯಲ್ಲಿ ಖಾಸಗಿಯವರಿಗೆ ವ್ಯವಸ್ಥಿತವಾಗಿ ಪರಭಾರೆಯಾಗಿದೆ. ಗ್ರಾಮದ ಸರ್ವ ಜನಾಂಗದ ರುದ್ರಭೂಮಿ ನಮ್ಮ ಪೂರ್ವಜರ ಶವ ಸಂಸ್ಕಾರದ ಭೂಮಿಯನ್ನು ವಾಣಿಜ್ಯೀಕರಣಕ್ಕೆ ಬಳಸದೇ ಗ್ರಾಮಕ್ಕೆ ಬಿಟ್ಟುಕೊಡಬೇಕೆಂದು ಆಗ್ರಹಿಸಲಾಯಿತು.
ಗ್ರಾಮದ ಹೊರವಲಯದ ರುದ್ರಭೂಮಿಯಿಂದ ಆರಂಭಗೊಂಡ ಪಾದಯಾತ್ರೆ ತಾಲೂಕಾಡಳಿತದ ವಿರುದ್ದ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ತಹಶಿಲ್ದಾರ ಕಛೇರಿ ಆವರಣದಲ್ಲಿ ಅಣಕು ಶವದೊಂದಿಗೆ ಪ್ರತಿಭಟಿಸಿದರು.
ನಿಡಶೇಸಿ ಗ್ರಾಮದ ಹೊರವಲಯದಲ್ಲಿರುವ ಮೂಲ ರುದ್ರಭೂಮಿ ಒಟ್ಟು 2 ಎಕರೆ 17 ಗುಂಟೆ ಜಮೀನು ಕಳೆದ 200 ವರ್ಷಗಳಿಂದ ಗ್ರಾಮದ ರುದ್ರಭೂಮಿಯಾಗಿದೆ. ಗ್ರಾಮಸ್ಥರ ಭಾವನಾತ್ಮಕ ಸಂಬಂಧದ ಈ ಭೂಮಿಯನ್ನು ಸ್ಥಳೀಯರಲ್ಲದವರು ಮೂಲ ಜಮೀನ್ದಾರರಿಂದ ಪ್ರಭಾವಿ ಡಿವೈಎಸ್ಪಿ ಹುದ್ದೆಯಲ್ಲಿರುವ ವ್ಯಕ್ತಿ ಖರೀದಿಸಿ ಅದೆ ಜಾಗೆಯಲ್ಲಿ ನಿವೇಶನ ವಿನ್ಯಾಸಕ್ಕೆ ಮುಂದಾಗಿದ್ದಾರೆ. ಸದರಿ ಜಮೀನು ಉಳಿಸುವ ಸಲುವಾಗಿ ಸಚಿವ ಹಾಲಪ್ಪ ಆಚಾರ, ಕಂದಾಯ ಸಚಿವ ಆರ್. ಅಶೋಕ ಅವರಿಗೆ ಮನವಿ ಸಲ್ಲಿಲಾಗಿದೆ. ಕೊಪ್ಪಳ ಜಿಲ್ಲಾಧಿಕಾರಿ ವಿಕಾಸ ಕಿಶೋರ್ ಸುರಾಳ್ಕರ್ ಅವರು, ಸದರಿ ಪ್ರಕರಣದ ವಿಚಾರಣೆಗೆ ಎರಡು ಬಾರಿ ಸಭೆ ನಿಗದಿಯಾಗಿದ್ದರೂ, ಯಾವುದೇ ಸ್ಪಷ್ಟ ನಿರ್ಣಯ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ. ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಡೆ ಅನುಮಾನ ಹುಟ್ಟಿಸಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹೋರಾಟ ತೀವ್ರ ಸ್ವರೂಪಕ್ಕೆ ಕೊಂಡೊಯ್ಯಲು ಪಾದಯಾತ್ರೆಗೆ ಮುಂದಾಗಿದ್ದಾರೆ.
ಇದನ್ನೂ ಓದಿ:ನಾಳೆ ಉತ್ತರ ವಿವಿ ಪ್ರಥಮ ಘಟಿಕೋತ್ಸವ
ಗ್ರಾಮದ ಏಕೈಕ ರುದ್ರಭೂಮಿ ಆಗಿದ್ದು, ಈಗ ಯಾರಾದರೂ ಸತ್ತರೆ ಹೆಣ ಹೂಳಲು ಜಾಗ ಇಲ್ಲ. ಮುಂದಿನ ದಿನಗಳಲ್ಲಿ ಗ್ರಾಮದಲ್ಲಿ ಯಾರಾದರೂ ಸತ್ತರೆ ತಹಶೀಲ್ದಾರ ಕಛೇರಿ ಆವರಣದಲ್ಲಿ ಶವ ಸಂಸ್ಕಾರ ಮಾಡಲಿದ್ದೇವೆ. ಈ ಹೋರಾಟದಲ್ಲಿಪ್ರಾಣ ತ್ಯಾಗಕ್ಕೆ ಸಿದ್ದರಿದ್ದೇವೆ ಎಂದು ಗ್ರಾಮದ ರಾಮಣ್ಣ ಬಂಡಿಹಾಳ ಎಚ್ಚರಿಸಿದರು. ಈ ಹೋರಾಟಕ್ಕೆ ಸ್ಪಂದಿಸದೇ ಇದ್ದಲ್ಲಿ ಅನಿರ್ದಿಷ್ಟಾವಧಿ ಹಾಗೂ ಅಮರಣಾಂತ ಸತ್ಯಾಗ್ರಹ ಅನಿವಾರ್ಯವಾಗಲಿದೆ. ಎಂದು ಎಚ್ಚರಿಸಿದರು.