Advertisement

ಡಿಮ್ಯಾಂಡಪ್ಪೋ ಡಿಮ್ಯಾಂಡ್‌

09:06 AM Jul 11, 2019 | Team Udayavani |

ಉಡುಪಿ ಸುತ್ತಮುತ್ತ ಓಡಾಡಿದರೆ ಕಣ್ಣಿಗೆ ರಾಚುವುದು ಬರೀ ಖಾಸಗಿ ಶಿಕ್ಷಣ ಸಂಸ್ಥೆಗಳ ಭರಾಟೆ. ಇದರ ಮಧ್ಯೆ ಇರುವ ಒಳಕಾಡು ಸರ್ಕಾರಿ ಪ್ರೌಢಶಾಲೆ, ಬ್ರಹ್ಮಾವರ ಸರ್ಕಾರಿ ಪದವಿ ಪೂರ್ವ ಕಾಲೇಜು ಎಂದರೆ ಎಲ್ಲರಿಗೂ ಒಂದು ರೀತಿ ಗೌರವ. ಒಂದು ಕಾಲದಲ್ಲಿ ಸೀಟು ಬೇಕು ಅಂತ ಬರುವ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆ ಮಾಡಿದ ಏಕೈಕ ಶಾಲೆ ಈ ಒಳಕಾಡು. ಆ ರೀತಿಯ ಡಿಮ್ಯಾಂಡ್‌ ಇರುವ ಪ್ರೌಢಶಾಲೆ.


Advertisement

ಇಲ್ಲಿ ಓದಿದವರು ದೇಶ, ವಿದೇಶಗಳಲ್ಲಿ ದೊಡ್ಡ ಹುದ್ದೆಯಲ್ಲಿದ್ದಾರೆ. ಇದರ ಜೊತೆಗೆ ನೂರಕ್ಕೆ ನೂರು ಫ‌ಲತಾಂಶ ತರುವ ಇನ್ನೊಂದು ಶಾಲೆ ಬ್ರಹ್ಮಾವರ ಸರ್ಕಾರಿ ಪದವಿ ಪೂರ್ವ ಕಾಲೇಜು. ಇಲ್ಲಿ 900 ವಿದ್ಯಾರ್ಥಿಗಳು ಹಾಗೂ ಉಡುಪಿ ಒಳಕಾಡು ಶಾಲೆಯಲ್ಲಿ ಒಟ್ಟು 1,300 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. 8ರಿಂದ 10ನೇ ತರಗತಿಯವರೆಗೆ ಕನ್ನಡ ಮತ್ತು ಇಂಗ್ಲಿಷ್‌ ಮಾಧ್ಯಮ ಸೇರಿ 4ರಿಂದ 5 ವಿಭಾಗಗಳಿವೆ.

ದಾಖಲಾತಿಗೆ ಬೇಕಿಲ್ಲ ಅಂಕ
ವಿಶೇಷ ಅಂದರೆ, ಖಾಸಗಿ ಶಾಲೆಗಳಂತೆ ಮಕ್ಕಳನ್ನು ಇಲ್ಲಿ ಅಂಕಗಳಿಂದ ತೂಕ ಮಾಡುವುದಿಲ್ಲ. ಮಕ್ಕಳಿಗೆ ಶಾಲೆಯಲ್ಲಿ ಸೀಟ್‌ ಸಿಗಬೇಕಂದರೆ, ತಂದೆ ತಾಯಿ ಪರೀಕ್ಷೆ ಪಾಸ್‌ ಆಗಬೇಕು. ಇಂತಹ ಕಾಲಘಟದಲ್ಲಿ ಈ ಸರಕಾರಿ ಶಾಲೆಗೆ ಸೇರ್ಪಡೆಯಾಗಲು ನಿರ್ದಿಷ್ಟ ಇಷ್ಟೇ ಅಂಕ ಪಡೆಯಬೇಕಾಗಿಲ್ಲ. ಹಾಗಂತ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫ‌ಲಿತಾಂಶದಲ್ಲಿ ರಾಜಿ ಮಾಡಿಕೊಂಡಿಲ್ಲ. ಪ್ರತಿವರ್ಷ ಶೇ. 92 ಕ್ಕಿಂತ ಹೆಚ್ಚಿನ ಫ‌ಲಿತಾಂಶ ಪಡೆದುಕೊಂಡ ಹೆಗ್ಗಳಿಕೆ ಇವಕ್ಕೆ ಇದೆ.

ಎರಡೂ ಶಾಲೆಗಳಿಗೆ ಹಲವು ದಶಕಗಳ ಇತಿಹಾಸವಿದೆ. ಅಂದಿನಿಂದ ಇಂದಿನ ವರೆಗೆ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಾ ಬಂದಿವೆ. ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳನ್ನು ಹುಡುಕಿ ವಿಶೇಷ ತರಗತಿ ತೆಗೆದುಕೊಳ್ಳುತ್ತಾರೆ. ಕೌಶಲ ಅಭಿವೃದ್ಧಿಗಾಗಿ ಮಕ್ಕಳಿಗೆ ನ್ಪೋಕನ್‌ ಇಂಗ್ಲೀಷ್‌ ತರಗತಿಗಳು ನಡೆಯುತ್ತವೆ. ಈ ಶಾಲೆಗಳಲ್ಲಿರುವ ಕಂಪ್ಯೂಟರ್‌ ಕೊಠಡಿಗೆ ಕಾಲಿಟ್ಟರೆ ಯಾವ ಖಾಸಗಿ ಶಾಲೆಗೂ ಕಮ್ಮಿ ಇಲ್ಲ ಅನ್ನೋದು ತಿಳಿಯುತ್ತದೆ. ತಂತ್ರಜ್ಞಾನ ಹಾಗೂ ವಿಜ್ಞಾನಕ್ಕೆ ಒತ್ತು ನೀಡುವ ಸುಸಜ್ಜಿತ ಅಟಲ್‌ ಟಿಂಕರಿಂಗ್‌ ಕೇಂದ್ರ, ಸ್ಮಾರ್ಟ್‌ ಕ್ಲಾಸ್‌, ಶೈಕ್ಷಣಿಕ ಸಿ.ಡಿ.ಗಳ ವೀಕ್ಷಣೆಗೆ ಮಲ್ಟಿಮೀಡಿಯಾ ಕೊಠಡಿ, ಪ್ರಯೋಗಾಲಯ,ಸಾವಿರಾರು ಪುಸ್ತಕಗಳಿರುವ ಗ್ರಂಥಾಲಯ -ಹೀಗೆ, ಎಲ್ಲವೂ ಇದೆ.

ಸರಕಾರಿ ಶಾಲೆ ಯಾವುದೇ ಖಾಸಗಿ ಶಾಲೆಗೂ ಕಮ್ಮಿ ಇರಬಾರದು ಎನ್ನುವ ನಿಟ್ಟಿನಲ್ಲಿ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನೂ ಕಲ್ಪಿಸಲಾಗುತ್ತಿದೆ. ನುರಿತ ಶಿಕ್ಷಕರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಬೇಕಾದ ಕಾರ್ಯಕ್ರಮ ಏರ್ಪಡಿಸಲಾಗುತ್ತಿದೆ ಎನ್ನುತ್ತಾರೆ ಬ್ರಹ್ಮಾವರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮುಖ್ಯ ಶಿಕ್ಷಕ ಬಿ.ಟಿ. ನಾಯಕ್‌.

Advertisement

ಒಳನಾಡು ಪ್ರೌಢಶಾಲೆಯ ಶಿಕ್ಷಕರು ಗುಣಮಟ್ಟ ಶಿಕ್ಷಣದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಹೀಗಾಗಿ, ಇಲ್ಲಿನ ಪಠ್ಯ ಎಷ್ಟು ಹೆಸರುವಾಸಿಯಾಗಿದೆ ಅಂದರೆ, ಹಳೇ ವಿದ್ಯಾರ್ಥಿಗಳ ನೋಟ್ಸ್‌ಗಾಗಿ ಹೊಸ ವಿದ್ಯಾರ್ಥಿಗಳು ಕಾದಿರುತ್ತಾರೆ. ಹೀಗಾಗಿಯೇ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ. ಇದೇ ಶಾಲೆಯಲ್ಲಿ ಓದಿದ ವಿದ್ಯಾರ್ಥಿ ಈಗ ಇನ್ಫೋಸೀಸ್‌ ಉದ್ಯೋಗಿ. ಅವರು ಎರಡೂವರೆ ಕೋಟಿ ವೆಚ್ಚದಲ್ಲಿ ಕಟ್ಟಡ ಕಟ್ಟಿಸಿಕೊಟ್ಟಿರುವುದು ಗುಣಮಟ್ಟ ಶಿಕ್ಷಣಕ್ಕೆ ಮತ್ತಷ್ಟು ನೆರವಾಗಿದೆಯಂತೆ.

ಈ ಎರಡು ಶಾಲೆಗಳೂ ನಗರದ ಹೃದಯ ಭಾಗದಲ್ಲಿದೆ. ನಿತ್ಯ 20 ಕಿ.ಮೀ ವ್ಯಾಪ್ತಿಯ ಗ್ರಾಮೀಣ ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಇತರೆ ಜಿಲ್ಲೆಗಳ ವಿದ್ಯಾರ್ಥಿಗಳು ಜನಪ್ರತಿನಿಧಿಗಳ ಶಿಫಾರಸ್ಸು ಪಡೆದು ಈ ಶಾಲೆಗಳಲ್ಲಿ ದಾಖಲಾತಿ ಪಡೆಯುವುದು ಉಂಟೂ. ಅಲ್ಲದೇ ಹಿರಿಯಡಕ, ಕುಂದಾಪುರ, ಬೈಂದೂರಿನ ಕೆಲ ಸರ್ಕಾರಿ ಶಾಲೆಗಳಲ್ಲೂ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ.

ನಾನು ಕಲಿತಿದ್ದು ಕನ್ನಡ ಮಾಧ್ಯಮ ಆದರೂ ಇಂದು ನಾನು ಬೆಂಗಳೂರಿನಲ್ಲಿರುವ ಎಂಎನ್‌ಸಿಯೊಂದರಲ್ಲಿ ನೌಕರಿಯಲ್ಲಿದ್ದೇನೆ. ಇದಕ್ಕೆ ಕಾರಣ ಬ್ರಹ್ಮಾವರ ಕಾಲೇಜಿನಲ್ಲಿ ಶಿಕ್ಷಣದ ಜೊತೆಗೆ ಬದುಕುವ ಕಲೆಯನ್ನು ಹೇಳಿಕೊಟ್ಟಿದ್ದು.
-ಚಿತ್ರಕಲಾ, ಓರ್ಯಾಕಲ್‌ ಉದ್ಯೋಗಿ

ತೃಪ್ತಿ ಕುಮ್ರಗೋಡು
ಚಿತ್ರಗಳು- ಆಸ್ಟ್ರೋಮೋಹನ್‌

Advertisement

Udayavani is now on Telegram. Click here to join our channel and stay updated with the latest news.

Next