ಉಡುಪಿ: ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ವಿಭಾಗ, ತೀವ್ರ ನಿಗಾ ಘಟಕ, ಮಹಿಳೆಯರ ವಾರ್ಡ್, ಪುರುಷರ ವಾರ್ಡ್, ಶಸ್ತ್ರಚಿಕಿತ್ಸಾ ಕೊಠಡಿ, ರಕ್ತನಿಧಿ, ಕ್ಷಯ ವಾರ್ಡ್, ಮಾನಸಿಕ ವಾರ್ಡ್ ಹಾಗೂ ಸರ್ಜಿಕಲ್ ವಾರ್ಡ್‌ಗಳಿವೆ. ಎಲ್ಲಾ ವಾರ್ಡ್‌ನ ಸೇವೆಗೆ ಕನಿಷ್ಠ ಒಂದು ಪಾಳಿಯಲ್ಲಿ (ಶಿಫ್ಟ್) ಕೆಲಸ ಮಾಡಲು ಕನಿಷ್ಠ 15 ಜನ ಆವಶ್ಯಕತೆಯಿದೆ. ಆದರೆ ಶುಶ್ರೂಷಕಿಯರ ಕೊರೆತೆಯಿಂದ ರೋಗಿಗಳಿಗೆ ತೊಂದರೆಯಾಗುತ್ತಿದೆ.
ಆಸ್ಪತ್ರೆಯಲ್ಲಿ ಒಟ್ಟು 25 ಜನ ಶುಶ್ರೂಷಕಿಯರುಕಾರ್ಯನಿರ್ವಹಿಸುತ್ತಿದ್ದಾರೆ. ಮೂರು ಶಿಫ್ಟ್ ಕೆಲಸದಲ್ಲಿ ಒಂದು ಶಿಫ್ಟ್ಗೆ 8 ಮಂದಿಯಿದ್ದರೆ ಒಂದೆರಡು ಜನ ಯಾವುದೋ ಕಾರಣದಲ್ಲಿ ರಜೆಯಲ್ಲಿರುತ್ತಾರೆ. ಹೀಗಾಗಿ 6 ಜನ ಶುಶ್ರೂಷಕಿಯರು ಮಾತ್ರ ರೋಗಿಗಳಿಗೆ ಸೇವೆ ಕೊಡಲು ಸಾಧ್ಯವೇ? ಇಂಜೆಕ್ಷನ್ ಕೊಠಡಿಯೂ ರದ್ದು ಮಾಡಿ ತುರ್ತು ಚಿಕಿತ್ಸಾ ವಿಭಾಗದಲ್ಲಿ ಇಂಜೆಕ್ಷನ್ ಕೊಡಲಾಗುತ್ತದೆ.
ದಿನಕ್ಕೆ 500-600 ಹೊರರೋಗಿಗಳು ಬರುತ್ತಾರೆ. ಸರಾಸರಿ 150 ಒಳರೋಗಿಗಳು ಇರುತ್ತಾರೆ. ಕೇವಲ ಇಂಜೆಕ್ಷನ್, ಔಷಧಿ ಕೊಡುವಲ್ಲಿ ಶುಶ್ರೂಷಕಿಯರ ಕರ್ತವ್ಯದ ಸಮಯ ಮುಗಿಯುತ್ತದೆ. ತೀವ್ರ ಒತ್ತಡದಲ್ಲಿ ದಾದಿಯರಿಗೆ ಕೆಲಸ ನಿರ್ವಹಿಸಲು ಸಾಧ್ಯವಾಗುವುದಿಲ್ಲ. ತೀವ್ರ ನಿಗಾ ಘಟಕದಲ್ಲಿ ರೋಗಿಯ ಬಳಿ ಸಂಬಂಧಿಕರಿರಲು ಅವಕಾಶವಿಲ್ಲ. ಎರಡು ತೀವ್ರ ನಿಗಾ ಘಟಕದಲ್ಲಿ 15 ಜನ ರೋಗಿಗಳು ಇರುವಾಗ 10 ಜನ ಶುಶ್ರೂಷಕಿಯರು ಕನಿಷ್ಠ ಆವಶ್ಯಕತೆಯಿರುತ್ತದೆ. ಎರಡು ಜನ ಶುಶ್ರೂಷಕಿಯರಿಂದ ಸಾಧ್ಯವಿಲ್ಲ. ಕ್ಲಪ್ತ ಸಮಯದಲ್ಲಿ ಸೇವೆ ಸಿಗದ ಹಿನ್ನೆಲೆಯಲ್ಲಿ ಈಗಾಗಲೇ ಹಲವು ಬಾರಿ ಸಾರ್ವಜನಿಕರು ಗಲಾಟೆ ನಡೆಸಿದ್ದಾರೆ.
ಇಂತಹ ಕೊರತೆಯಿಂದಾಗಿ ತುರ್ತು ಪರಿಸ್ಥಿತಿಯಲ್ಲಿರುವ ರೋಗಿಯ ಪ್ರಾಣಕ್ಕೂ ಅಪಾಯವಿದೆ. ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಡಿ ಬಹಳಷ್ಟು ಸೌಕರ್ಯಗಳಿದ್ದರೂ ಅಧಿಕಾರಿಗಳ ಅಥವಾ ಸಂಬಂಧಪಟ್ಟವರ ಬೇಜವಾಬ್ದಾರಿಯಿಂದ ಜನಸಾಮಾನ್ಯರಿಗೆ ಲಭಿಸಬೇಕಾದ ಸೇವೆ ವಂಚಿತವಾಗುತ್ತಿದೆ. ಹೀಗಾಗಿ ಕೂಡಲೇ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.