Advertisement

ಪೊಲೀಸ್‌ ನೇಮಕಾತಿ ವಯೋಮಿತಿ ಹೆಚ್ಚಿಸಲು ಆಗ್ರಹ

05:28 PM Sep 03, 2022 | Team Udayavani |

ರಾಯಚೂರು: ಪೊಲೀಸ್‌ ನೇಮಕಾತಿಯಲ್ಲಿ ವಯೋಮಿತಿ ಹೆಚ್ಚಿಸಬೇಕು, ಖಾಲಿ ಇರುವ ಎಲ್ಲ ಹುದ್ದೆಗಳನ್ನು ಭರ್ತಿ ಮಾಡುವಂತೆ ಆಗ್ರಹಿಸಿ ಅಖೀಲ ಭಾರತ ನಿರುದ್ಯೋಗ ಯುವಜನರ ಹೋರಾಟ ಸಮಿತಿ ಸದಸ್ಯರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಈ ಕುರಿತು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

Advertisement

ಒಂದೆಡೆ ಪದವೀಧರರು ಡಿಗ್ರಿಗಳನ್ನು ಪಡೆದು ಸಣ್ಣ ಪುಟ್ಟ ಕೆಲಸ ಮಾಡುವ ಪರಿಸ್ಥಿತಿ ಇದೆ. ಅಲ್ಲದೇ, ಕೋವಿಡ್‌ -19 ಪರಿಸ್ಥಿತಿಯಲ್ಲಿ, ಉದ್ಯೋಗ ಕಳೆದುಕೊಂಡು ಯುವಕರು ಕಂಗಾಲಾಗಿದ್ದಾರೆ. ಆದರೆ, ಸರ್ಕಾರಿ ಇಲಾಖೆಗಳಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಇದ್ದರೂ ಸರ್ಕಾರ ಅವುಗಳ ಭರ್ತಿಗೆ ಮುಂದಾಗುತ್ತಿಲ್ಲ ಎಂದರು.

ರಾಜ್ಯ ಸರ್ಕಾರ ಪೊಲೀಸ್‌ ನೇಮಕಾತಿಗೆ ನಿಗದಿಪಡಿಸಿರುವ ವಯೋಮಿತಿ ಕಡಿಮೆ ಇದೆ. ಅದರಲ್ಲೂ ನೆರೆ ರಾಜ್ಯಗಳಾದ ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಪೊಲೀಸ್‌ ನೇಮಕಾತಿಯ ಗರಿಷ್ಠ ವಯೋಮಿತಿ 30-35 ವರ್ಷಗಳಿದ್ದರೆ, ನಮ್ಮ ರಾಜ್ಯದಲ್ಲಿ 25-27 ವರ್ಷಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ. ಇದರಿಂದ ರಾಜ್ಯದ ಯುವಕರಿಗೆ ಅನ್ಯಾಯವಾಗುತ್ತಿದೆ ಎಂದರು.

ಕೋವಿಡ್‌ ಕಾರಣದಿಂದ ಪಿಎಸ್‌ಐ ನೇಮಕಾತಿಗೆ ಗರಿಷ್ಠ ವಯೋಮಿತಿ ಹೆಚ್ಚಿಸಿದಂತೆ ಪೊಲೀಸ್‌ ನೇಮಕಾತಿಯಲ್ಲೂ ಕನಿಷ್ಠ 3-4 ವರ್ಷ ವಯೋಮಿತಿ ಹೆಚ್ಚಿಸಬೇಕು. ಖಾಲಿ ಇರುವ ಎಲ್ಲ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು ಎಂದು ಒತ್ತಾಯಿಸಿದರು.

ಹೋರಾಟ ಸಮಿತಿಯ ರಾಜ್ಯ ಕಾರ್ಯದರ್ಶಿ ಚನ್ನಬಸವ ಜಾನೇಕಲ್‌, ವಿನೋದ್‌ ಕುಮಾರ್‌, ಪೊಲೀಸ್‌ ಹುದ್ದೆಯ ಆಕಾಂಕ್ಷಿಗಳಾದ ನಾಗೇಶ್‌, ರಮೇಶ್‌, ಸಬjಲಿ, ಮಾರುತಿ, ಮಂಜುನಾಥ್‌, ಮಲ್ಲೇಶ್‌, ಮೌಲಾಸಾಬ್‌, ಕಲ್ಯಾಣ್‌ ಕುಮಾರ್‌ ಸೇರಿ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next