ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗಕ್ಕೆ ಪ್ರತ್ಯೇಕವಾದ ಕರ್ನಾಟಕ ಶುಶ್ರೂಷ ಪರಿಷತ್ತಿನ ವಿಭಾಗ ಕೇಂದ್ರ, ಶುಶ್ರೂಷ ಪರೀಕ್ಷಾ ಮಂಡಳಿ ವಿಭಾಗೀಯ ಕಚೇರಿ ಮತ್ತು ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಭಾಗೀಯ ಕಚೇರಿ ಸ್ಥಾಪಿಸಬೇಕೆಂದು ಒತ್ತಾಯಿಸಿ ಒಂದು ಲಕ್ಷ ಸಹಿ ಸಂಗ್ರಹಿಸಲು ಅಭಿಯಾನ ನಡೆಸಲಾಗುವುದು ಎಂದು ಹೈದ್ರಾಬಾದ್-ಕರ್ನಾಟಕ ಶುಶ್ರೂಷ ಮ್ಯಾನೇಜ್‌ಮೆಂಟ್ ಅಸೋಶಿಯೇಷನ್ ಅಧ್ಯಕ್ಷ ಲಿಂಗಣ್ಣ ಗೌಡ ಮತ್ತು ನರ್ಸಿಂಗ್ ಕೌನ್ಸಿಲ್‌ನ ರಾಜ್ಯ ಸಮಿತಿ ಸದಸ್ಯೆ ದಿವ್ಯಾ ಹಾಗರಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕದ ವಿಭಾಗದಲ್ಲಿ 300ಕ್ಕಿಂತಲೂ ಹೆಚ್ಚು ನರ್ಸಿಂಗ್ ತರಬೇತಿ ಕಾಲೇಜುಗಳಿವೆ. ಅದರಲ್ಲಿ ಸುಮಾರು 100 ಕಾಲೇಜುಗಳು ಕಲಬುರ್ಗಿ ಜಿಲ್ಲೆಯಲ್ಲೇ ಇವೆ. ಪ್ರತಿವರ್ಷ ಅಂದಾಜು 12,000 ತರಬೇತಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಹಾಗೂ ಕರ್ತವ್ಯ ನಿರತ ಶಾಲಾ-ಕಾಲೇಜುಗಳ ಸಿಬ್ಬಂದಿ ಹಾಗೂ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಾವಿರಾರು ಶುಕ್ರೂಷಕರು ನೋಂದಣಿ ಮಾಡಿಸಲು ಹಾಗೂ ಪ್ರತಿ ಮೂರು ವರ್ಷಗಳಿಗೊಮ್ಮೆ ನವೀಕರಣ ನೋಂದಣಿಗಾಗಿ ಬೆಂಗಳೂರಿಗೆ ಅಲೆಯುವುದು ಅತ್ಯಂತ ದುಬಾರಿದಾಯಕವಾಗಿದೆ ಎಂದರು.
ಕಲಬುರಗಿಯಲ್ಲಿ ಕರ್ನಾಟಕ ಶುಶ್ರೂಷ ಪರಿಷತ್ತು ವಿಭಾಗೀಯ ಕಚೇರಿ ಆರಂಭಿಸಬೇಕೆಂಬುದು ಈ ಭಾಗದ ಆರೋಗ್ಯ ಇಲಾಖೆ ಸಿಬ್ಬಂದಿಯ ಬಹುದಿನಗಳ ಬೇಡಿಕೆಯಾಗಿದೆ. ನರ್ಸಿಂಗ್ ಪರೀಕ್ಷೆಗೆ ಸಂಬಂಧಪಟ್ಟ ಕೆಲಸ-ಕಾರ್ಯಗಳಿಗೆ ಅಭ್ಯರ್ಥಿಗಳೇ ಖುದ್ದು ಬೆಂಗಳೂರಿಗೆ ತೆರಳಬೇಕಾಗುತ್ತಿದೆ. ಸಾವಿರಾರು ವಿದ್ಯಾರ್ಥಿಗಳು ಮತ್ತು ಬೋಧಕರು, ಕಚೇರಿ ಸಿಬ್ಬಂದಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶುಶ್ರೂಷ ಪರೀಕ್ಷಾ ಮಂಡಳಿ ಹಾಗೂ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ವಿಭಾಗೀಯ ಕೇಂದ್ರಗಳನ್ನು ಆರಂಭಿಸಬೇಕೆಂದು ಒತ್ತಾಯಿಸಿದರು.
ಈಗಾಗಲೇ ಈ ಭಾಗಕ್ಕೆ ಕರ್ನಾಟಕ ಶುಶ್ರೂಷ ಪರಿಷತ್ತಿನ ವಿಭಾಗೀಯ ಕಚೇರಿ ಘೋಷಣೆಯಾಗಿದೆ. ಈ ಹಿಂದೆ ವೈದ್ಯಕೀಯ ಮತ್ತು ಶಿಕ್ಷಣ ಸಚಿವರಾಗಿದ್ದ ಶರಣಪ್ರಕಾಶ ಪಾಟೀಲರು ವಿಭಾಗೀಯ ಕಚೇರಿ ಸ್ಥಾಪನೆಗೆ ಆದೇಶಿಸಿದ್ದಾರೆ. ಆದರೆ, ನಂತರದ ದಿನಗಳಲ್ಲಿ ಅದು ಕಾರಣಾಂತರಗಳಿಂದ ನೆನಗುದಿಗೆ ಬಿದ್ದಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ವಿಶೇಷ ಕಾಳಜಿ ವಹಿಸಿ ಕಲ್ಯಾಣ ಕರ್ನಾಟಕ ಭಾಗದ ಜನತೆ ಬೇಡಿಕೆಗಳನ್ನು ಈಡೇರಿಸಬೇಕೆಂದು ಮನವಿ ಮಾಡಿದರು. ಹೈ-ಕ ನರ್ಸಿಂಗ್ ಅಸೋಶಿಯೇಷನ್‌ನ ಉಪಾಧ್ಯಕ್ಷ ರಹೀಂ ಸೈಯದ್, ಸಂಯೋಜಕ ಕಾರ್ಯದರ್ಶಿ ಡಾ| ಕಿರಣ ಜಾರ್ಜ್, ಅರ್ಷದ್ ಅಲಿ, ರಾಜಶೇಖರ ಶಾಸ್ತ್ರಿ, ಖದೀರ್, ರಾಜಶೇಖರ ಚೌಧರಿ, ರಾಜೇಶ ಪಿಳ್ಳೆ, ಮೊಹಮ್ಮದ್ ಇಶಾಕ್ ಸುದ್ದಿಗೋಷ್ಠಿಯಲ್ಲಿದ್ದರು.