ವಿಜಯಪುರ : ವಿಜಯಪುರ ನಗರ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ನೇರವಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಬಹಿರಂಗ ಬೆಂಬಲ ಘೋಷಿಸಿ, ಕಣದಿಂದ ಹಿಂದೆ ಸರಿದಿದ್ದಾಗಿ ಘೋಷಿಸಿದ್ದಾರೆ. ಹೀಗಾಗಿ ಕೂಡಲೇ ಜೆಡಿಎಸ್ ಅಭ್ಯರ್ಥಿ ಬಿ.ಎಚ್.ಮಹಾಬರಿ ಅವರಿಗೆ ನೀಡಿರುವ ಅಭ್ಯರ್ತಿ ಗುರುತಿನ ಚೀಟಿ, ಏಜೆಂಟರನ್ನು ಕೂಡಲೇ ರದ್ದುಪಡಿಸಬೇಕು ಎಂದು ಹಿಂದೂ ಸಂಘಟನೆಗಳ ಪರವಾಗಿ ಸ್ವಾಮಿವಿವೇಕಾನಂದ ಸೇನೆ ಅಧ್ಯಕ್ಷರಾದ ರಾಘವ ಅಣ್ಣಿಗೇರಿ ಆಗ್ರಹಿಸಿದರು.
ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದೇ ನಾಣ್ಯದ ಎರಡು ಮುಖ, ಕಾಂಗ್ರೆಸ್ ಜೊತೆ ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಇದಕ್ಕೆ ಪುಷ್ಟಿ ನೀಡುವಂತೆ ವಿಜಯಪುರ ಜೆಡಿಎಸ್ ಅಭ್ಯರ್ಥಿ ಏಕಾಏಕಿ ಕಾಂಗ್ರೆಸ್ ಪಕ್ಷ ಹಾಗೂ ಅಭ್ಯರ್ಥಿಗೆ ಬೆಂಬಲ ಘೋಷಿಸಿ ಕಣದಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಇಬ್ಬರೂ ಸೇರಿ ಚುನಾವಣಾ ಅಕ್ರಮ ನಡೆಸಲು ಹುನ್ನಾರ ನಡೆಸಿದ್ದು, ಕೂಡಲೇ ಜೆಡಿಎಸ್ ಅಭ್ಯರ್ಥಿಯ ಗುರುತಿನ ಚೀಟಿ ಹಾಗೂ ಏಜೆಂಟರನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್-ಜೆಡಿಎಸ್ ತಲಾ 538 ಮತಗಟ್ಟೆ ಏಜೆಂಟರ ಸಂಖ್ಯೆ ಹೆಚ್ಚಿಸಿಕೊಂಡು ಮತದಾನದ ದಿನ ಮತಗಟೆಯಲ್ಲಿ ಮತದಾರರ ಮೇಲೆ ಕಾಂಗ್ರೆಸ್ ಪರ ಒತ್ತಡ ಹೇರಲು ಮುಂದಾಗಿದ್ದಾರೆ. ಇದಲ್ಲದೇ ಮತ ಎಣಿಕೆ ದಿನವೂ ಇಬ್ಬರೂ ಏಜೆಂಟರು ಸೇರಿಕೊಂಡು ದಾಂಧಲೆ ನಡೆಸುವ ಸಾಧ್ಯತೆ ಇದೆ. ಹೀಗಾಗಿ ಬಹಿರಂಗವಾಗಿ ನಿವೃತ್ತಿ ಘೋಷಿಸಿರುವ ಜೆಡಿಎಸ್ ಅಭ್ಯರ್ಥಿಗೆ ನೀಡಿರುವ ಚುನಾವಣಾ ಸೌಲಭ್ಯಗಳನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿದರು.
ಕಳೆದ ಬಾರಿ ಮತಗಟ್ಟೆ ವ್ಯಾಪ್ತಿಗೆ ಸೇರದವರು ವಾಹನದಲ್ಲಿ ಆಗಮಿಸಿ ಇತರೆ ಮತಗಟ್ಟೆಯಲ್ಲಿ ಗದ್ದಲ ಎಬ್ಬಿಸಿದ್ದರು. ಈ ಬಾರಿಯೂ ಅಂಥ ಘಟನೆಗಳು ಮರುಕಳಿಸಿ ಮತದಾನಕ್ಕೆ ತೊಂದರೆ ನೀಡುವ ಹುನ್ನಾರ ನಡೆಸಿದ್ದಾರೆ. ಇದೀಗ ಜೆಡಿಎಸ್ ಅಭ್ಯರ್ಥಿ ಕಾಂಗ್ರೆಸ್ ಜೊತೆ ಸೇರಿಕೊಂಡು ದಾಂಧಲೆ ನಡೆಸುವ ಸಾರ್ಧಯತೆ ಇದೆ. ಕಾರಣ ಜಿಲ್ಲಾ ಚುನಾವಣಾ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಎಸ್ಪಿ ನಗರ ಕ್ಷೇತ್ರದ ಮತಗಟ್ಟೆಗಳಿಗೆ ಅಗತ್ಯ ಪೊಲೀಸ್ ಭದ್ರತೆ ಕಲ್ಪಿಸಬೇಕು ಎಂದು ರಾಘವ ಅಣ್ಣಿಗೇರಿ ಆಗ್ರಹಿಸಿದರು.
ಜೆಡಿಎಸ್ ಅಭ್ಯರ್ಥಿ ಕಣದಿಂದ ಹಿಂದೆ ಸರಿಯುವ ಬೆಳವಣಿಗೆ ಹಿಂದೆ ಸದರಿ ಪಕ್ಷದ ನಾಯಕರ ಒತ್ತಾಸೆ ಇದೆಯೇ, ಇಲ್ಲವೇ ಎಂಬುದನ್ನು ಜೆಡಿಎಸ್ ವರಿಷ್ಠರಾದ ಎಚ್.ಡಿ.ದೇವೇಗೌಡರು, ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ಯತ್ನಾಳ ವಿರುದ್ಧ ಜೆಡಿಎಸ್ ವರಿಷ್ಠರು ಇಂಥದ್ದೊಂದು ರಾಜಕೀಯ ಸಂಚು ರೂಪಿಸಿದ್ದಾರೆ. ಇಲ್ಲ ಎಂದಾದರೆ ಇದರಲ್ಲಿ ಜೆಡಿಎಸ್ ಪ್ರಮುಖರು ಇದರಲ್ಲಿ ತಮ್ಮ ಪಾತ್ರವೇನು ಎಂಬುದನ್ನು ರಾಜ್ಯದ ಜನರಿಗೆ ತಿಳಿಸಬೇಕು ಎಂದು ಆಗ್ರಹಿಸಿದರು.
ಮಾಧ್ಯಮಗಳ ಮೂಲಕ ಬಹಿರಂಗ ನಿವೃತ್ತಿ ಘೋಷಿಸಿರುವ ಜೆಡಿಎಸ್ ಅಭ್ಯರ್ಥಿ ಪಡೆದಿರುವ ಚುನಾವಣಾ ಸೌಲಭ್ಯಗಳನ್ನು ತಕ್ಷಣ ಜಿಲ್ಲಾ ಚುನಾವಣಾಧಿಕಾರಿಗಳು ರದ್ದು ಮಾಡದಿದ್ದಲ್ಲಿ, ರಾಜ್ಯ ಚುನಾವಣಾ ಅಧಿಕಾರಿಗಳಿಗೆ ಈ ಕುರಿತು ದೂರು ನೀಡುವುದಾಗಿ ರಾಘವ ಅಣ್ಣಿಗೇರಿ ಹೇಳಿದರು.
ವೂಡಾ ಅಧ್ಯಕ್ಷ ಪರುಶುರಾಮ ರಜಪೂತ, ಹಿಂದೂ ಸಂಘಟನೆಗಳು ಮಖಂಡರಾದ ಸದಾಶಿವ ಗುಡ್ಡೋಡಗಿ, ಗುರು ಗಚ್ಚಿನಮಠ, ಗುರುರಾಜ ಗಂಗನಹಳ್ಳಿ, ರಾಜು ಅನಂತಪುರ, ಅನಿಲ ಸಬರದ, ಮಹಾನಗರ ಪಾಲಿಕೆ ಸದಸ್ಯರಾದ ಎಂ.ಎಸ್.ಕರಡಿ, ರಾಜು ಕುರಿಯವರ, ಕಿರಣ್ ಪಾಟೀಲ, ಮುಖಂಡರಾದ ಮನೋಹರ ಕಾಂಬಳೆ, ವಿಜಯಕುಮಾರ ಚವ್ಹಾಣ, ವಿವೇಕ, ಸಜ್ಜನ, ರಾಜು ಗಣಿ, ಪ್ರವೀಣ ಬಿಜ್ಜರಗಿ, ವಿಜಯಕುಮಾರ ಡೋಣಿ, ಈಶ್ವರ ಮುಂಜಣ್ಣಿ ಸೇರಿದಂತೆ ಇತರರು ಉಪಸ್ಥಿತರಿದ್ದರು.