ಚಿಕ್ಕೋಡಿ: ಪ್ರಸಕ್ತ ಹಂಗಾಮಿನಲ್ಲಿ ಕಬ್ಬು ಕಟಾವು ಆರಂಭವಾಗಿದ್ದು, ಸಕ್ಕರೆ ಕಾರ್ಖಾನೆಗಳು ಎಫ್‌ಆರ್‌ಪಿ ಜೊತೆಗೆ ಹೆಚ್ಚುವರಿ 200 ರೂ. ದರವನ್ನು ಒಂದೇ ಕಂತಿನಲ್ಲಿ ರೈತರಿಗೆ ನೀಡಬೇಕೆಂದು ಸ್ವಾಭಿಮಾನಿ ಶೇತಕರ ಸಂಘಟನೆ ಸಂಸ್ಥಾಪಕ ಅಧ್ಯಕ್ಷ, ಮಾಜಿ ಸಂಸದ ರಾಜು ಶೆಟ್ಟಿ ಒತ್ತಾಯಿಸಿದರು.
ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಜಯಸಿಂಗಪುರ ನಗರದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ-ಮಹಾರಾಷ್ಟ್ರ 18ನೇ ರೈತರ ಬೃಹತ್ ಸಮಾವೇಶದಲ್ಲಿ ಅವರು ಮಾತನಾಡಿದರು. ಆಗಸ್ಟ್ ತಿಂಗಳಲ್ಲಿ ಕೃಷ್ಣಾ, ದೂಧಗಂಗಾ, ವೇದಗಂಗಾ ಮತ್ತು ಪಂಚಗಂಗಾ ನದಿಗಳ ಭೀಕರ ಪ್ರವಾಹದಿಂದ ಲಕ್ಷಾಂತರ ಹೆಕ್ಟೇರ್ ಕಬ್ಬು ನೀರಿನಲ್ಲಿ ಬಾಧಿ ತವಾಗಿದೆ. ಸಕ್ಕರೆ ಕಾರ್ಖಾನೆಗಳು ಪ್ರವಾಹ ಬಾಧಿತಗೊಂಡಿರುವ ಕಬ್ಬು ಕಟಾವಿಗೆ ಮೊದಲು ಆದ್ಯತೆ ನೀಡಬೇಕು. ಮುಂಬರುವ ಡಿಸೆಂಬರ್ 15ರೊಳಗಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿ ಭಾಗದಲ್ಲಿ ಪ್ರವಾಹ ಬಾಧಿ ತ ಕಬ್ಬು ಕಟಾವು ಮಾಡಬೇಕೆಂದು ಸಕ್ಕರೆ ಕಾರ್ಖಾನೆಗಳನ್ನು ಒತ್ತಾಯಿಸಿದರು.
ಸರ್ಕಾರ ನಿಗದಿ ಮಾಡಿರುವ ಎಫ್‌ಆರ್‌ಪಿ ಜೊತೆಗೆ ಹೆಚ್ಚುವರಿ ಬೆಲೆ ನೀಡಲು 15 ದಿನದೊಳಗಾಗಿ ಎಲ್ಲ ಸಕ್ಕರೆ ಕಾರ್ಖಾನೆಗಳು ನಿರ್ಣಯ ತೆಗೆದುಕೊಳ್ಳಬೇಕು. ಇಲ್ಲದೇ ಹೋದರೆ ಗಡಿ ಭಾಗದಲ್ಲಿ ಇರುವ ಎಲ್ಲ ಸಕ್ಕರೆ ಕಾರ್ಖಾನೆಯನ್ನು ಬಂದ್ ಮಾಡಲಾಗುತ್ತದೆ ಎಂದು ಕಾರ್ಖಾನೆಗಳಿಗೆ ಎಚ್ಚರಿಕೆ ನೀಡಿದರು. ಕಳೆದ ಹಂಗಾಮಿನಲ್ಲಿ ಹೋಲಿಕೆ ಮಾಡಿದರೇ ಈ ಹಂಗಾಮಿನಲ್ಲಿ ಸಕ್ಕರೆ ಉತ್ಪಾದನೆ ಕಡಿಮೆಯಾಗಲಿದೆ. ಕಾರ್ಖಾನೆಗಳನ್ನು ಕನಿಷ್ಠ 120 ದಿನಗಳು ನಡೆಸಬೇಕಾದರೇ ಅನೇಕ ಕಾರ್ಖಾನೆಗಳಿಗೆ ಕಬ್ಬು ಕೊರತೆಯಾಗಲಿದೆ. ಹೀಗಾಗಿ ಕಬ್ಬಿಗಾಗಿ ಕಾರ್ಖಾನೆಗಳು ರೈತರ ಮನೆ ಬಾಗಿಲಿಗೆ ಬರಬೇಕಾಗುತ್ತದೆ. ಯಾವ ಸಕ್ಕರೆ ಕಾರ್ಖಾನೆ ಹೆಚ್ಚು ದರ ಕೊಡುತ್ತದೆಯೋ ಅದೇ ಕಾರ್ಖಾನೆಗೆ ರೈತರು ಕಬ್ಬು ಕಳಿಸಲು ಚಿಂತನೆ ನಡೆಸುತ್ತಾರೆ. ಕೂಡಲೇ ಸಕ್ಕರೆ ಕಾರ್ಖಾನೆ ಮಾಲೀಕರು ಕಬ್ಬಿಗೆ ಎಷ್ಟು ದರ ನೀಡುತ್ತಿರಾ? ಎಂಬುದನ್ನು ಬಹಿರಂಗ ಪಡಿಸಬೇಕೆಂದು ಆಗ್ರಹಿಸಿದರು.
ಶೇತಕರ ಕೃತಿ ಸಮಿತಿ ಅಧ್ಯಕ್ಷ ಸತೀಶ ಕಾಕಡೆ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು. ಸ್ವಾಭಿಮಾನಿ ಪಕ್ಷದ ರಾಜ್ಯಾಧ್ಯಕ್ಷ ಪ್ರಕಾಶ ಹೋಪಳೆ, ಶಾಸಕ ದೇವೇಂದ್ರ ಗೂಯಾರ, ಜಾಲಂದ್ರ ಪಾಟೀಲ, ರಾಜ್ಯ ಮಹಿಳಾ ಅಗಾಡಿಯಾ ಅಧ್ಯಕ್ಷೆ ರಸಿಕಾತಾಯಿಡಗೆ, ರವಿಕಾಂತ ತುಪಕರ, ಸಾಹುಕಾರ ಮಾದನಾಯಿಕ, ಡಾ| ಮಹಾವೀರ ಅಕ್ಕೋಳೆ, ಡಾ| ಶ್ರೀವರ್ಧನ ಪಾಟೀಲ, ಬಂಗಾಳಿ ಪಾಟೀಲ, ದೇವೇಗೌಂಡ ಚಿಪ್ಪರಗೆ, ರಾಜೇಂದ್ರ ಗಡೆನ್ನವರ, ರಾಜು ಕಿಚಡೆ, ಸುಭಾಷ ಚೌಗಲೆ, ಪಂಕಜ ತಿಪ್ಪನ್ನವರ, ಅಲ್ಲಗೌಡ ಪಾಟೀಲ, ಜೀತೇಂದ್ರ ಟಾಕಳೆ, ತಾತ್ಯಾಸಾಹೇಬ ಕೇಸ್ತೆ, ಪ್ರಕಾಶ ತೇರದಾಳೆ, ವಿಕ್ರಾಂತ ಸಮಗೆ, ರಮೇಶ ಪಾಟೀಲ, ರಾಜು ಉಪಾಧ್ಯೆ ಇದ್ದರು.