Advertisement

ಡಾ|ಕಲಬುರ್ಗಿ ಹಂತಕರ ಪತ್ತೆಗೆ ಆಗ್ರಹಿಸಿ ಪ್ರತಿಭಟನೆ

01:04 PM Aug 31, 2017 | Team Udayavani |

ಬೀದರ: ಶತಮಾನದ ಶ್ರೇಷ್ಠ ಚಿಂತಕ, ಸಂಶೋಧಕ, ಡಾ| ಎಂ.ಎಂ. ಕಲಬುರ್ಗಿ ಹಂತಕರನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು. ಇದಕ್ಕಾಗಿ ವಿಶೇಷ ತಂಡ ರಚಿಸಿ ತನಿಖೆಯನ್ನು ಚುರುಕುಗೊಳಿಸಬೇಕು ಎಂದು ಆಗ್ರಹಿಸಿ ನಗರದಲ್ಲಿ ಜಿಲ್ಲಾ ಕಸಾಪ ನೇತೃತ್ವದಲ್ಲಿ ಮಠಾಧಿಧೀಶರು ಮತ್ತು ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಸರ್ಕಾರದ ಮೇಲೆ ಒತ್ತಡ ಹಾಕಿದರು.

Advertisement

ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನಶೆಟ್ಟಿ ನೇತೃತ್ವದಲ್ಲಿ ನಗರದ ಅಂಬೇಡ್ಕರ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ಕಪ್ಪು ಪಟ್ಟಿ ಧರಿಸಿ, ಮಾನವ ಸರಪಳಿ ಮೂಲಕ ರಸ್ತೆ ತಡೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿವರೆಗೆ ರ್ಯಾಲಿ ಕೈಗೊಂಡು ಧರಣಿ ನಡೆಸಿದರು. ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಾಯಿತು. ಡಾ| ಕಲಬುರ್ಗಿ ಹತ್ಯೆ ನಡೆದು ಎರಡು
ವರ್ಷ ಕಳೆದರೂ ಹಂತಕರನ್ನು ಮತ್ತು ಅದರ ಹಿಂದಿರುವವರನ್ನು ಇನ್ನೂ ಪತ್ತೆಹಚ್ಚಿಲ್ಲ. ಇದು
ಸರ್ಕಾರ-ಪೊಲೀಸ ಇಲಾಖೆ ವೈಫಲ್ಯ-ನಿರಾಸಕ್ತಿ ಸೂಚಿಸುತ್ತದೆ ಎಂದು ದೂರಲಾಗಿದೆ.

ಈ ಹತ್ಯೆ ಕೇವಲ ವೈಚಾರಿಕ ಸಂಘರ್ಷದ ಕಾರಣವೆಂಬುವುದು ಸ್ಪಷ್ಟವಾಗಿದೆ. ಕಲಬುರ್ಗಿಯವರು ಭೇದ ಭಾವ ಮಾಡದೇ ಮಾನವ ಕುಲ ಒಳಿತಿಗಾಗಿ ಹೋರಾಡಿದ ಶರಣರ, ಸೂಫಿಸಂತರ ಧೋರಣೆಗಳನ್ನು ಪ್ರತಿಪಾದಿಸಿದ್ದು ಅಲ್ಲಿರುವ ಸತ್ಯಗಳನ್ನು ಬಹಿರಂಗಗೊಳಿಸಿದವರು.
ಶರಣರ ಮೂಲ ಆಶಯವಾದ ಮೌಡ್ಯತೆ ನಿವಾರಣೆಗೆ ಶ್ರಮಿಸುತ್ತಿದ್ದರು. ಇದರ ಫಲವಾಗಿ
ಅವರು ಬದುಕಿದ್ದಾಗಲೇ ಹಲವಾರು ಜೀವ ಬೆದರಿಕೆಗಳನ್ನು ಎದುರಿಸಿ ಧೈರ್ಯದಿಂದ
ಬಾಳಿದ್ದರು. ಕೋಮುವಾದ ಶಕ್ತಿಗಳು ಅವರನ್ನು ಬಲಿ ಪಡೆದಿವೆ ಎಂದು ತಿಳಿಸಲಾಗಿದೆ.

ಭಿನ್ನಾಭಿಪ್ರಾಯ ಅಥವಾ ವಿರೋಧಿ ನೆಲೆಗಳಿದ್ದರೂ ಪರಸ್ಪರ ಗೌರವದಿಂದ ಇರಬೇಕಾದದ್ದು ಪ್ರಜಾಪ್ರಭುತ್ವದ ನೆಲೆಗಟ್ಟಾಗಿದೆ. ಪ್ರಜಾಪ್ರಭುತ್ವದ ಈ ನೆಲೆಯನ್ನು ಗಾಳಿಗೆ ತೂರಿರುವ ಸಮಾಜ ಘಾತುಕ ಶಕ್ತಿಗಳನ್ನು ನಿಯಂತ್ರಿಸುವಲ್ಲಿ, ಸರಕಾರ ವಿಳಂಬ ಮಾಡಬಾರದು. ಈ ವಿಳಂಬ ನೀತಿಗಳೇ ಅನೇಕ ಅನಾಹುತಗಳಿಗೆ ಕಾರಣವಾಗಬಹುದು. ತಪ್ಪಿತಸ್ಥರಿಗೆ ಉಗ್ರ ಶಿಕ್ಷೆ ನೀಡಬೇಕು. ಬರುವ
ನಗಳಲ್ಲಿ ಇಂಥ ವೈಚಾರಿಕ ಹತ್ಯೆ ನಡೆಯದಂತೆ ಸರ್ಕಾರ ಕಟ್ಟು-ನಿಟ್ಟಿನ ಕ್ರಮ ವಹಿಸಿ ನಾಡಿನ
ವಿಚಾರವಾದಿಗಳಿಗೆ, ಪ್ರಗತಿಪರ ಚಿಂತಕರಿಗೆ, ಸೂಕ್ತ ರಕ್ಷಣೆ ನೀಡಬೇಕೆಂದು ಆಗ್ರಹಿಸಲಾಗಿದೆ.

ಚಿಂತಕರನ್ನು ಹತ್ಯೆ ಮಾಡುವ ಮೂಲಕ ಸೌಹಾರ್ದ ಪರಂಪರೆಯನ್ನು ಹಿಮ್ಮೆಟ್ಟಿಸಲಾಗದು. ಹಣೆಗೆ ಗುಂಡಿಡಬಹುದೇ ಹೊರತು ನುಡಿಗೆ ಗುಂಡಿಡಲಾಗದು. ಹೈ. ಕ ನೆಲವು ತಾತ್ವಿಕ ಧಾರೆಗಳ ಭಾವೈಕ್ಯತೆಯ ಪ್ರಯೋಗ ಭೂಮಿಯಾಗಿದೆ. ಈ ನೆಲದ ಜನತೆ ಯಾವತ್ತೂ ಹಿಂಸೆಯನ್ನು ನಂಬಿದವರೂ ಅಲ್ಲ, ಪ್ರಚೋದಿಸಿದವರೂ ಅಲ್ಲ. ಹಿಂಸೆಗೆ ಹಿಂಸೆ ಉತ್ತರ ಅಲ್ಲ ಎಂದು ತಿಳಿಸಲಾಗಿದೆ.

Advertisement

ಪ್ರತಿಭಟನೆಯಲ್ಲಿ ಹುಲಸೂರಿನ ಶ್ರೀ ಶಿವಾನಂದ ಸ್ವಾಮೀಜಿ, ಭಾಲ್ಕಿಯ ಶ್ರೀ ಗುರುಬಸವ ಪಟ್ಟದ್ದೇವರು, ಅಕ್ಕ ಗಂಗಾಂಬಿಕೆ, ಪ್ರಮುಖರಾದ ಶರಣಪ್ಪ ಮಿಠಾರೆ, ಬಾಬು ವಾಲಿ, ಬಸವರಾಜ ಧನ್ನೂರ, ಶ್ರೀಕಾಂತ ಸ್ವಾಮಿ, ದೇಶಾಂಶ ಹುಡಗಿ, ಚಂದ್ರಪ್ಪ ಹೆಬ್ಟಾಳಕರ್‌, ಭಾರತಿ ವಸ್ತ್ರದ, ವಿರೂಪಾಕ್ಷ ಗಾದಗಿ ಮತ್ತು ವಿಜಯಕುಮಾರ ಸೋನಾರೆ ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next