Advertisement

ಸರ್ವಋತು ರಸ್ತೆ, ಸೇತುವೆಗೆ ಬೇಡಿಕೆ

10:56 PM May 22, 2019 | mahesh |

ಕೆಯ್ಯೂರು: ಕೆಯ್ಯೂರು ಗ್ರಾ.ಪಂ. ವ್ಯಾಪ್ತಿಯ ಕಣಿಯಾರು -ಕಜೆಮೂಲೆ-ಒಡಪಲ್ಲ-ಕಳಾಯಿ ರಸ್ತೆಗೆ ಸೇತುವೆ ಸಹಿತ ಸರ್ವಋತು ರಸ್ತೆಯನ್ನಾಗಿ ಪರಿವರ್ತಿಸಬೇಕು ಎನ್ನುವ ಬೇಡಿಕೆಗೆ ಇನ್ನೂ ಸ್ಪಂದನೆ ಸಿಕ್ಕಿಲ್ಲ. ಹಲವು ಮನವಿಗಳು, ಸ್ಥಳೀಯರು ರಸ್ತೆಗಾಗಿ ಜಾಗ ಬಿಟ್ಟುಕೊಟ್ಟರೂ ಇಲಾಖೆಗಳಿಂದ ಅಭಿವೃದ್ಧಿ ಮಾತ್ರ ಮರೀಚಿಕೆಯಾಗಿದೆ. ಹಾಗಾಗಿ ಈ ಬಾರಿಯೂ ಮಳೆಗಾಲದಲ್ಲಿ ಇಲ್ಲಿನ ನಿವಾಸಿಗಳಿಗೆ ಸುತ್ತಾಟವೇ ಗತಿ ಎನಿಸಿದೆ.

Advertisement

100 ಮನೆಗಳಿಗೆ ದಾರಿ
ಈ ರಸ್ತೆಯು ಕಣಿಯಾರು, ಇಳಂತಜೆ, ಅರ್ತ್ಯಡ್ಕ,, ಕಜೆಮೂಲೆ, ಒಡಪಲ್ಲ, ಕಲಾಯಿ, ಪೆರ್ಲಂಪಾಡಿ ಪ್ರದೇಶದ 100ಕ್ಕೂ ಅಧಿಕ ಮನೆಗಳ 500ಕ್ಕೂ ಅಧಿಕ ಮಂದಿಗೆ ಸಂಚಾರ ರಸ್ತೆಯಾಗಿದೆ. ಆದರೆ ರಸ್ತೆ ಅಭಿವೃದ್ಧಿ ಬಗ್ಗೆ ಜನಪ್ರತಿನಿಧಿಗಳು ಇಚ್ಛಾಶಕ್ತಿ ಪ್ರದರ್ಶಿಸುತ್ತಿಲ್ಲ. ಈ ರಸ್ತೆಯಲ್ಲಿ ಸೇತುವೆ ನಿರ್ಮಾಣದ ಬೇಡಿಕೆ ಇದ್ದು, ಈ ತನಕ ಈಡೇರಿಲ್ಲ. ಹೀಗಾಗಿ ಮಳೆಗಾಲದಲ್ಲಿ ವಾಹನ ಸಂಚಾರ ಸಾಧ್ಯವಾಗುವುದಿಲ್ಲ. ಸ್ಥಳೀಯ ಗ್ರಾ.ಪಂ.ನಿಂದ ಕಾಲುಸಂಕ ನಿರ್ಮಾಣವಾದ ಕಾರಣ ವಿದ್ಯಾರ್ಥಿಗಳ ಸಂಚಾರಕ್ಕೆ ಒಂದಷ್ಟು ಅನುಕೂಲವಾಗಿದೆ.

ಜಾಗ ಕೊಟ್ಟಿದ್ದಾರೆ
ಸರ್ವಋತು ರಸ್ತೆಯನ್ನಾಗಿ ಪರಿವರ್ತಿಸಲು ಸ್ಥಳೀಯರು ಸ್ವಂತ ಸ್ಥಳವನ್ನು ಬಿಟ್ಟುಕೊಟ್ಟಿದ್ದಾರೆ. ಗ್ರಾ.ಪಂ. ಸುಪರ್ದಿಗೆ ನೀಡಿ 3 ವರ್ಷಗಳೇ ಸಂದಿವೆ. ಈ ರಸ್ತೆ ದುರಸ್ತಿಗೆ ಜನರೇ 3.80 ಲಕ್ಷ ರೂ. ವ್ಯಯಿಸಿದ್ದಾರೆ. ಇಷ್ಟಾದರೂ ಶಾಸಕರ, ಸಂಸದರ ಅಥವಾ ಇನ್ನಿತರ ಮೂಲಗಳಿಂದ ಅನುದಾನ ಕಾದಿರಿಸುವ ಯಾವ ಪ್ರಯತ್ನವೂ ನಡೆದಿಲ್ಲ. ಹೀಗಾಗಿ ಕಳೆದ ಹಲವು ವರ್ಷಗಳಿಂದ ಅನುದಾನದ ಕಾರಣದಿಂದ ಬೇಡಿಕೆ ಈಡೇರುತ್ತಿಲ್ಲ ಎಂದು ಸ್ಥಳೀಯರು ದೂರುತ್ತಾರೆ.

ಸುತ್ತಾಟ ತಪ್ಪಲಿದೆ
ಸೇತುವೆ ನಿರ್ಮಾಣವಾದಲ್ಲಿ ಮಳೆಗಾಲದಲ್ಲಿ ಕೆಯ್ಯೂರು ಸಂಪರ್ಕಕ್ಕೆ ಸುಮಾರು 10 ಕಿ.ಮೀ. ಹತ್ತಿರ. ಈಗಂತೂ ಪೆರ್ಲಂಪಾಡಿ ರಸ್ತೆ ಮೂಲಕ ಕೆಯ್ಯೂರಿಗೆ ಸುತ್ತು ಬಳಸಿ ಬರಬೇಕು. ಈ ರಸ್ತೆ ಹಾದು ಹೋಗುವ ಪ್ರದೇಶದಲ್ಲಿ ಒಡಪಲ್ಲ ಕಾಲನಿ, ಕಳಾಯಿ ಕಾಲನಿಗಳಲ್ಲಿ ಸುಮಾರು 60ಕ್ಕೂ ಅಧಿಕ ಪರಿಶಿಷ್ಟ ಜಾತಿ ಕುಟುಂಬಗಳು ವಾಸಿಸುತ್ತಿವೆ. ಕಳೆದ ಐದು ವರ್ಷದಲ್ಲಿ ಬೇಡಿಕೆಗೆ ಸಂಬಂಧಿಸಿ ಶಾಸಕರಿಗೆ, ತಾ.ಪಂ., ಎಂ.ಪಿ., ಕೆಯ್ಯೂರು ಗ್ರಾ.ಪಂ.ಗೆ ಮನವಿ ನೀಡಲಾಗಿದೆ ಎನ್ನುತ್ತಾರೆ ಸ್ಥಳೀಯರು.

 ಮೋರಿಗೆ ಅನುದಾನ
ಗ್ರಾ.ಪಂ.ನಿಂದ ಮೋರಿ ಕಾಮಗಾರಿಗೆ 1 ಲಕ್ಷ ರೂಪಾಯಿ ಅನುದಾನ ಬಿಡುಗಡೆಯಾಗಿದೆ. ಕಾಲುಸಂಕ ನಿರ್ಮಾಣಕ್ಕೆ ದೊಡ್ಡ ಮೊತ್ತದ ಅನುದಾನದ ಅಗತ್ಯವಿದ್ದು, ಸಂಸದರ ನಿಧಿ ಅಥವಾ ನಬಾರ್ಡ್‌ ಯೋಜನೆಯಿಂದ ಪಡೆದುಕೊಳ್ಳಲು ತೀರ್ಮಾನಿಸಲಾಗಿದೆ.
– ಸುಬ್ರಹ್ಮಣ್ಯ ಕೆ.ಎಂ., ಪಿಡಿಒ, ಕೆಯ್ಯೂರು ಗ್ರಾ.ಪಂ.

Advertisement

ವಾಹನ ಓಡಾಟ ಅಸಾಧ್ಯ
ಮಳೆಗಾಲದಲ್ಲಿ ಈ ಪರಿಸರದ ಯಾವುದೇ ವಾಹನವನ್ನು ಓಡಿಸುವಂತಿಲ್ಲ. ಬಾಡಿಗೆ ವಾಹನಗಳು ತೆರಳಲು ಸಾಧ್ಯವಿಲ್ಲ. ಸೇತುವೆ ನಿರ್ಮಾಣ ಅತಿ ಆವಶ್ಯಕವಾಗಿದೆ. ಜನಪ್ರತಿನಿಧಿಗಳು ಬಗ್ಗೆ ಗಮನ ಹರಿಸಬೇಕು. ಜೀವನ ನಿರ್ವಹಣೆಗೆ ಆಟೋರಿಕ್ಷಾ ಓಡಿಸುವವರು ಇದ್ದು, ಮಳೆಗಾಲದಲ್ಲಿ ಮನೆಯಲ್ಲಿ ಕೂರಬೇಕಾದ ಸ್ಥಿತಿ ಇದೆ.
– ಮಧುಸೂದನ ಭಟ್‌ ಕಜೆಮೂಲೆ ಸ್ಥಳೀಯ ನಿವಾಸಿ

– ಗೋಪಾಲಕೃಷ್ಣ ಸಂತೋಷ್‌ನಗರ

Advertisement

Udayavani is now on Telegram. Click here to join our channel and stay updated with the latest news.

Next