ದಾವಣಗೆರೆ: ಮುಂದಿನ ಲೋಕಸಭಾ ಚುನಾವಣೆಗೆ ದಾವಣಗೆರೆ ಕ್ಷೇತ್ರದಿಂದ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೇ ಟಿಕೆಟ್ ನೀಡಬೇಕು ಎಂದು ಜಿಲ್ಲಾ ಕಾಂಗ್ರೆಸ್ ಮತ್ತು ಎಸ್.ಎಸ್. ಮಲ್ಲಿಕಾರ್ಜುನ್ ಬಳಗ ಒತ್ತಾಯಿಸಿದೆ.
ಜಿಲ್ಲಾ ಉಸ್ತುವಾರಿ ಸಚಿವರಾಗಿ ಅತ್ಯುತ್ತಮ ಕೆಲಸ ಮಾಡಿರುವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಬಗ್ಗೆ ಜನರಲ್ಲಿ ಒಲುವು ಇದೆ. ಕಳೆದ ಚುನಾವಣೆಯಲ್ಲಿ ಅವರು ಸೋತಿರುವ ಬಗ್ಗೆ ಅನುಕಂಪವೂ ಇದೆ. ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಮತ್ತೆ ಸ್ಪರ್ಧಿಸಿದರೆ ಕಾಂಗ್ರೆಸ್‌ಗೆ ಅನುಕೂಲ ಆಗಲಿದೆ ಎಂಬ ವಿಚಾರವನ್ನು ಈಚೆಗೆ ನಡೆದ ಕೆಪಿಸಿಸಿ ಪದಾಧಿಕಾರಿಗಳ ಸಭೆಯಲ್ಲಿ ಮುಖಂಡರಿಗೆ ಮನವರಿಕೆ ಮಾಡಿಕೊಡಲಾಗಿದೆ. ಅವರಿಗೆ ಟಿಕೆಟ್ ದೊರೆಯಲಿದೆ ಎಂದು ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಎಚ್.ಬಿ. ಮಂಜಪ್ಪ ಭಾನುವಾರ ಸುದ್ದಿಗೋಷ್ಠಿಯಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎಸ್.ಎಸ್. ಮಲ್ಲಿಕಾರ್ಜುನ್ ಅವರೇ ನಮ್ಮ ಪಕ್ಷದ ಅಭ್ಯರ್ಥಿ. ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಧಾನ ಪರಿಷತ್ ಸದಸ್ಯ ಎಚ್.ಎಂ. ರೇವಣ್ಣ ಸ್ಪರ್ಧಿಸುತ್ತಾರೆ ಎಂಬ ಊಹಾಪೋಹದ ಮಾತುಗಳು ಹರಿದಾಡುತ್ತಿವೆ. ಸ್ವತಃ ನಮ್ಮ ನಾಯಕರಾದ ಸಿದ್ದರಾಮಯ್ಯ ಅವರು ನಾನು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಎಚ್.ಎಂ. ರೇವಣ್ಣ ಅವರು ದಾವಣಗೆರೆ ಜಿಲ್ಲೆಯವರನ್ನೇ ಕಣಕ್ಕಿಳಿಸಿ, ನಾನು ಬೆಂಗಳೂರು ಸೆಂಟ್ರಲ್‌ನಿಂದ ಸ್ಪರ್ಧಿಸ ಬಯಸಿರುವುದಾಗಿ ಹೇಳಿದ್ದಾರೆ ಎಂದು ತಿಳಿಸಿದರು.
ಮುಂದಿನ ಲೋಕಸಭಾ ಚುನಾವಣೆಗೆ ದಾವಣಗೆರೆ ಕ್ಷೇತ್ರದಿಂದ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೇ ಟಿಕೆಟ್ ನೀಡಬೇಕು ಎಂದು ಪ್ರದೇಶ ಕಾಂಗ್ರೆಸ್ ಸಮಿತಿಗೆ ಮತ್ತೂಮ್ಮೆ ಒತ್ತಾಯಿಸುವ ಉದ್ದೇಶದಿಂದ ಫೆ. 12ರ ಮಂಗಳವಾರ ಬೆಳಗ್ಗೆ 11ಕ್ಕೆ ದಾವಣಗೆರೆಯ ರೇಣುಕ ಮಂದಿರದಲ್ಲಿ ಬೃಹತ್ ಸಭೆ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಕಾಂಗ್ರೆಸ್ ಶಾಸಕರು, ಮಾಜಿ ಶಾಸಕರು, ಜಿಲ್ಲಾ, ತಾಲೂಕು, ನಗರಪಾಲಿಕೆ, ಗ್ರಾಮ ಪಂಚಾಯತಿ ಸದಸ್ಯರು, ವಿವಿಧ ಘಟಕಗಳ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು, ಅಭಿಮಾನಿಗಳು ಭಾಗವಹಿಸುವರು ಎಂದು ತಿಳಿಸಿದರು.
ಎಸ್.ಎಸ್. ಮಲ್ಲಿಕಾರ್ಜುನ್‌ರವರು ಜಿಲ್ಲಾ ಉಸ್ತುವಾರಿ ಸಚಿವರಾಗಿ ದಾವಣಗೆರೆ ಮತ್ತು ಜಿಲ್ಲೆಯಾದ್ಯಂತ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಹಾಲಿ ಸಂಸದರು ಐದು ವರ್ಷಗಳ ಕಾಲ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ ಎಂಬ ಭಾವನೆ ಜನರಲ್ಲಿದೆ. ಎಸ್.ಎಸ್. ಮಲ್ಲಿಕಾರ್ಜುನ್ ಅವರ ಗೆಲುವಿಗೆ ಅನುಕೂಲಕರ ವಾತಾವರಣ ಇದೆ. ಅವರಿಗೇ ಟಿಕೆಟ್ ನೀಡಬೇಕು ಎಂದು ಕೆಪಿಸಿಸಿ ಪದಾಧಿಕಾರಿಗಳ ಸಭೆಯಲ್ಲಿ ರಾಜ್ಯದ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಅಧ್ಯಕ್ಷ ದಿನೇಶ್ ಗುಂಡುರಾವ್ ಒಳಗೊಂಡಂತೆ ಎಲ್ಲ ಮುಖಂಡರಿಗೆ ಒತ್ತಾಯಿಸಲಾಗಿದೆ. ಮುಖಂಡರು ಸಹ ಸಮ್ಮತಿಸಿದ್ದಾರೆ. ಎಸ್.ಎಸ್. ಮಲ್ಲಿಕಾರ್ಜುನ್ ಅವರೇ ನಮ್ಮ ಅಭ್ಯರ್ಥಿ ಎಂದರು.
ಈಚೆಗೆ ನಡೆದ ಮಹಾನಗರ ಪಾಲಿಕೆ ಬಜೆಟ್ ಸಭೆಯಲ್ಲಿ ಬಿಜೆಪಿ ಸದಸ್ಯ ಡಿ.ಎನ್. ಕುಮಾರ್ ಅವರಿಗೆ ಕೈ ಕಟ್ ಮಾಡುವುದಾಗಿ ಯಾರೂ ಹೇಳಿಲ್ಲ. ನಮ್ಮ ಮೇಲೆ ಆರೋಪ ಮಾಡಿದ್ದನ್ನು ಸಾಬೀತುಪಡಿಸುವಂತೆ ಒತ್ತಾಯಿಸಿದ್ದು ನಿಜ ಎಂದು ನಗರಪಾಲಿಕೆ ಸದಸ್ಯರಾದ ದಿನೇಶ್ ಕೆ. ಶೆಟ್ಟಿ, ಅನಿತಾ ಮಾಲತೇಶ್ ಜಾಧವ್ ಹೇಳಿದರು. ಕೈ ಕಟ್ ಮಾಡುವುದಾಗಿ ಎಂ. ಹಾಲೇಶ್ ಹೇಳಿಲ್ಲ ಎಂದು ಉಪ ಮೇಯರ್ ಕೆ. ಚಮನ್‌ಸಾಬ್ ತಿಳಿಸಿದರು.
ನಗರಪಾಲಿಕೆ ಮಾಜಿ ಸದಸ್ಯ ಕೆ.ಜಿ. ಶಿವಕುಮಾರ್, ಬಿ.ಎಚ್. ವೀರಭದ್ರಪ್ಪ, ಅಯೂಬ್ ಪೈಲ್ವಾನ್, ಬಿ.ಕೆ. ಪರಶುರಾಮ್, ಎಸ್. ಮಲ್ಲಿಕಾರ್ಜುನ್, ಶಾಮನೂರು ಟಿ. ಬಸವರಾಜ್, ದಾದಾಪೀರ್, ರಾಜಪ್ಪ. ಸುಧಾ ಗೌಡ್ರ ಚನ್ನಬಸಪ್ಪ ಇತರರು ಸುದ್ದಿಗೋಷ್ಠಿಯಲ್ಲಿದ್ದರು.