Advertisement

ಸಾಲ ಮನ್ನಾ ಪಟ್ಟಿ ಪ್ರಕಟಕ್ಕೆ ಆಗ್ರಹ

11:43 AM Oct 18, 2018 | Team Udayavani |

ಕಲಬುರಗಿ: ಯಾವ ರೈತನಿಗೆ ಎಷ್ಟು ಸಾಲವಿದೆ, ಎಷ್ಟು ಮನ್ನಾ ಆಗಿದೆ ಎನ್ನುವುದರ ಕುರಿತು ಮಾಹಿತಿ ನೀಡದೇ ವಿಎಸ್‌ಎಸ್‌ಎನ್‌ ಸಂಘದ ಕಾರ್ಯದರ್ಶಿಗಳು ಮನಸ್ಸಿಗೆ ಬಂದಂತೆ ಹಣ ನೀಡುವ ಮೂಲಕ ರೈತರನ್ನು ವಂಚಿಸುತ್ತಿರುವುದಕ್ಕೆ ಕಡಿವಾಣ ಹಾಕಲು ಸಾಲ ಹಾಗೂ ಮನ್ನಾ ವಿವರ ಒಳಗೊಂಡ ಪಟ್ಟಿಯನ್ನು ಗ್ರಾಮ ಪಂಚಾಯಿತಿ ಹಾಗೂ ಸಂಘದ ಕಚೇರಿ ಮೇಲೆ ಪ್ರಕಟಿಸುವಂತೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು, ರೈತರು ಬುಧವಾರ ಡಿಸಿಸಿ ಬ್ಯಾಂಕ್‌ನ ಜೇವರ್ಗಿ ತಾಲೂಕು ಶಾಖೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

Advertisement

ಮಾಜಿ ಶಾಸಕ, ಜಿಲ್ಲಾ ಬಿಜೆಪಿ ಅಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ ನರಿಬೋಳ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಬೆಳೆ ಸಾಲ ಮನ್ನಾ ಹಣ ವಿತರಣೆಯಲ್ಲಿ ಅವ್ಯವಹಾರವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದರಿಂದ ಶಾಖಾ ಮ್ಯಾನೇಜರ್‌, ಅಟೆಂಡರ್‌ ಹಾಗೂ ಕೆಲ ವಿಎಸ್‌ಎಸ್‌ಎನ್‌ ಕಾರ್ಯದರ್ಶಿಗಳನ್ನು ಅಮಾನತುಗೊಳಿಸಿ ಸೂಕ್ತ ತನಿಖೆ ನಡೆಸಬೇಕೆಂದು ಆಗ್ರಹಿಸಿಲಾಯಿತಲ್ಲದೇ ಬೇಡಿಕೆಗೆ ಸ್ಪಂದಿಸದಿದ್ದರೆ ಮತ್ತೆ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಯಿತು.
 
ಸಿದ್ದರಾಮಯ್ಯ ಸರ್ಕಾರದಲ್ಲಿ 50 ಸಾವಿರ ರೂ. ಸಾಲ ಮನ್ನಾದಲ್ಲಿ ಜೇವರ್ಗಿ ತಾಲೂಕಿಗೆ 24 ಕೋಟಿ ರೂ. ಬಂದಿದೆ. ಆದರೆ ಸಂಘದ ಕಾರ್ಯದರ್ಶಿಗಳು 5 ಸಾವಿರ ಇಲ್ಲವೇ 10 ಸಾವಿರ ರೂ.ನಂತೆ ಮನಸ್ಸಿಗೆ ಬಂದ ಹಾಗೆ ನೀಡುತ್ತಿದ್ದಾರೆ. ಸಾಲ ಎಷ್ಟಿದೆ ಎಂಬುದಾಗಿ ರೈತರು ಕೇಳುತ್ತಿದ್ದರೂ ಉತ್ತರ ನೀಡುತ್ತಿಲ್ಲ. ಖಾಸಗಿ ಸಂಸ್ಥೆ ಎನ್ನುವಂತೆ ಕಾರ್ಯದರ್ಶಿಗಳು ವ್ಯವಹಾರ ನಡೆಸುತ್ತಿದ್ದಾರೆ. ಆದ್ದರಿಂದ ಪಟ್ಟಿ ಪ್ರಕಟಿಸುವ ಮುಖಾಂತರ ಹಾಗೂ ಸಾಲ ಮನ್ನಾದ ಹಣವನ್ನು ಖಾತೆಗೆ ಕಡ್ಡಾಯವಾಗಿ ಜಮಾ ಮಾಡಿ ನ್ಯಾಯ ಕಲ್ಪಿಸಿಕೊಡಬೇಕೆಂದು ಮಾಜಿ ಶಾಸಕರು ಹಾಗೂ ರೈತ ಮುಖಂಡರು ಆಗ್ರಹಿಸಿದರು.

ಕಲಬುರಗಿ-ಯಾದಗಿರಿ ಜಿಲ್ಲಾ ಸಹಕಾರಿ ಕೇಂದ್ರ (ಡಿಸಿಸಿ) ಬ್ಯಾಂಕ್‌ನ ಅಧ್ಯಕ್ಷ ಬಸವರಾಜ ವಾಲಿ, ಉಪಾಧ್ಯಕ್ಷ ಶರಣಗೌಡ ಪಾಟೀಲ ಹಾಗೂ ಬ್ಯಾಂಕ್‌ನ ಎಂಡಿ ಗೋಪಾಲ ಚವ್ಹಾಣ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಬೇಡಿಕೆಗಳಿಗೆ ಸ್ಪಂದಿಸುವುದಾಗಿ ಸ್ಪಷ್ಟ ಭರವಸೆ ನಂತರ ಪ್ರತಿಭಟನೆ
ಹಿಂತೆಗೆದುಕೊಳ್ಳಲಾಯಿತು. ಡಿಸಿಸಿ ಬ್ಯಾಂಕ್‌ನ ಅಧ್ಯಕ್ಷರಿಗೆ ಮನವಿ ಪತ್ರ ಸಲ್ಲಿಸಲಾಯಿತು. ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next