ಔರಾದ: ಪಟ್ಟಣದಲ್ಲಿನ ಅನಧಿಕೃತ ಮದ್ಯದ ಅಂಗಡಿಗಳನ್ನು ತೆರವುಗೊಳಿಸಲು ಆಗ್ರಹಿಸಿ ಬಡಾವಣೆಯ ನಿವಾಸಿಗಳು ಹಾಗೂ ಜೈ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಬಡಾವಣೆಯಲ್ಲಿ ಮದ್ಯದ ಅಂಗಡಿಗಳು ಇರುವುದರಿಂದ ನಿತ್ಯ ಇಲ್ಲಿನ ನಿವಾಸಿಗಳು ಮನೆಯಿಂದ ಹೊರಗೆ ಬರಲು ಕೂಡ ಸಮಸ್ಯೆಯಾಗುತ್ತಿದೆ. ಅಲ್ಲದೇ ಬಡಾವಣೆಯಲ್ಲಿ ದೇವಸ್ಥಾನವಿದೆ. ದೇವರ ದರ್ಶನಕ್ಕೆ ಹೋಗಲು ಕೂಡ ಸಮಸ್ಯೆಯಾಗುತ್ತಿದೆ. ಮದ್ಯದ ಅಂಗಡಿಗಳನ್ನು ಬೇರೆ ಕಡೆಗೆ ಸ್ಥಳಾಂತರಿಸಿ ಎಂದು ತಶೀಲ್ದಾರ, ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಹಲವು ಬಾರಿ ತಿಳಿಸಿದರು ಪ್ರಯೋಜನವಾಗಿಲ್ಲ.
ಈ ಹಿನ್ನೆಯಲ್ಲಿ ಪ್ರತಿಭಟನೆ ಅನಿವಾರ್ಯವಾಗಿದೆ. ಅಧಿಕಾರಿಗಳು ವಾರದಲ್ಲಿ ಬಡಾವಣೆಯಲ್ಲಿನ ಮದ್ಯದ ಅಂಗಡಿಗಳನ್ನು ತೆರವುಗೊಳಿಸದಿದ್ದರೆ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ವೇದಿಕೆಯ ತಾಲೂಕು ಅಧ್ಯಕ್ಷರ ಶರಣಪ್ಪ ಪಾಟೀಲ ಹೇಳಿದರು.
ಪಟ್ಟಣದಲ್ಲಿ ಸರ್ಕಾರಿ ನಿಯಮಗಳನ್ನುಗಾಳಿಗೆ ತೂರಿ ಮದ್ಯದ ಅಂಗಡಿಗಳು ದೇವಸ್ಥಾನ ಹಾಗೂ ಬಸ್ ನಿಲ್ದಾಣದ ಸುತ್ತ ತಲೆ ಎತ್ತಿವೆ. ಸಬ್ಬಂಧಪಟ್ಟ ಇಲಾಖೆ ಅಧಿಕಾರಿಗಳು ನೋಡಿ ಸುಮ್ಮನೇ ಕುಳಿತಿರುವುದು ಹಲವು ಸಂಶಯಗಳಿಗೆ ಎಡೆ
ಮಾಡಿದೆ ಎಂದು ಮುಖಂಡ ಅನೀಲ ನಿರ್ಮಳೆ ಆರೋಪಿಸಿದರು. ರಮೇಶ ಮುಳೆ, ಸಿದ್ದು ನಿರ್ಮಳೆ ಹಾಗೂ ಬಡಾವಣೆಯ ನಿವಾಸಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.