Advertisement

ದೇವಾಲಯದ ಬೀಗ ತೆರವಿಗೆ ಆಗ್ರಹ

02:27 PM Oct 18, 2018 | |

ಭದ್ರಾವತಿ: ಬಿಳಕಿ ಗ್ರಾಮದಲ್ಲಿ ನಿರ್ಮಿಸಿರುವ ಈಶ್ವರ ಬಸವಣ್ಣ ಮತ್ತು ರೇಣುಕಾದೇವಿ ವಿಗ್ರಹ ಇರುವ ದೇವಾಲಯದ ಬೀಗ ತೆರೆದು ಪೂಜೆಗೆ ಅನುವು ಮಾಡಿಕೊಡುವಂತೆ ಆಗ್ರಹಿಸಿ ಬುಧವಾರ ಸಂಜೆ ಮಾಜಿ ಶಾಸಕ ಎಂ.ಜೆ. ಅಪ್ಪಾಜಿ ನೇತೃತ್ವದಲ್ಲಿ ಬಿಳಕಿ ಗ್ರಾಮದ ಮರಾಠ ಜನಾಂಗದವರು ತಾಲೂಕು ಕಚೇರಿ ಮುಂದೆ ದಿಢೀರ್‌ ಸತ್ಯಾಗ್ರಹ ಆರಂಭಿಸಿದರು.

Advertisement

ಈ ಕುರಿತಂತೆ ಪತ್ರಿಕೆಯೊಂದಿಗೆ ಮಾತನಾಡಿದ ಮಾಜಿ ಶಾಸಕ ಎಂ.ಜೆ. ಅಪ್ಪಾಜಿ, ಬಿಳಕಿ ಗ್ರಾಮದಲ್ಲಿ ಕಟ್ಟಲ್ಪಟ್ಟಿರುವ ಈಶ್ವರ ಬಸವಣ್ಣ ಮತ್ತು ರೇಣುಕಾ ದೇವಿಯ ದೇವಾಲಯ ಮರಾಠಾ ಜನಾಂಗದವರು ನಿರ್ಮಿಸಿರುವ ದೇವಸ್ಥಾನವಾಗಿದ್ದು, ಇಲ್ಲಿ ಬಸವಣ್ಣನ ಜೊತೆ ರೇಣುಕಾದೇವಿಯ ಪೂಜೆ ಆಗಬಾರದು ಎಂದು ಆ ಗ್ರಾಮದ ಹಲವರು ವಿನಾಕಾರಣ ತಗಾದೆ ತೆಗೆದ ಕಾರಣ ದೇವಾಲಯವನ್ನು ತಾಲೂಕು ದಂಡಾಧಿಕಾರಿಗಳು ವಶಕ್ಕೆ
ಪಡೆದಿದ್ದರು. ದೇವಾಲಯದಲ್ಲಿ ಇಲಾಖೆ ವತಿಯಿಂದಲೇ ಪೂಜೆ ಮಾಡಿಸುವಂತೆ ಸೂಚಿಸಲಾಗಿತ್ತು. ಈ ಬಗ್ಗೆ ಜಿಲ್ಲಾ ಉಪವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರರಿಗೆ ದೂರನ್ನು ಸಹ ಸಲ್ಲಿಸಲಾಗಿತ್ತು. ದೇವಾಲಯದ ಬೀಗ ತೆರೆದು ಪೂಜೆ ಮಾಡಬೇಕೆಂದು ಆದೇಶವಿದ್ದರೂ ಸಹ ಈವರೆಗೂ ದೇವಾಲಯದಲ್ಲಿ ಪೂಜೆಗೆ ಯಾವುದೇ ವ್ಯವಸ್ಥೆ ಮಾಡಿಲ್ಲ ಎಂದರು.

ತಹಶೀಲ್ದಾರ್‌ ಎಂ.ಆರ್‌. ನಾಗರಾಜ್‌, ವ್ಯವಸ್ಥೆ ಮಾಡದೇ ಹಾಲಿ ಶಾಸಕರ ಕೈಗೊಂಬೆಯಂತೆ ವರ್ತಿಸುತ್ತಾ ಇರುವುದನ್ನು ಖಂಡಿಸಿ ಈ ದಿನ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು. 

ಪ್ರತಿಭಟನೆಯಲ್ಲಿ ಜಿಪಂ ಸದಸ್ಯ ಯೋಗೇಶ್‌, ಜಿಪಂ ಮಾಜಿ ಸದಸ್ಯ ಎಸ್‌. ಕುಮಾರ್‌, ಮರಾಠಾ ಮುಖಂಡರಾದ ಲೋಕೇಶ್‌ ರಾವ್‌, ಪರಶುರಾಮ ರಾವ್‌, ಶಿವಾಜಿರಾವ್‌, ಅರ್ಜುನ್‌ರಾವ್‌, ಶಿವಪ್ಪ, ಧರ್ಮರಾವ್‌, ನಗರಸಭಾ ಅಧ್ಯಕ್ಷೆ ಹಾಲಮ್ಮ ಇದ್ದರು.

ದೇವಾಲಯದಲ್ಲಿ ದೇವರ ಪೂಜೆಗೂ ಜಾತಿ-ರಾಜಕೀಯ ಬಣ್ಣ ಈಶ್ವರ ಬಸವಣ್ಣ ದೇವರು ಒಂದು ಜನಾಂಗದವರು ಪೂಜಿಸುವ ದೇವರಾಗಿದೆ. ರೇಣುಕಾದೇವಿ ಮತ್ತೂಂದು ಜನಾಂಗ ಪೂಜಿಸುವ ದೇವರಾಗಿದೆ. ಈ ಎರಡೂ ಜನಾಂಗದ ಹಲವರು ಇಲ್ಲಿನ ಎರಡು ರಾಜಕೀಯ ಶಕ್ತಿಕೇಂದ್ರಗಳಾದ ಹಾಲಿ ಮತ್ತು ಮಾಜಿ ಶಾಸಕರ ಪಾಳಯದಲ್ಲಿ ಗುರುತಿಸಿಕೊಂಡಿದ್ದು ಈ ದೇವಾಲಯದ ಪೂಜೆಗೂ ಈ ರಾಜಕೀಯ ದ್ವೇಷದ ನಂಟು ಬೆಳೆಸುತ್ತಿರುವುದು ಎಷ್ಟು ಸರಿ ಮತ್ತು ತಾಲೂಕು ಆಡಳಿತ ತನ್ನ ವಶಕ್ಕೆ ದೇವಾಲಯವನ್ನು ತೆಗೆದುಕೊಂಡ ಮೇಲೆ ಅದರ ಬೀಗ ತೆಗೆದು ನಿತ್ಯ ಪೂಜೆಗೆ ವ್ಯವಸ್ಥೆ ಮಾಡಬೇಕಾದದ್ದು ಅದರ ಕರ್ತವ್ಯ. ಆದರೆ, ರಾಜಕಾರಣದ ಅಧಿಕಾರಕ್ಕೆ ಮಣಿದು ದೇವಾಲಯದಲ್ಲಿ ಪೂಜೆ ಮಾಡಬೇಕೆಂದು ಮಾಡಿದ ತನ್ನದೇ ಆದೇಶವನ್ನು ಅನುಷ್ಠಾನ ಮಾಡದಿರುವುದು ಎಷ್ಟು ಸರಿ ಎಂಬುದು ಸಾರ್ವಜನಿಕರ ಪ್ರತಿಕ್ರಿಯೆ ಆಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next