ದಾಂಡೇಲಿ: ಕಳೆದ ಹಲವು ವರ್ಷಗಳ ದಾಂಡೇಲಿಗರ ಬಹುಮುಖ್ಯ ಬೇಡಿಕೆಯಾದ ದಾಂಡೇಲಿಯಿಂದ ಹುಬ್ಬಳ್ಳಿವರೆಗೆ ಪ್ರಯಾಣಿಕರ ರೈಲು ಸಂಚಾರ ಪ್ರಾರಂಭಿಸುವ ಬೇಡಿಕೆಗೆ ತ್ವರಿತಗತಿಯಲ್ಲಿ ಸ್ಪಂದಿಸಿ, ಅತೀ ಶೀಘ್ರ ಕ್ರಮಕೈಗೊಳ್ಳಬೇಕು ಹಾಗೂ ಅಂಬೇವಾಡಿ ರೈಲ್ವೆ ನಿಲ್ದಾಣದ ಬದಲು ದಾಂಡೇಲಿ ರೈಲ್ವೆ ನಿಲ್ದಾಣವೆಂದು ಮರು ನಾಮಕರಣ ಮಾಡಬೇಕೆಂದು ಒತ್ತಾಯಿಸಿ ದಾಂಡೇಲಿ ತಾಲೂಕು ಸಮಗ್ರ ಅಭಿವೃದ್ಧಿ ಸಮಿತಿ ಹುಬ್ಬಳ್ಳಿ ರೈಲ್ವೆ ಕಚೇರಿಗೆ ಭೇಟಿ ನೀಡಿ ಡೆಪ್ಯುಟಿ ಜನರಲ್ ಮ್ಯಾನೇಜರ್ ರಾಜೇಶ ಮೋಹನ ಅವರಿಗೆ ಲಿಖೀತ ಮನವಿ ಸಲ್ಲಿಸಿತು.
ದಾಂಡೇಲಿಯಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಮೊಟ್ಟಮೊದಲು ರೈಲು ಸಂಪರ್ಕ ಇತ್ತು. ಆದರೆ ಕೆಲವು ವರ್ಷಗಳ ಹಿಂದೆ ಪ್ರಯಾಣಿಕರ ರೈಲನ್ನು ನಿಲ್ಲಿಸಲಾಯಿತು. ಮೂರ್ನಾಲ್ಕು ವರ್ಷಗಳ ಹಿಂದೆ ಸಂಸದ ಪ್ರಹ್ಲಾದ ಜೋಶಿಯವರ ಪ್ರಯತ್ನದಿಂದ ರೈಲು ಸಂಚಾರ ಪುನರಾರಂಭಕ್ಕೆ ಮರುಜೀವ ಸಿಕ್ಕಂತೆ ಆಯಿತು.
ಈ ಹಿಂದೆ ಅಂಬೇವಾಡಿ ರೈಲು ನಿಲ್ದಾಣದ ಹೆಸರನ್ನು ಮರು ನಾಮಕರಣ ಮಾಡಲು ಜಿಲ್ಲಾಧಿಕಾರಿಗಳ ಮೂಲಕ ದಿ: 27-2-2018 ರಂದು ಹಿಂಬರಹ ಕಳಿಸಿಕೊಟ್ಟಿರುವುದರ ಜೊತೆಗೆ ಅದೇ ಮನವಿ ಪ್ರತಿಯನ್ನು ಭೇಟಿಯಾಗಿ ನೀಡಲಾಗಿತ್ತು. ಅಂಬೇವಾಡಿ ಸಣ್ಣ ಗ್ರಾಮ ಆಗಿದ್ದರಿಂದ ಪ್ರಯಾಣಿಕರಿಗೆ ತೊಂದರೆ ಆಗುತ್ತದೆ. ಅದರ ಬದಲು ದಾಂಡೇಲಿ ಎಂದು ಮರು ನಾಮಕರಣ ಮಾಡಿ ಪ್ರಯಾಣಿಕರ ರೈಲನ್ನು ಶೀಘ್ರ ಪ್ರಾರಂಭಿಸದಿದ್ದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ.
ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಅಕ್ರಂ ಖಾನ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.