ಬಳ್ಳಾರಿ: ಕೇಂದ್ರ ಸರ್ಕಾರಿ ಸ್ವಾಮ್ಯದ ದೋಣಿಮಲೈ ಗಣಿಗಾರಿಕೆಗೆ ಶೇ.80 ರಷ್ಟು ಪ್ರೀಮಿಯಂ ವಿಧಿಸಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ, ಕೂಡಲೇ ಈ ಪದ್ಧತಿ ರದ್ದುಗೊಳಿಸಿ, ಗಣಿಗಾರಿಕೆ ಆರಂಭಕ್ಕೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿ ಎಐಟಿಯುಸಿ, ಐಎನ್‌ಟಿಯುಸಿ ನೇತೃತ್ವದಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರು ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಜಿಲ್ಲೆಯ ಸಂಡೂರು ತಾಲೂಕು ದೋಣಿಮಲೈ ಕಂಪನಿಯಿಂದ ಕಾರ್ಮಿಕರು ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಬಳ್ಳಾರಿ ಚಲೋ ಹಮ್ಮಿಕೊಂಡಿದ್ದು, ನಗರದ ಜೋಳದ ರಾಶಿ ದೊಡ್ಡನಗೌಡ ರಂಗಮಂದಿರ ಬಳಿ ಜಮಾಯಿಸಿ ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ನಂತರ ಜಿಲ್ಲಾಧಿಕಾರಿ ಕಚೇರಿ ಎದುರು ಕೆಲಹೊತ್ತು ಧರಣಿ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಜಿಲ್ಲೆಯ ಸಂಡೂರು ತಾಲೂಕಿನಲ್ಲಿನ ದೋಣಿಮಲೈ ಅದಿರು ಕಂಪನಿಗೆ ಮುಂದಿನ 20 ವರ್ಷಗಳಿಗೆ ಪರವಾನಗಿ ನವೀಕರಣಕ್ಕೆ ಅವಕಾಶ ನೀಡಿರುವ ರಾಜ್ಯ ಸರ್ಕಾರದ ನವೀಕರಣದ ಆದೇಶದಲ್ಲಿ ಹಲವಾರು ಹೊಸ ಹೊಸ ನಿಯಮಗಳನ್ನು ಸೂಚಿಸಿದೆ. ದೋಣಿಮಲೈ ಕಂಪನಿಯು ಪ್ರತಿದಿನ ನಡೆಸುವ ಒಟ್ಟು ವಹಿವಾಟಿನ ಶೇ.80 ರಷ್ಟು ಹಣವನ್ನು ಪ್ರೀಮಿಯಂ ರೂಪದಲ್ಲಿ ಸರ್ಕಾರಕ್ಕೆ ಪಾವತಿಸಬೇಕು ಎಂದು ಸೂಚಿಸಿದೆ. ಇದರಿಂದ ಕಳೆದ 2018 ನವೆಂಬರ್ 4 ರಿಂದ ದೋಣಿಮಲೈ ಕಂಪನಿಯು ಅದಿರು ಉತ್ಪಾದನೆಯನ್ನು ಸ್ಥಗಿತಗೊಳಿಸದೆ.
ಅದಿರು ಮಾರಾಟದಿಂದ ಬರುವ ಆದಾಯ ಅಂದಾಜು 2600 ರೂ.ಗಳಷ್ಟಿದ್ದರೆ, ಸರ್ಕಾರದ ಹೊಸ ನಿಯಮಗಳಂತೆ ರಾಜಧನ, ಇನ್ನಿತರೆ ತೆರಿಗೆ ಮತ್ತು ಪ್ರೀಮಿಯಂ ಹಣ ಸೇರಿಸಿದರೆ 3 ಸಾವಿರ ರೂ.ಗಳಿಗೂ ಅಧಿಕವಾಗುತ್ತದೆ. ಅದಿರಿನಿಂದ ಬರುವ ಆದಾಯಕ್ಕಿಂತ ಸರ್ಕಾರಕ್ಕೆ ಪಾವತಿಸಬೇಕಾದ ಹಣವೇ ಅಧಿಕವಾಗುತ್ತದೆ. ಇದರಿಂದ ಕೇಂದ್ರ ಸರ್ಕಾರಿ ಸ್ವಾಮ್ಯದ ದೋಣಿಮಲೈ ಕಂಪನಿಯನ್ನು ಸಂಪೂರ್ಣವಾಗಿ ಮುಚ್ಚಿ, ಖಾಸಗೀಕರಣಗೊಳಿಸುವ ಹುನ್ನಾರ ಅಡಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ದೋಣಿಮಲೈ ಕಂಪನಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ಹಿಂಪಡೆಯುವಂತೆ ಒತ್ತಾಯಿಸಿ ದೋಣಿಮಲೈ ಕಂಪನಿಯ ಆಡಳಿತ ಮಂಡಳಿಯು ಈಗಾಗಲೇ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಖುದ್ದು ಭೇಟಿಯಾಗಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಕೂಡಲೇ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶವನ್ನು ರದ್ದುಗೊಳಿಸಬೇಕು. ದೋಣಿಮಲೈ ಐರನ್ ಓರ್ ಮೈನ್ಸ್ ಆರಂಭಿಸಲು ಅವಕಾಶ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕಾರ್ಮಿಕ ಸಂಘಟನೆಗಳ ಕಾನೂನು ಸಲಹೆಗಾರ ಎಂ.ಆರ್.ಎಂ.ಇಸ್ಮಾಯಿಲ್, ಡಿಐಒಪಿಇಎ ಪ್ರಧಾನ ಕಾರ್ಯದರ್ಶಿ ಬಿ.ಸೋಮಶೇಖರ್, ಉಪಾಧ್ಯಕ್ಷ ವಿ.ಕರಿಬಸಪ್ಪ, ಪಿ.ವೀರಭದ್ರಪ್ಪ, ಪ್ರಧಾನ ಕಾರ್ಯದರ್ಶಿ ಪಿ.ಭಾಸ್ಕರ್, ಜಂಟಿ ಕಾರ್ಯದರ್ಶಿ ಎಸ್.ಗೋಪಿ, ಮುಖಂಡರಾದ ಟಿ.ಜಿ.ವಿಠuಲ್, ಆದಿಮೂರ್ತಿ, ತಿಪ್ಪೇಸ್ವಾಮಿ, ಗಂಗಾಧರ, ಗುರುಮೂರ್ತಿ, ಸಂಗನಕಲ್ಲು ಕಟ್ಟೆಬಸಪ್ಪ, ಸತ್ಯಬಾಬು ಸೇರಿದಂತೆ ಕಾರ್ಮಿಕರು ಪಾಲ್ಗೊಂಡಿದ್ದರು.
ಬಳ್ಳಾರಿ: ಸಂಡೂರಿನ ದೋಣಿಮಲೈ ಗಣಿಕಂಪನಿಗೆ ರಾಜ್ಯ ಸರ್ಕಾರ ವಿಧಿಸಿರುವ ಪ್ರೀಮಿಯಂ ಪದ್ಧತಿ ರದ್ದುಗೊಳಿಸಬೇಕೆಂದು ಆಗ್ರಹಿಸಿ ಎಐಟಿಯುಸಿ, ಐಎನ್‌ಟಿಯುಸಿ ನೇತೃತ್ವದಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.