ಗದಗ: ಗದಗ-ಬೆಟಗೇರಿ ನಗರಸಭೆ ಮಾಲೀಕತ್ವದಲ್ಲಿ ಅವಳಿ ನಗರದಲ್ಲಿರುವ ವಾಣಿಜ್ಯ ಮಳಿಗೆಗಳನ್ನು ಬಹಿರಂಗ ಹರಾಜು ಮೂಲಕ ವಿತರಣೆ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯಲ್ಲಿ ಸುಮಾರು 320ಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳಿವೆ. ಅವುಗಳನ್ನು 25-30 ವರ್ಷಗಳ ಹಿಂದೆ ಬಹಿರಂಗ ಹರಾಜು ಮೂಲಕ ವಿತರಿಸಲಾಗಿದೆ. ಆನಂತರ ಕಾಲಕಾಲಕ್ಕೆ ಟೆಂಡರ್ ಕರೆಯದೇ, ಲೀಸ್ ಅಥವಾ ಬಾಡಿಗೆಯನ್ನು ಮುಂದುವರಿಸಲಾಗಿದೆ ಎಂದು ದೂರಿದರು.
30 ವರ್ಷದ ಹಿಂದೆ ವಾಣಿಜ್ಯ ಮಳಿಗೆಗಳಿಗೆ 200ರಿಂದ 500 ರೂ. ಬಾಡಿಗೆ ನಿಗದಿಪಡಿಸಿದೆ. ಆದರೆ, ಸದ್ಯ ಮಾರುಕಟ್ಟೆಯಲ್ಲಿ ಮಳಿಗೆಯೊಂದಕ್ಕೆ ಕನಿಷ್ಠ 2000 ರಿಂದ 6000 ರೂ. ಬಾಡಿಗೆ ಇದೆ. ಅಲ್ಲದೇ, 30 ವರ್ಷಗಳ ಹಿಂದೆ ಹರಾಜು ಮೂಲಕ ಮಳಿಗೆ ಪಡೆದವರು, ಅಕ್ರಮವಾಗಿ ಮತ್ತೂಬ್ಬರಿಗೆ ದುಪ್ಪಟ್ಟು ಬೆಲೆಗೆ ಬಾಡಿಗೆ ನೀಡಿ, ಹಣ ಜೇಬಿಗಿಳಿಸುತ್ತಿದ್ದಾರೆ. ಈ ಬಗ್ಗೆ ಸ್ಥಳೀಯ ನಗರಸಭೆ ಅಧಿಕಾರಿಗಳು ಕಂಡೂ ಕಾಣದಂತೆ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಿದರು.
ನಗರಸಭೆ ವಾಣಿಜ್ಯ ಮಳಿಗೆಗಳನ್ನು ಕಾಲಕಾಲಕ್ಕೆ ಟೆಂಡರ್ ಮೂಲಕ ಹಂಚಿಕೆ ಮಾಡಬೇಕು ಎಂದು ಕಾನೂನುಗಳಿದ್ದರೂ ಅಧಿಕಾರಿಗಳು ಅದನ್ನು ಪಾಲಿಸುತ್ತಿಲ್ಲ ಎಂದು ದೂರಿದ ಪ್ರತಿಭಟನಾಕಾರರು, ಈ ಕುರಿತು ಜಿಲ್ಲಾಡಳಿತ ಗಮನ ಹರಿಸಿ ನಗರಸಭೆಯ ಎಲ್ಲ ವಾಣಿಜ್ಯ ಮಳಿಗೆಗಳನ್ನು ಹರಾಜು ಮೂಲಕ ಹಂಚಿಕೆ ಮಾಡಬೇಕು. ಈ ಮೂಲಕ ನವೋದ್ಯಮಿಗಳಿಗೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.
Advertisement
ನಗರದ ಮಹಾತ್ಮಗಾಂಧಿ ವೃತ್ತದಿಂದ ನಗರಸಭೆವರೆಗೆ ಪ್ರತಿಭಟನೆ ನಡೆಸಿ, ವಾಣಿಜ್ಯ ಮಳಿಗೆಗಳ ಹಂಚಿಕೆಯಲ್ಲಿ ಕಾನೂನು ಗಾಳಿಗೆ ತೂರುವ ನಗರಸಭೆ ಹಾಗೂ ಜಿಲ್ಲಾಡಳಿತಕ್ಕೆ ಧಿಕ್ಕಾರ ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
Related Articles
Advertisement
ಅದರೊಂದಿಗೆ ನಗರಸಭೆ ವ್ಯಾಪ್ತಿಯ ಹಲವು ಉದ್ಯಾನಗಳು ನಿರ್ವಹಣೆ ಇಲ್ಲದೇ ಅನೈತಿಕ ಚಟುವಟಿಕೆ ತಾಣಗಳಾಗಿ ಮಾರ್ಪಡುತ್ತಿವೆ. ಈ ಕುರಿತು ನಗರಸಭೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ಕೋರಿ ಪೌರಾಯುಕ್ತರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಕರವೇ ಜಿಲ್ಲಾಧ್ಯಕ್ಷ ಹನುಮಂತ ಎಚ್. ಅಬ್ಬಿಗೇರಿ, ಪದಾಧಿಕಾರಿಗಳಾದ ಶರಣು ಗೋಡಿ, ನಿಂಗನೌಡ ಮಾಲಿಪಾಟೀಲ, ಬಸವರಾಜ ಮೇಟಿ, ಸಿದ್ಧಪ್ಪ ವಡ್ಡರ, ಹನಮಂತ ಪೂಜಾರ, ಶಂಶುದ್ದೀನ್ ಡಂಬಳ, ಶಾಮು ನದಾಫ್, ಲಖನ್ ಸಿಂಗ್ ಗಂಗಾವತಿ, ಆಶಾ ಜೂಲಗುಡ್ಡ, ರತ್ನಮ್ಮ ಯಲಬುರ್ಗಿ, ರತ್ನಮ್ಮ ಕಣಗಿನಹಾಳ, ಗೀತಾ ಕಾಳಗಿ, ಮೇರಿ ಪೂಜಾರ, ನಾಗಪ್ಪ ಅಣ್ಣಿಗೇರಿ ಮತ್ತಿತರರು ಪಾಲ್ಗೊಂಡಿದ್ದರು.