Advertisement

ಈಡೇರಿದ ಕೆಎಫ್‌ಡಿಸಿ ತಾತ್ಕಾಲಿಕ ಹೊರಗುತ್ತಿಗೆ ನೌಕರರ ಬೇಡಿಕೆ

04:23 AM Oct 09, 2019 | Team Udayavani |

ಕೋಟ: ರಾಜ್ಯ ಮೀನುಗಾರಿಕೆ ಅಭಿವೃದ್ಧಿ ನಿಗಮ (ಕೆಎಫ್‌ಡಿಸಿ) ದಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕಾರ್ಮಿಕರ ವೇತನವನ್ನು ಶೇ. 25ರಷ್ಟು ಹೆಚ್ಚಿಸಿ, ನೇರವಾಗಿ ನಿಗಮದಿಂದಲೇ ಪಾವತಿಸುವ ವ್ಯವಸ್ಥೆ ಅನುಷ್ಠಾನಗೊಳಿಸಲು ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆದೇಶ ನೀಡಿದ್ದಾರೆ. ಇದರಿಂದ ವೇತನ ಪರಿಷ್ಕರಣೆ ಮತ್ತು ಮಧ್ಯವರ್ತಿಗಳ ಹಾವಳಿ ತಪ್ಪಿಸಬೇಕು ಎಂಬ ಸಿಬಂದಿಯ ಬಹುಕಾಲದ ಬೇಡಿಕೆ ಈಡೇರಿದೆ.

Advertisement

ಕೆಎಫ್‌ಡಿಸಿಯಲ್ಲಿ ರಾಜ್ಯಾದ್ಯಂತ 146 ಮಂದಿ ಸಿಬಂದಿ ಕಾರ್ಯನಿರ್ವಹಿಸು ತ್ತಿದ್ದಾರೆ. ಇವರ ನೇಮಕವಾಗುತ್ತಿದ್ದದ್ದು ಖಾಸಗಿ ಕಂಪೆನಿಯ ಮೂಲಕ ಗುತ್ತಿಗೆ ಆಧಾರದಲ್ಲಿ. ಇವರಿಗೆ ವೇತನ ಪಾವತಿ ಮತ್ತು ಕೆಲಸದಿಂದ ಕೈಬಿಡುವ ಅಧಿಕಾರವನ್ನು ಮಧ್ಯವರ್ತಿ ಕಂಪೆನಿಯೇ ಹೊಂದಿತ್ತು. ಇದರಿಂದ ಕಾರ್ಮಿಕರಿಗೆ ಸಮಸ್ಯೆಯಾಗುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿದ್ದವು. ಈಗ ನೇರ ವೇತನ ಪಾವತಿ ವ್ಯವಸ್ಥೆ ಜಾರಿಯಾಗಿರುವುದರಿಂದ ವೇತನವು ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ ಕಾರ್ಮಿಕರ ಖಾತೆಗೆ ನೇರ ವರ್ಗಾವಣೆಗೊಳ್ಳಲಿದೆ ಮತ್ತು ಉದ್ಯೋಗ ಭದ್ರತೆಯೂ ದೊರೆತಿದೆ.

ಹಲವು ವರ್ಷಗಳ ಬೇಡಿಕೆ
ನೌಕರರು ಈ ಸಮಸ್ಯೆಯನ್ನು ಪರಿಹರಿಸುವಂತೆ ಹತ್ತಾರು ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಿದ್ದರು ಮತ್ತು ಹಲವು ಬಾರಿ ಸಚಿವರಿಗೆ ಮನವಿ ಸಲ್ಲಿಸಿದ್ದರು. ಈ ಬಾರಿಯೂ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಮನವಿ ನೀಡಿದ್ದಾರೆ. ಪರಿಶೀಲಿಸಿದ ಸಚಿವರು ತತ್‌ಕ್ಷಣ ಶೇ.25ರಷ್ಟು ವೇತನ ಹೆಚ್ಚಳ ಮತ್ತು ನಿಗಮದಿಂದಲೇ ನೇರ ವೇತನ ಪಾವತಿಗೆ ಆದೇಶಿಸಿದ್ದಾರೆ.

ಖುಷಿ ತಂದಿದೆ
ಮಧ್ಯವರ್ತಿಗಳ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದ್ದರಿಂದ ನಮಗೆ ಭದ್ರತೆ ಇರಲಿಲ್ಲ ಮತ್ತು ಹಲವಾರು ಸಮಸ್ಯೆಗಳಿದ್ದವು. ಈಗ ನಮ್ಮ ಬೇಡಿಕೆ ಈಡೇರಿರುವುದು ಖುಷಿ ತಂದಿದೆ, ಮೀನುಗಾರಿಕೆ ಸಚಿವರಿಗೆ ತಾತ್ಕಾಲಿಕ ಕಾರ್ಮಿಕ
ರೆಲ್ಲರ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ.
– ಕೆಎಫ್‌ಡಿಸಿ ತಾತ್ಕಾಲಿಕ ನೌಕರ

ಬೇಡಿಕೆ ಈಡೇರಿಸಲಾಗಿದೆ
ಕೆಎಫ್‌ಡಿಸಿ ಗುತ್ತಿಗೆ ನೌಕರರು ತಮ್ಮ ವೇತನ ಮತ್ತು ಉದ್ಯೋಗ ಭದ್ರತೆಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಿದ್ದರು. ಬೇಡಿಕೆಗಳು ಸಮಂಜಸವಾಗಿರುವುದರಿಂದ ಮಧ್ಯವರ್ತಿಗಳ ಮೂಲಕ ವೇತನ ಪಾವತಿ ವ್ಯವಸ್ಥೆ ರದ್ದುಗೊಳಿಸಿ ನೇರ ಪಾವತಿಗೆ ಮತ್ತು ಶೇ.25ರಷ್ಟು ವೇತನವನ್ನು ಹೆಚ್ಚಿಸಿ ಆದೇಶ ನೀಡಲಾಗಿದೆ.
– ಕೋಟ ಶ್ರೀನಿವಾಸ ಪೂಜಾರಿ, ಮೀನುಗಾರಿಕೆ ಸಚಿವರು

Advertisement

ರಾಜೇಶ್‌ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next